Uncategorized

ತವರಿ ಹೂ ಅರಳಿ ತಂಗಾಳಿ ಬೀಸಿದಂತಾಯ್ತು

This post was written by Hema Khurshapur, editor at Pratham Books.

ಸಂದರ್ಶನದ ಹಿಂದಿನ ಮಿನುಗುನೋಟ…

ಭಾರ್ಗವಿ ಮತ್ತು ನಾನು ಕೆಲಸ ಮಾಡುತ್ತಿದ್ದ ಹಳೇ ಆಫೀಸಿನ ಕಾಂಪೌಂಡಿನಿಂದ ಆಚೆಬಂದು ಎಡಕ್ಕೆ ತಿರುಗಿ, ಚೂರು ಮುಂದೆ ಎರಡನೇ ಬಲಕ್ಕೆ ಹೊರಳಿದರೆ, ‘ಶ್ರೀ ಶಂಕರ’ ನಂ.೩, ನಾಲ್ಕನೇ ಮುಖ್ಯ ರಸ್ತೆ, ಚಾಮರಾಜಪೇಟೆ – ೧೮, ಎಂ ಎಸ್ ಶ್ರೀರಾಮ್ ಅವರ ಮನೆ. ಅಲ್ಲಿದ್ದಷ್ಟು ಕಾಲವೂ ‘ಶನಿವಾರ ಸಂತೆ’ ‘ಅರ್ಥಾರ್ಥ’ದಲ್ಲಿ ಅವರ ಬರೆಹ ಓದಿದ ದಿನ ನಾನು ಮತ್ತು ಭಾರ್ಗವಿ ಎಂ ಎಸ್ ಮನೆ ಇಲ್ಲೇ ಇದೆ… ಹೋಗಿ ಮಾತಾಡ್ಸೇ ಬಿಡೋಣ ಅಂತಂದು ಕೊಳ್ಳುತ್ತಿದ್ದೆವು. ಮಾತಿನಲ್ಲಿದ್ದ ‘ರಣೋತ್ಸಾಹ’ ಕೃತಿಯಲ್ಲಿ ಇದ್ದಿದ್ದರೆ ನಾವು ಇಷ್ಟೊತ್ತಿಗೆ ಏನೇನೋ ಮಾಡಿರುತ್ತಿದ್ದೆವು, ಅದು ಬೇರೆ ವಿಷಯ. 

ತೀರ ಆಕಸ್ಮಿಕವಾಗಿ (ಈವತ್ತಿಗೂ ನಮಗಿಬ್ಬರಿಗೂ ಅನಿಸೋದು, ನಮ್ಮ ಬದುಕಲ್ಲಿ ನಾವು ತೆಗೆದುಕೊಂಡು ಕೆಲವೇ ಕೆಲವು ಸರಿಯಾದ ನಿರ್ಧಾರಗಳಲ್ಲಿ ಇದೂ ಒಂದು) ‘ಪ್ರಥಮ್ ಬುಕ್ಸ್’ಗೆ ಸೇರಿದ್ದು. ಇಲ್ಲಿಗೆ ಸೇರಿದ ನಂತರ ವರ್ಷಕ್ಕೊಮ್ಮೆಯೋ ಎರಡು ಸಲವೋ ಅವರನ್ನು ಭೇಟಿಯಾದಾಗಲೂ ನಮಗೆ ಅವರ ಬರೆವಣಿಗೆ ಬಗ್ಗೆ ಮಾತನಾಡಲು ಆಗಿರಲಿಲ್ಲ.

‘ಕಥನ ಕುತೂಹಲ’ ಓದುವವರೆಗೆ ಶ್ರೀರಾಮ್ ಬ್ಲಾಗ್/ಅಂಕಣ ಬರೆಹ, ಕತೆಗಳ ಮೂಲಕ ಮಾತ್ರ ಪರಿಚಯವಿದ್ದಿದ್ದು. ಆದರೆ, ಈ ಪುಸ್ತಕ ಓದಿದ ಮೇಲೆ ಅನುವಾದಕರಾಗಿಯೂ ಇಷ್ಟವಾದರು. ಭಾಷೆಯ ಜಾಯಮಾನ, ಅನುವಾದ ಮಾಡಲು ಬೇಕಾದ ಮನಸ್ಥಿತಿ, ಪೂರ್ವತಯಾರಿ ಇದೆಲ್ಲದರ ಬಗ್ಗೆ ಅಧ್ಯಯನ ಯೋಗ್ಯ ಕೃತಿ ರಚಿಸಿರುವ ಅವರು ಹೇಳುವುದು, “ನಾನು ಭಾಷೆಗಳನ್ನ ಪಾರಂಪರಿಕವಾಗಿ, ಶಾಸ್ತ್ರೀಯವಾಗಿ ಕಲಿತಿಲ್ಲ,” ಅಂತ! ಆ ಪುಸ್ತಕ ಓದಿದರೆ ಗೊತ್ತಾಗುತ್ತದೆ ಅವರು ಎಷ್ಟು ಶಿಸ್ತಿನಿಂದ ಆ ಪುಸ್ತಕವನ್ನ ಕಟ್ಟಿದ್ದಾರೆಂದು.

