Uncategorized

ಅನುವಾದ ಎನ್ನುವುದು ಧ್ಯಾನ ಮತ್ತು ಮರುಸೃಷ್ಟಿಯ ಕೆಲಸ: ಎಂ ಎಸ್ ಶ್ರೀರಾಮ್

ಮೊನ್ನೆ ನಮ್ಮ ಪ್ರಥಮ್ ಬುಕ್ಸ್Celebrating Translation ಸಾಲನ್ನ ಹೇಗೆ ಅನುವಾದಿಸಿದರೆ ಚೆಂದವೆಂದು ಯೋಚಿಸುತ್ತಿದ್ದಾಗ, ಹೊಳೆದಿದ್ದು ‘ಅನುವಾದವನ್ನ ಸಂಭ್ರಮಿಸೋಣ’ ಸಾಲು. ಇದಕ್ಕೆ ಪೂರಕವಾಗಿ ಏನಾದ್ರೂ ಮಾಡಬೇಕಲ್ಲ ಎಂದು ಯೋಚಿಸುತ್ತಿದ್ದಾಗ, ನಾನು ಏನೋ ಮಾಹಿತಿ ಕೇಳಿ ಮಾಡಿದ್ದ ಟೆಕ್ಸ್ಟಿಗೆ ಎಂ ಎಸ್ ಶ್ರೀರಾಮ್ ಅವರ ರಿಪ್ಲೈ ಬಂದಿತು. ನಾನು ಕೂಡಲೇ, ನೀವು ಹೂಂ ಅಂದ್ರೆ ಪ್ರಥಮ್ ಬುಕ್ಸ್ ಬ್ಲಾಗಿಗೆ ನಿಮ್ಮದೊಂದು ಸಂದರ್ಶನ ಮಾಡ್ತಿನಿ,ಎಂದು ವಾಟ್ಸ್ಯಾಪ್ ಮಾಡಿದೆ, ಒಕೆಅನ್ನಲ್ಲಿಕ್ಕಿಲ್ಲ ಅನ್ನೋ ಗಾಢ ವಿಶ್ವಾಸದಲ್ಲಿ (ಪಿಬಿ ಶೈಲಿಯಲ್ಲಿ Just jump in!). ಅಚ್ಚರಿ ಎನ್ನುವಂತೆ ಅವರು ಹೂಂ…” ಎಂದರು. ಮುಂದಿನದು ಇಲ್ಲಿದೆ. 

ಮಕ್ಕಳಿಗೆ ಮಾತೃಭಾಷೆಯಲ್ಲೇ ಓದಲು ಪುಸ್ತಕಗಳು ಸಿಗಬೇಕು ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡುತ್ತಿರುವ ಪ್ರಥಮ್ ಬುಕ್ಸ್ ಮತ್ತು ಸ್ಟೋರಿವೀವರ್‌ಗೆ ‘ಅನುವಾದ’ ಎನ್ನುವುದು ಜೀವಾಳ. ಹಾಗಾಗಿ ಈ ಸಂದರ್ಶನ ಅನುವಾದದ ಸಾಧ್ಯಾಸಾಧ್ಯತೆ, ಮಿತಿ-ವ್ಯಾಪ್ತಿ, ಆಳ-ಅಗಲದ ಸುತ್ತಲೇ ಸುಳಿಸುಳಿದು ಸುತ್ತಿದೆ. ಈ ಸಂದರ್ಶನ ಮಾಡಿದ್ದು ಪ್ರಥಮ್ ಬುಕ್ಸ್ನ ಕನ್ನಡ ವಿಭಾಗದ ಸಂಪಾದಕಿ ಹೇಮಾ ಖುರ್ಸಾಪೂರ.

ಅನುವಾದದ ಬಗ್ಗೆ

ತೆಲುಗು, ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ, ಕನ್ನಡದಲ್ಲಿ ಸಾಹಿತ್ಯ ಕೃಷಿ… ಮೂರೂ ಭಾಷೆಗಳಲ್ಲಿ ಸಮಪ್ರಮಾಣದ ಹಿಡಿತ ದಕ್ಕಿದ್ದು ಹೇಗೆ?

ನನಗೆ ಯಾವ ಭಾಷೆಯ ಮೇಲೂ ಸಂಪೂರ್ಣ ಹಿಡಿತವಿಲ್ಲ ಅನ್ನೋದನ್ನ ನೆನಪಿಡೋಣ. ತೆಲುಗು, ಇಂಗ್ಲಿಷಿನಿಂದ ಕನ್ನಡಕ್ಕೆ ತರುತ್ತೇನೆ, ಕನ್ನಡದಿಂದ ತೆಲುಗಿಗೆ ಅನುವಾದಿಸಲಾರೆ. ಈ ಮೂರೂ ಭಾಷೆಗಳನ್ನ ನಾನು ಶಾಸ್ತ್ರೀಯವಾಗಿ ಕಲಿತಿಲ್ಲ. ವ್ಯಾಕರಣ, ಸಿಂಟ್ಯಾಕ್ಸ್… ಥರದ್ದರಲ್ಲಿ ಇರಬೇಕಾದ ತರಬೇತಿ, ಪರಿಣತಿಯಿಲ್ಲ. ಎಲ್ಲ ವಿಷಯಗಳನ್ನು ಇಂಗ್ಲಿಷ್ ಮಾಧ್ಯಮದಲ್ಲೇ ಓದಿದ್ದರಿಂದ ಅದರಲ್ಲಿ ಒಂದು ಮಟ್ಟದ ಹಿಡಿತವಿದೆ ಅನ್ನಬಹುದು… ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇತ್ತಾದ್ದರಿಂದ ಓದುತ್ತಾ, ಕೇಳಿಸಿಕೊಳ್ಳುತ್ತಾ, ಕನ್ನಡ ಮೇಷ್ಟ್ರುಗಳ ಒಡನಾಟದಲ್ಲಿ ಕಲಿತೆ. ಕಾಲೇಜಿನ ದಿನಗಳಿಂದಲೇ ಎರಡೂ ಭಾಷೆಗಳಲ್ಲಿ ಬರೆಯುತ್ತಿದ್ದೇನೆ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಲೇಖನ ಹಾಗೂ ಸಂಶೋಧನಾ ಪ್ರಬಂಧಗಳನ್ನು ಇಂಗ್ಲಿಷಿನಲ್ಲಿ ಬರೆಯುತ್ತಿದ್ದೇನೆ. ಸಾಹಿತ್ಯಕ್ಕೆ ಕನ್ನಡವೇ ಒಗ್ಗಿ ಬಂತು. ಪ್ರಬಂಧ, ಕತೆ ಮತ್ತು ಇತ್ತೀಚಿಗೆ ಕಾದಂಬರಿಯನ್ನೂ ಬರೆದಿದ್ದೇನೆ. ಹರಟೆ, ಹಾಸ್ಯ ಬರೆಯುವ ಪ್ರಯತ್ನ ಮಾಡಿದ್ದೇನೆ.. ಒಂದಾನೊಂದು ಕಾಲದಲ್ಲಿ ಕವಿತೆ ಬರೆಯಲೂ ಪ್ರಯತ್ನಿಸಿದ್ದೆ! 