ಅದು ಮಿಲನ್ ಕುಂದೆರಾ, ಮಾರ್ಕೆಸ್ ಅಥವಾ ಬೇರೆ ಯಾರದ್ದೇ ಪಠ್ಯ ಇರಬಹುದು… ಮೂಲ ಪಠ್ಯಕ್ಕೆ ಒದಗಿಸಬೇಕಾದ ನ್ಯಾಯದ ಜೊತೆಗೆ ಕನ್ನಡದ ಜಾಯಮಾನಕ್ಕೆ ತಕ್ಕ ಅನುವಾದವನ್ನು ಓದಿದವರಿಗೆ ಮಾತ್ರ ಅದರ ಮಜ ಗೊತ್ತಾಗುತ್ತದೆ. ಓದುಗರ ನಾಡಿಮಿಡಿತ ಹಿಡಿಯುವ ಶ್ರೀರಾಮ್‘ತನ’ ಏನಿದೆಯಲ್ಲ ಅದರು ಅವರಿಗೆ ಮಾತ್ರ ಸಾಧ್ಯ ಆಗಿರುವಂಥದ್ದು. 

ವಾಣಿಜ್ಯ, ವ್ಯವಹಾರ, ಮಾರುಕಟ್ಟೆ… ಸಂಬಂಧಿಸಿದ ವೃತ್ತಿಯಲ್ಲಿದ್ದರೂ ಎಂದೂ ತಮ್ಮ ಅನುವಾದ, ಕತೆ, ಕೃತಿಗಳನ್ನಾಗಲಿ ಮಾರ್ಕೆಟ್ ಮಾಡುವುದಿರುವುದು ಹಾಗೂ ಹಮ್ಮು-ಬಿಮ್ಮು ಇಲ್ಲದ, ಎಲ್ಲರನ್ನೂ ಒಳಗೊಳ್ಳುವ ಗುಣವೇ ಅವರಡೆಗಿನ ನಮ್ಮ ಗೌರವವನ್ನ ಹೆಚ್ಚಿಸುತ್ತದೆ.

ಮೊನ್ನೆ ಅಚಾನಕ್ ಆಗಿ ‘ಅನುವಾದನ್ನು ಸಂಭ್ರಮಿಸೋಣ’ ಸರಣಿ ಪ್ರಾರಂಭಿಸುವ ಯೋಚನೆ, ಶುರು ಮಾಡೇಬಿಡುವ ಸಂದರ್ಭವೂ ತಿದಿಯೊತ್ತಿತು. ಯಾರಿಂದ ಶುರು ಮಾಡುವುದು ಎನ್ನುವ ಗೊಂದಲವೇ ಇರಲಿಲ್ಲ. ನಮ್ಮಿಬ್ಬರಿಗೂ ಸ್ಪಷ್ಟವಿತ್ತು, ಪ್ರಾರಂಭ ಎಂ ಎಸ್ ಶ್ರೀರಾಮ್ ಅವರಿಂದಲೇ ಅಂತ. 

ಹೀಗ್ಹೀಗೆ ನಾವು ಒಂದು ಸರಣಿ ಶುರು ಮಾಡಲಿದ್ದೇವೆ, ನೀವು ಒಪ್ಪಿದರೆ ನಮ್ಮ ಬ್ಲಾಗಿಗೆ ಸಂದರ್ಶನ ಮಾಡ್ತೀವಿ ಎಂದು ತುತ್ತೂರಿ ಊದಲು ಪೀಪಿ ಸರಿಮಾಡಿಕೊಳ್ಳುತ್ತಿದ್ದೆವಷ್ಟೇ (ಮನಸ್ಸಲ್ಲಿ ಅವರು “ಹೂಂ…” ಅನ್ನಲ್ಲಿಕ್ಕಿಲ್ಲ ಎನ್ನುವ ಬಲವಾದ ನಂಬಿಕೆ). ಆದರೆ, ಅವರು ಒಪ್ಪಿದರು.