ನಾವುಗಳು ಬರೆಯುವಾಗ ಎರಡು ಒತ್ತಡಗಳಿರುತ್ತವೆ. ಒಂದು: ಓರಗೆಯವರ ಮಧ್ಯೆ ನಾವು ಹೇಗೆ ಭಿನ್ನವಾಗಿ ಕಾಣಸ್ತೀವಿ ಅನ್ನೋ ಆಸಕ್ತಿ. ಅದಕ್ಕಾಗಿ ಸಮಕಾಲೀನ ಸಾಹಿತಿಗಳ ಬರೆವಣಿಗೆ ಓದ್ತೀವಿ. ಇನ್ನೊಂದು: ಹಿರಿಯರು ಹೇಗೆ ಬರೆದಿದ್ದಾರೆ, ನಿಭಾಯಿಸಿದ್ದಾರೆ ಎನ್ನುವ ಆಸಕ್ತಿ. ಹೀಗಾಗಿ ಹಿರಿಯರ ಸಾಹಿತ್ಯವನ್ನು ಓದ್ತೀವಿ. ಬರೆಯುವುದರಿಂದ ನನ್ನ ಓದೂ ಹೆಚ್ಚಾಯಿತು. ಅದೇ ಒಂದು ರೀತಿಯ ತರಬೇತಿಯನ್ನೂ ಕೊಟ್ಟಿತು. ನನ್ನ ಮತ್ತು ತೆಲುಗಿನ ನಂಟು ವಿಚಿತ್ರದ್ದು; ನನ್ನ ಬಾಲ್ಯ ಮತ್ತು ಟೀನೇಜಿನ ಕಾಲಕ್ಕೆ ಕರ್ನಾಟಕದಲ್ಲಿಯೇ ಇದ್ದದ್ದರಿಂದ, ಐದು ತಲೆಮಾರಿನಿಂದ ಬೆಂಗಳೂರಿನಲ್ಲೇ ಬೇರುಬಿಟ್ಟ ಸಂಸಾರದಲ್ಲಿ ಇದ್ದದ್ದರಿಂದ ಮಾತೃಭಾಷೆ ತೆಲುಗಾದರೂ ಅದು ಸಂಪೂರ್ಣ ಅಪಭ್ರಂಶಗೊಂಡಿದೆ! ಮನೆಯಲ್ಲಿ ಮಾತನಾಡುವ ತೆಲುಗಿನಲ್ಲಿ ಕನ್ನಡ ಪದಗಳೇ ಜಾಸ್ತಿ. ಆದರೆ, ನಮ್ಮಮ್ಮ ನೆಲ್ಲೂರಿನವಳು. ಆಕೆಯ ತೆಲುಗು ತುಂಬಾ ಚೆನ್ನಾಗಿತ್ತು. ಬೆಂಗಳೂರಿನಲ್ಲಿನ ಸಂಬಂಧಿಕರಿಗೆ ಹೋಲಿಸಿದರೆ ಅಮ್ಮ ಸ್ವಲ್ಪ ಬೇರೆ ರೀತಿಯಾದ ತೆಲುಗು ಮಾತಾಡ್ತಿದ್ರು. 

ಇದಕ್ಕಿಂತ ಹೆಚ್ಚಿನ ಸಹಾಯವಾಗಿದ್ದು ನನ್ನ ಮೊದಲ ಕೆಲಸದ ಸಂದರ್ಭದಲ್ಲಿ. ನಾನು ಹೈದರಾಬಾದಿನ ಒಂದು ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿದ್ದವರೆಲ್ಲ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯವರು. ಕೋಸ್ಟಲ್ ಆಂಧ್ರಾದ ತೆಲುಗು ಹೆಚ್ಚು ಶುದ್ಧ ಅನ್ನೋ ಭಾವನೆ ಪ್ರಚಲಿತವಿದೆ. ಅವರುಗಳಿಗೆ ಆ ಭಾಷೆಯ ಬಗ್ಗೆ, ಗೌರವ, ಗರ್ವ, ಜಂಭವೂ ಇರ್ತಿತ್ತು! ಅಲ್ಲಿ ಸಹಕಾರ ಸಂಘಗಳ ಜತೆ ಕೆಲಸ ಮಾಡ್ತಾ ಇದ್ದಿದ್ರಿಂದ ತೆಲುಗು ಮಾಧ್ಯಮದಲ್ಲೇ ತರಬೇತಿ ಮಾಡಬೇಕಾಗ್ತಿತ್ತು. ಹಾಗಾಗಿ ಓದುವುದು, ಕೇಳುವುದು, ಸ್ವಲ್ಪ ಮಟ್ಟಿಗಿನ ಬರೆಹ, ಸಿನಿಮಾ ನೋಡೋದು… ಇವೆಲ್ಲದರಿಂದ ನನ್ನ ತೆಲುಗು ಸುಧಾರಿಸಿತು. ಕನ್ನಡ ಮತ್ತು ತೆಲುಗು ಅಕ್ಷರಗಳು ಹೆಚ್ಚೂ ಕಡಿಮೆ ಒಂದೇ ರೀತಿ ಇರೋದ್ರಿಂದ ಓದೋದಕ್ಕೆ ತೊಂದ್ರೆ ಆಗಲಿಲ್ಲ; ಓದೋಕೆ ಪ್ರಾರಂಭಿಸಿದ ಮೇಲೆ ಇಷ್ಟವೂ ಆಯ್ತು. 

ನನಗೆ ತೆಲುಗಿಗಿಂತ ಕನ್ನಡದ ಮೇಲಿನ ಹಿಡಿತ ಹೆಚ್ಚಿರುವುದರಿಂದ, ತೆಲುಗಿಗಿನಿಂದ ಕನ್ನಡಕ್ಕೆ ಅನುವಾದಿಸ್ತೀನಿ. ಆದರೆ, ಕನ್ನಡದಿಂದ ತೆಲುಗಿಗೆ ಅನುವಾದ ಮಾಡುವ ಸಾಹಸ ಮಾಡಲಾರೆ! ಅದಕ್ಕೆ ತಕ್ಕ ಭಾಷಾ ಪ್ರಾವೀಣ್ಯ ನನ್ನಲ್ಲಿಲ್ಲ.

ಅನುವಾದ ಭಾವಾನುವಾದವೋ, ಸಂಗ್ರಹಾನುವಾದವೋ ಆಗುವ ಬದಲು ಮೂಲಕೃತಿಗೆ ನಿಷ್ಠ ಆಗಿರಬೇಕು ಎನ್ನುತ್ತೀರಲ್ಲ?

ಹೌದ್ಹೌದು… ಈ ನಿಯಮವನ್ನು ನಮಗೇ ನಾವು ಹಾಕಿಕೊಳ್ಳುವುದು ಸ್ವಲ್ಪ ಕಷ್ಟದ ವಿಷಯವಾದ್ರೂ, ಹಾಕಿಕೊಳ್ಳಬೇಕು ಮತ್ತು ನಿಷ್ಠವಾಗಿರಲೇಬೇಕು. ಅನುವಾದದಲ್ಲಿ ಬೇರೊಬ್ಬರ ವಿಚಾರವನ್ನ ನಮ್ಮ ಭಾಷೆಯಲ್ಲಿ ಪ್ರಸ್ತುತ ಪಡಿಸೋದ್ರಿಂದ ಆ ವಿಚಾರ ಏನು ಅನ್ನೋದು ಇಲ್ಲಿ ಮುಖ್ಯವಾಗುತ್ತದೆ. ಸಂಗ್ರಹಾನುವಾದ, ಭಾವಾನುವಾದ ತಪ್ಪೂಂತ ಹೇಳ್ತಿಲ್ಲ. ಆದರೆ, ಅದು ಮೂಲ ಬರೆಹದ ಒಂದು ವ್ಯಾಖ್ಯಾನ ಆಗಿಬಿಡುತ್ತದೆ. ಆ ಪಠ್ಯವನ್ನು ನಾವು ಅರ್ಥಮಾಡಿಕೊಂಡಂತೆ, ಪ್ರಸ್ತುತಪಡಿಸುತ್ತೇವೆ. ಅನುವಾದ ಇದಕ್ಕಿಂತ ಸ್ವಲ್ಪ ಮುಂದೆ ಹೋಗಿ, ನಾನು ಅರ್ಥ ಮಾಡಿಕೊಂಡಿದ್ದು ಒಂದು ಮಟ್ಟದಲ್ಲಾದರೆ, ಆ ಪಠ್ಯ ಏನನ್ನು ಹೇಳುವುದಕ್ಕೆ ಪ್ರಯತ್ನಿಸುತ್ತಿದೆ ಅನ್ನೋದನ್ನ ತಿಳಿಯಲು ಸಾಧ್ಯವಾ ಅನ್ನೋದನ್ನ ನೋಡಬೇಕು. ಇದು ಕೇವಲ ಪಠ್ಯದ ಓದಿಗೆ ಸೀಮಿತವಾಗದೇ, ಅದನ್ನು ಪರಿಶೀಲಿಸಿ ಅದರೊಂದಿಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಒಂದು ಉದಾಹರಣೆ: Gabriel García Márquezನ ‘One Hundred Years of Solitude’ ಕನ್ನಡಕ್ಕೆ ‘ನೂರು ವರ್ಷಗಳ ಏಕಾಂತ’ ಅಂತ ಅನುವಾದ ಆಗಿದೆ. ಇದು ‘ಒಂದು ನೂರು ವರ್ಷಗಳ ಏಕಾಂತ ವಾಸ’ ಅಂತಾಗಬೇಕು. ಯಾಕೆಂದ್ರೆ ಮಾರ್ಕೆಸ್ ಅದರಲ್ಲಿ ತುಂಬಾ ನಿರ್ದಿಷ್ಟವಾಗಿ ಸಂಖ್ಯೆಗಳನ್ನ ಉಪಯೋಗಿಸ್ತಾನೆ. ಆ ಇಡೀ ಪಠ್ಯದಲ್ಲಿ ಎಲ್ಲದಕ್ಕೂ ಒಂದು ನಿರ್ದಿಷ್ಟತೆ ಇದೆ. ಮಾರ್ಕೆಸ್ ಕೃತಿಗಳು ‘ಭ್ರಾಮಕ ಜಗತ್ತು–ಮ್ಯಾಜಿಕ್ ರಿಯಲಿಸಂ’ ಮೇಲೆ ನಿಂತಿವೆ. ಮ್ಯಾಜಿಕ್ ಅಂದರೆ ಅದು ನಂಬಲು ಕಷ್ಟವಾಗುವ ಮೋಡಿ. ಇಲ್ಲಿ ರಿಯಲಿಸಂ ಇರಬೇಕಾದರೆ ಅದಕ್ಕೊಂದು ನಿಖರತೆ, ಸ್ಪಷ್ಟತೆ ಬೇಕಾಗತ್ತೆ. ಆ ಎರಡನ್ನ ಅವನು ನಿಭಾಯಿಸೋದು ಹೇಗಂದ್ರೆ: ಜನ ಹಾರಾಡ್ತಾ ಇದ್ರು ಎನ್ನುತ್ತಲೇ, ಅವರಿಗೆ ಮೂರು ರೆಕ್ಕೆ, ಎರಡು ಗರಿಗಳಿದ್ದವು ಎನ್ನುವ ಸ್ಪಷ್ಟತೆ ಕೊಟ್ಟು ಆ ಭ್ರಾಮಕ ಜಗತ್ತಿಗೆ ನಿಖರತೆ ಒದಗಿಸ್ತಾನೆ. ಹೀಗೆ ಮಾರ್ಕೆಸ್/ಲೇಖಕನ ಜಾಯಮಾನಕ್ಕೆ ಒಗ್ಗುವ ಹಾಗೆ ಅನುವಾದ ಮಾಡಬೇಕು. ಹೀಗೆ ಮಾಡ್ಬೇಕಂದ್ರೆ ಮೂಲಕೃತಿಗೆ ನಿಷ್ಠವಾಗಿರಬೇಕಾಗತ್ತೆ. ಅದು ನನ್ನ ವಾದ. 