ವೃತ್ತಿಯಲ್ಲಿ, ಸಾಧನೆಯಲ್ಲಿ ನಮಗಿಂತ ದೊಡ್ಡವರಿಗೆ; ವಾಟ್ಸ್ಯಾಪ್ ಚಾಟಿನಲ್ಲಿ ಕರೆದು, ರಿಪ್ಲೈ ಮಾಡಿಸಿಕೊಂಡಷ್ಟು ಹೊತ್ತು Literally ನನ್ನ ಮನಸ್ಸಿನಲ್ಲಿ ಸುಳಿಯುವುದು; Tom and Jerry ಕಾರ್ಟೂನಿನಲ್ಲಿ – ತನ್ನ ಪುಟ್ಟ ಗೂಡಿನ ಬಾಗಿಲಲ್ಲಿ ವಾರೆಯಾಗಿ ನಿಂತು, ಶಿಳ್ಳೆ ಹೊಡೆದು Tomನ ಗಮನ ಸೆಳೆಯುವ Jerryಯ ಹುಡುಗುತನದ ಚಿತ್ರ! ಚಿಕ್ಕವರನ್ನ ಕಡೆಗಣಿಸದೆ, ‘ಏನ್ತಾಯಿ ನಿನ್ನ ಗೋಳು, ಹೇಳು’ ಅಂತ ಸಹನೆಯಿಂದ ಕೇಳಿಸಿಕೊಳ್ಳುವ ದೊಡ್ಡವರ ನಡೆಗೆ ವಂದೇ. 

ಸಂದರ್ಶನಕ್ಕೆ ಬೇಕಾದ ಪೂರ್ವತಯಾರಿ ಮಾಡಿಕೊಂಡು, ಯಾವ ದಿನ, ಎಷ್ಟೋತ್ತಿಗೆ ಕರೆ ಮಾಡಲಿ ಎಂದು ಒಂದು ಇಳಿಸಂಜೆ ಮೆಸೇಜ್ ಮಾಡಿದರೆ, ಅವರು ತುಂಬಾ ಸರಳವಾಗಿ You give me slots. I’ll pick ಎಂದರು. ಅವರು ನಿಂತರೂ, ಕೂತರೂ ಸಂದರ್ಶನ ಸಂದರ್ಶನ ಎಂದು ಒಂದೇ ಶೃತಿಯಲ್ಲಿ ಏಕತಾರಿ ಮೀಟುವುದನ್ನ ಸಹಿಸಲಾರದೆ ಒಂದು ಮಧ್ಯಾಹ್ನ; ಈ ದಿನ, ಈ ಹೊತ್ತು ಸಂದರ್ಶನ ‘ಘಟಿಸಬಹುದೇ’ ಎಂದರು. ನಾವಿಬ್ಬರೂ ಒಂದೇ ಉಸಿರಲ್ಲಿ ಆಫೀಸಿನಲ್ಲಿ ಸ್ವಲ್ಪ ಖಾಲಿ ಇರುವ ಜಾಗ ಹುಡುಕಿ, ಪ್ರತಿಷ್ಠಾಪಿತಗೊಂಡೆವು.   

ಎಂ ಎಸ್ ಶ್ರೀರಾಮ್ ಐಐಎಂ ಕ್ಯಾಂಪಸ್ಸಿನಲ್ಲಿ ‘ವಾಕ್ ಸ್ವಾತಂತ್ರ್ಯ’ ಅನುಭವಿಸುತ್ತ; ‘ಗಿರಣಿ ಕರೆಯೊ ಹಾಂಗ ಕರೆಯುತ್ತಿರುವ’ ಪಕ್ಷಿಯಿಂದ ತಪ್ಪಿಸಿಕೊಳ್ಳುತ್ತ, ಕಟ್ಟಡ ಕಟ್ಟುತ್ತಿರುವ ಜಾಗದಲ್ಲಿ ಆಗುತ್ತಿರುವ ಶಬ್ದಮಾಲಿನ್ಯದಿಂದ ನುಣುಚಿಕೊಳ್ಳುತ್ತ… ಕಾರಿನಲ್ಲಿ ಕೂತಾಗ ಸರಿಯಾಗಿ ಕೇಳ್ತಿಲ್ಲ ಎನ್ನುವ ನಮ್ಮ ವರಾತಕ್ಕೆ ಅವರು ಮತ್ತೆ ಬಯಲಿಗೆ ಜಿಗಿದಾಗ… ಸಂದರ್ಶನ ಒಂದು ಸುತ್ತಾ(ಸ್ತಾ)ಗಿತ್ತು.

ಅವರು ಹಿಂದೊಮ್ಮೆ ಬರೆದಿದ್ದರು; ಮುಂಬಯಿ ಏರ್ಪೋಟಿನಿಂದ ಚಿತ್ತಾಲರ ಮನೆಗೆ ಫೋನ್ ಮಾಡಿ, ಆ ಕಡೆಯಿಂದ ಅವರು ಹಲೋ ಅನ್ನೋವರೆಗೆ ರಿಸೀವರ್ ಹಿಡಿದ ಇವರೊಳಗಿನ ಪುಳಕದ ಬಗ್ಗೆ. ಫೋನಿನಲ್ಲಿ ಅವರನ್ನು ಮಾತನಾಡಿಸುತ್ತಿರುವಷ್ಟು ಹೊತ್ತು ಇಂಥದ್ದೇ ಪುಲಕವೊಂದು ನಮ್ಮೊಳಗಿತ್ತು.

ಸಂದರ್ಶನ ಶುರು ಮಾಡುವ ಮೊದಲು: 

ನಾವೆಲ್ಲ ನಿಮ್ಮ ಪರಿಚಯ ಮಾಡೋವಾಗ ಶ್ರೀರಾಮ್ ಅರ್ಥಶಾಸ್ತ್ರಜ್ಞರು ಅನ್ನೋ ರೀತಿಯಲ್ಲಿ ಪರಿಚಯಸ್ತಿವಿ. ನೀವು ನನಗೇ ಒಂದ್ಸಲ ಹೇಳಿದ್ರಿ; ನಾನು ಅರ್ಥಶಾಸ್ತ್ರಜ್ಞ (Economist) ಅಲ್ಲ, ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದವ ಅಂತ. ಇವೆರಡರ ನಡುವಿನ ವ್ಯತ್ಯಾಸವನ್ನ ವಿವರಿಸ್ತೀರಾ? ಮಕ್ಕಳಿಗೆ ಅರ್ಥವಾಗುವ ಹಾಗೆ! ಎಂದು ಕೇಳಿದೆ.