ಅನುವಾದದಲ್ಲಿ ಇಷ್ಟು ಕೈ ಕೂತಿದ್ರೂ, ಇದನ್ನ ಅನುವಾದ ಮಾಡೋದು ಸವಾಲು ಎಂದೆನಿಸಿದ್ದು?

ಅನೇಕ ಕೃತಿಗಳು ಸವಾಲು ಅಂತನಿಸ್ತವೆ. ಕೆಲವನ್ನ ಅನುವಾದ ಮಾಡಕ್ಕಾಗಲ್ಲ ಅಂತ ಬಿಟ್ಬಿಡ್ತೀನಿ. ಯಾವುದಾದರೂ ಒಂದು ಅನುವಾದ ಮಾಡಬೇಕಾದ್ರೆ ಎರಡು ಕಾರಣಗಳಿರುತ್ತವೆ. ಒಂದು: ಅದು ಯಾವ ರೀತಿಯ ಕೊಕ್ಕೆಯನ್ನ ನಮ್ಮ ಮನಸ್ಸಲ್ಲಿ ಹಾಕ್ತಿದೆ, ಎಷ್ಟು ರೆಲೆವೆಂಟ್ ಅನ್ನೋದು. ಉದಾ: ತೆಲುಗಿನ ಸತ್ಯಂ ಶಂಕರ ಮಂಚಿ ಅವರ ಕತೆಗಳು ನನಗೆ ಬಹಳ ಇಷ್ಟ. ಅವರದ್ದು ಒಂದು ರೀತಿ ನಮ್ಮ ಮಾಸ್ತಿಯವರ ಶೈಲಿ. ಅವುಗಳನ್ನ ಓದುವಾಗ ಅರೆ, ಇದು ಕನ್ನಡದಲ್ಲಿ ಇರಬೇಕಾಗಿತ್ತು. ಕನ್ನಡದ್ದೇ ಕತೆ ಅನಿಸಿಬಿಡತ್ತೆ. ಕೆಲವು ‘ನುಡಿನಡತೆ’ ತೆಲುಗಿನದೇ ಇದ್ದರೂ, ಅದನ್ನ ಉಳಿಸಿಕೊಂಡು ಅನುವಾದ ಮಾಡೋದು ಬಹಳ ಸರಳ. ಅವು ಸಾಂದರ್ಭಿಕವಾಗಿ ನಮಗೆ ಒಗ್ಗುತ್ತವೆ. ಇನ್ನೊಂದು: ಬೇರೊಂದೇ ಲೋಕದಿಂದ ಬಹುವಂತಹ ಸಾಹಿತ್ಯ. ಮಾರ್ಕೆಸ್, ಮಿಲನ್ ಕುಂದೆರಾ ಥರದ್ದು. ಇವರುಗಳು ಕತೆಯನ್ನ ನಿಭಾಯಿಸೋ ರೀತಿ, ತಂತ್ರಗಾರಿಕೆ, ನಿರೂಪಣೆ, ಆ ಕಥನಕ್ರಮದ ಬಗ್ಗೆ ನನಗೆ ಆಸಕ್ತಿಯಿದೆ. ಈ ಕಥನಕ್ರಮವನ್ನು ಸರಿಯಾಗಿ ಅಭ್ಯಾಸ ಮಾಡಲು ನಾನು ಅನುವಾದ ಮಾಡ್ತೀನಿ. ನಾನು ಮಾಡುವ ಅನುವಾದಗಳೇನಿದ್ರೂ ಅದು ನನಗೆ ನಾನೇ ಕೊಟ್ಟುಕೊಳ್ಳುವ ತರಬೇತಿ. ಅನುವಾದ ಮಾಡುವಾಗ ಪಠ್ಯವನ್ನ ಪದೇಪದೇ ಓದ್ತೀವಿ. ಅನುವಾದಿಸಿ ಮತ್ತಷ್ಟು ಪರಿಷ್ಕರಣೆ ಮಾಡ್ತಿವಿ. ಸರಿ ಹೋಗದ ಪದಗಳನ್ನ ತಿದ್ದಿ-ತೀಡಿ ಚೆಂದಗೊಳಿಸ್ತಿವಿ. ಓದೋವಾಗ ಎಷ್ಟೋ ಪದಗಳ ಅರ್ಥ ಗೊತ್ತಿದೆ ಅಂತಲೋ ಅಥವಾ ಗೊತ್ತಿರದಿದ್ದರೂ ಉಡಾಫೆಯಿಂದ ಮುಂದೆ ಹೋಗಿರ್ತಿವಿ. ಆ ಸಂದರ್ಭಕ್ಕೆ ಆ ಪದಗಳು ಯಾವ ಅರ್ಥವನ್ನು ಕೊಡುತ್ತವೆ ಅನ್ನೋದರ ಬಗ್ಗೆ ಗಮನ ಕೊಟ್ಟಿರೋಲ್ಲ. ಅನುವಾದ ಮಾಡುವಾಗ; ಲೇಖಕ ಬಳಸಿದ ವ್ಯಾಕರಣ, ಕಥನಾವಳಿ ಸಾಗುವ ರೀತಿ, ವಾಕ್ಯ ರಚನೆ, ಕಾಲವನ್ನ ಹೇಗೆ ನಿಭಾಯಿಸಿದ್ದಾರೆ ಅನ್ನೋದನ್ನ ಸೂಕ್ಷ್ಮವಾಗಿ, ಹತ್ತಿರದಿಂದ ಗಮನಿಸಲು ಸಾಧ್ಯವಾಗತ್ತೆ. 

ಯಾವುದೇ ಪಠ್ಯವನ್ನು ಅನುವಾದಿಸಲು ಭಿನ್ನವಾದ ಕಾರಣಗಳಿವೆ. ನಾನು ಅನುವಾದ ಮಾಡೋದು ಒಂದು ಖುಷಿ ಹಂಚೋದಕ್ಕೆ, ಇನ್ನೊಂದು ನಾನೇ ಸ್ವಲ್ಪ ಕಷ್ಟ ಪಡೋದಕ್ಕೆ –  ಎಂ ಎಸ್ ಶ್ರೀರಾಮ್ 

ಓದಿದ ತಕ್ಷಣ ಇದನ್ನ ಕನ್ನಡಕ್ಕೆ ತರಲೇಬೇಕು ಎಂದು ಕೈಗೆತ್ತಿಕೊಳ್ಳುವಂತೆ ಮಾಡುವ ವಿಷಯ?

ಇದನ್ನ ಸ್ವಲ್ಪ ಬದಲಾಯಿಸೋಣ. ಕೈಗೆತ್ತಿಕೊಳ್ಳುವಂತೆ ಮಾಡುವ ವಿಷಯ ಬೇಡ. ನಾನು ಕೆಲವನ್ನ ಯಾಕೆ ಅನುವಾದ ಮಾಡಲ್ಲ ಅನ್ನೋದನ್ನ ಹೇಳ್ತೀನಿ. ಉಂಬರ್ಟೋ ಇಕೋನ ಪುಸ್ತಕಗಳನ್ನ ನನಗೆ ಅನುವಾದ ಮಾಡಕ್ಕಾಗಲ್ಲ. ಇಕೋ ಕಾದಂಬರಿಗಳಲ್ಲಿ ಚರ್ಚಿನ ಹಿನ್ನೆಲೆ ಇರತ್ತೆ. ಕ್ರಿಶ್ಚಿಯಾನಿಟಿ, ಅದರ ರಿವಾಜು, ಕ್ರಿಶ್ಚಿಯನ್ ಮತ್ತು ಜ್ಯೂಗಳ ನಡುವಿನ ತಗಾದೆ, ತಕರಾರುಗಳು… ಈ ಥರದ್ದು. ಬಹಳ ಆಸಕ್ತಿಕರವಾಗೂ ಇರತ್ತೆ. ಓದಿ ಖುಷಿ ಪಡ್ತಿನಿ. ಅನುವಾದಿಸುವ ಯೋಚನೆ ಕೂಡ ಮಾಡಲ್ಲ! ಸಂದರ್ಭ ಗ್ರಹಿಸದೆ, ಕಾದಂಬರಿ ರಚನೆಯಾದ ಪರಿಸರದ ಹಿನ್ನೆಲೆ ಗೊತ್ತಿಲ್ಲದೇ ಅನುವಾದ ಮಾಡಿದರೆ ಅದರಲ್ಲಿ ಜೀವಂತಿಕೆ ಇರಲ್ಲ. ಇಂಥದ್ದರಿಂದ ದೂರ ಇರ್ತಿನಿ. ನನ್ನ ಮಟ್ಟಿಗೆ, ಸಾಂಸ್ಕೃತಿಕವಾಗಿ ಗ್ರಹಿಸಲು ಸಾಧ್ಯವಾದಾಗ ಮಾತ್ರ ಅನುವಾದ ಮಾಡಬಹುದು. ಉದಾ: ಒಬ್ಬ ವಿದೇಶೀಯ ಬಂದು ಅನಂತಮೂರ್ತಿಯವರ ‘ಸಂಸ್ಕಾರ’ ಅನುವಾದ ಮಾಡಿದರೆ ಅದರ ಸೂಕ್ಷ್ಮ ಹಿಡಿಯಕ್ಕೇ ಆಗಲ್ಲ. ಅದನ್ನ ಎ ಕೆ ರಾಮಾನುಜನ್‌ನಂಥವರೇ ಮಾಡಬೇಕಾಗುತ್ತದೆ. ಯಾಕೆಂದ್ರೆ ಅವರಿಗೆ ಕನ್ನಡದ ಸಂದರ್ಭ, ಆ ಭಾಷೆಯ ನಿರ್ದಿಷ್ಟ ‘ನುಡಿನಡತೆ’ ಗೊತ್ತಿರುತ್ತದೆ. ಅದೇ ಮಾರ್ಕೆಸ್, ಮಿಲನ್ ಕುಂದೆರಾ ಕೃತಿಗಳಲ್ಲಿ ಅವರು ಮಾನವ ಸಂಬಂಧಗಳ ಪದರಗಳನ್ನು ಬಿಡಿಬಿಡಿಸಿ ನೋಡೋದು, ಜತೆಗೆ ಅವುಗಳಲ್ಲಿ ಅಡಕವಾಗಿರೋ ರಾಜಕೀಯ, ಸಮಕಾಲೀನತೆ ನೋಡಿದಾಗಲೆಲ್ಲ ಅನುವಾದ ಮಾಡಬಹುದು ಅನಿಸತ್ತೆ. ಇದನ್ನ ಮೀರಿಯೂ ಕೆಲವು ಸೂಕ್ಷ್ಮಗಳು ಗ್ರಹಿಕೆಗೆ ಸಿಗದೆ ಉಳಿಯಬಹುದು. ಏನು ಮಾಡಲು ಸಾಧ್ಯ, ಪರಕಾಯ ಪ್ರವೇಶ ಮಾಡಿ ಅನುವಾದ ಮಾಡಕ್ಕಾಗಲ್ಲವಲ್ಲ! ಒಂದು ಕೃತಿ ಅನುವಾದ ಮಾಡೋಕೂ ಮುಂಚೆ ಆ ಲೇಖಕನ ಸಮಗ್ರ ಸಾಹಿತ್ಯ ಓದಿಕೊಂಡಿದ್ರೆ ಒಳ್ಳೆಯದು. ಆಗ ಲೇಖಕನ ಜಾಯಮಾನಕ್ಕೆ ಒಗ್ಗುವ ಅನುವಾದ ಮಾಡಲು ಸಾಧ್ಯ.