ಅವರು ನಗುತ್ತ – ಅರ್ಥಶಾಸ್ತ್ರ ಎನ್ನುವುದು ವಿಸ್ತಾರವಾದ ಕ್ಷೇತ್ರ. ಅದರಲ್ಲಿ ದೇಶದ ಆರ್ಥಿಕತೆ, ಹಣದುಬ್ಬರ, ಬೆಲೆ ಏರಿಕೆ, ವಿದೇಶಿ ವಿನಿಮಯ… ಈ ಥರದ್ದೆಲ್ಲ ಇರತ್ತೆ. ನನ್ನ ಕೆಲಸ ಏನಿದೆಯಲ್ಲ ಅದು ಹೆಚ್ಚು ಕಮ್ಮಿ ವಾಣಿಜ್ಯಕ್ಕೆ ಸಂಬಂಧಿಸಿದ್ದು.  ಅಂದ್ರೆ, ಬ್ಯಾಂಕಿಂಗ್, ಸಾಲ ಕೊಡುವುದು, ವಾಪಸ್ ತಗೊಳ್ಳೋದು, ಕೃಷಿ ಕ್ಷೇತ್ರದ ಆರ್ಥಿಕತೆ ಈ ಥರದ ಕೆಲವೇ ಕ್ಷೇತ್ರಗಳಲ್ಲಿ ನಾನು ಕೆಲಸ ಮಾಡಿದೀನಿ. ಅರ್ಥಶಾಸ್ತ್ರಜ್ಞ ಅಂದ್ರೆ ಬೆಲೆ ಏರಿಕೆ ಬಗ್ಗೆ ನನಗೆ ಅಧಿಕಾರಯುತವಾಗಿ ಟಿಪ್ಪಣಿ ಮಾಡಲು ಬರಲ್ಲ. ವಿಷಯಜ್ಞಾನಕ್ಕೆ ಸಂಬಂಧಿಸಿದ ಹಾಗೆ ತಕ್ಕಮಟ್ಟಿಗೆ ಓದ್ಕೊಂಡಿದಿನಿ. ಇಂಗ್ಲಿಷಿನಲ್ಲಿ ಎಕನಾಮಿಕ್ ಅಂದ್ರೆ ಒಂದು ಅರ್ಥಶಾಸ್ತ್ರ ಇನ್ನೊಂದು ಫೈನಾನ್ಸ್. ಈ ಫೈನಾನ್ಸ್ ಏನಿದೆಯಲ್ಲಿ ಇದು ಎಕನಾಮಿಕ್ಸ್ ನ ಪುಟ್ಟ ಮರಿಮಗ. ಇದು ಎಕನಾಮಿಕ್ಸ್ ನ ದೊಡ್ಡ ಕ್ಯಾನ್ವಾಸಿನಲ್ಲಿ ಡಿಟೇಲಾಗಿ ಕೆಲಸ ಮಾಡುವ ಒಂದು ಸಣ್ಣಕ್ಷೇತ್ರ. ಕಾರ್ಪೋರೆಟ್ ವಲಯ ಫೈನಾನ್ಸ್ ನಲ್ಲೇ ಬರುತ್ತೆ. ನಾನು ಈ ವಲಯದಲ್ಲಿ ಹೆಚ್ಚು ಕೆಲಸ ಮಾಡಲ್ಲ. ಇದರಲ್ಲಿ ನಾವು ಕಾರ್ಪೋರೆಟ್ ಕ್ಷೇತ್ರದ ಆರ್ಥಿಕತೆ ಬಗ್ಗೆ ಮಾತಾಡ್ತೀವಿ, ಆದರೆ, ದೇಶದ, ಸರ್ಕಾರದ ಆರ್ಥಿಕತೆಯ ಬಗ್ಗೆ ಅಷ್ಟು ಹೆಚ್ಚಾಗಿ ಮಾತಾಡಲ್ಲ. ಇದಕ್ಕೊಂದು ಸರಿಯಾದ ಉದಾಹರಣೆ ಅಂದ್ರೆ; ಸಾಹಿತ್ಯದ ಅಷ್ಟೂ ಕ್ಷೇತ್ರದಲ್ಲಿ ಕೆಲಸ ಮಾಡದ ಕವಿ, ಕತೆಗಾರನನ್ನ ಸಾಹಿತಿ ಎಂದು ಕರೆದ ಹಾಗೆ! ಕೆ ವಿ ತಿರುಮಲೇಶ್ ಅಂಥವರನ್ನ ಸಾಹಿತಿ ಎಂದು ಕರೆಯಬಹುದು, ನನ್ನಂಥವರನ್ನ ಕತೆಗಾರ ಅಂತ ಕರೆಯುವುದು ಸೂಕ್ತ.

ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಕನ್ನಡ, ಇಂಗ್ಲಿಷ್

ಸಂದರ್ಶನದ ಕೊನೆಗೆ: Rapid roundನಲ್ಲಿ “Wonderful… ಯಾವುದಕ್ಕೆ ಹೇಳ್ತೀರಿ ಎಂದು ಕೇಳಿದೆ. ಅವರು ಮನಸ್ಫೂರ್ತಿಯಾಗಿ ನಗುತ್ತ, ಈ ಕ್ಷಣ,   ಸಂದರ್ಶನಕ್ಕೆ,” ಎಂದಿದ್ದು ಕೇಳಿ; ಫ್ಯಾನ್ ಹಾಕಿಕೊಂಡ್ರೆ ಆ ಕಡೆಯಿಂದ ಮಾತಾಡಿದ್ದು ಸರಿಯಾಗಿ ಕೇಳಿಸುವುದಿಲ್ಲ ಎಂದು, ನಮ್ಮಾಫೀಸಿನ ಎರಡನೇ ಮಹಡಿಯ ಸೆಕೆಯಲ್ಲಿ ಲೇಸಾಗಿ ಕೂತವರಿಗೆ ತವರಿ ಹೂ ಅರಳಿ ತಂಗಾಳಿ ಬೀಸಿದಂತಾಯ್ತು… Thank You Sriram!

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here