ಕತೆಯ ಮೊದಲ ಸಾಲು ಶುರು ಮಾಡೋದು ಯಾವತ್ತೂ ಸವಾಲು ಎನ್ನುವ ನಿಮಗೆ ಅನುವಾದ ಮಾಡುವಾಗ ಈ ಸವಾಲು ಎದುರಾಗಿದೆಯ?

ಇಲ್ಲಿ ಅನುವಾದ ಮಾಡ್ಬೇಕಾ ಬೇಡ್ವಾ ಅನ್ನೋದು ಸವಾಲೇ ಹೊರತು ಮೊದಲ ಸಾಲಿನ ತೊಂದರೆಯಿಲ್ಲ. ಕತೆ ಪ್ರೇರಣೆಯಿಂದ ಆಗುವ ಪ್ರಕ್ರಿಯೆ. ಅದಕ್ಕೆ ಒಳಗಿಂದ ಒಂದು ಟ್ರಿಗರ್, ಹುಕ್ ಇರಬೇಕು. ಕತೆ ಕೆಲವೊಮ್ಮೆ ಸಹಜವಾಗಿ ಬರುತ್ತದೆ, ಕೆಲವೊಮ್ಮೆ ಸಂದರ್ಭ ಸೃಷ್ಟಿ ಮಾಡಿಕೊಳ್ಳಬೇಕು. ಮನದ ಮರದಲ್ಲಿ ಎಷ್ಟೊಂದು ವಿಷಯಗಳು ಗೂಡು ಕಟ್ಟಿ ಕೂತಿರ್ತವೆ. ಯಾವ ಕತೆಯಲ್ಲಿ, ಯಾವ ಗೂಡಿನ ಹಕ್ಕಿಯನ್ನ ಹಾರಾಡಿಸಬೇಕು ಅನ್ನೋದನ್ನ ಆಯ್ಕೆ ಮಾಡ್ಕೋಬೇಕಾಗತ್ತೆ. ಅನುವಾದದಲ್ಲಿ ಓದೇ ಕೊಕ್ಕೆ ಹಾಕುತ್ತದೆ. ಜತೆಗೆ ಅದು ಶ್ರಮ, ಏಕತಾನತೆ, ಧ್ಯಾನ ಮತ್ತು ಮರುಸೃಷ್ಟಿಯ ಕೆಲಸ. ಇದಕ್ಕೆ ಶಿಸ್ತು ಮತ್ತು ತಕ್ಕ ಪರಿಕರಗಳು ಬೇಕು. ಅನೇಕ ಸಲ ಡಿಕ್ಷನರಿಯಲ್ಲಿ ಸಿಗುವ ಅರ್ಥ ಸಂದರ್ಭಕ್ಕೆ ಹೊಂದಿಕೆಯಾಗದೆ ಸ್ನೇಹಿತರಿಗೆಲ್ಲ ಕಾಲ್ ಮಾಡಿ ಈ ಪದದ ಅರ್ಥ ಏನು ಅಂತ ವಿಚಾರಿಸುವುದು ಉಂಟು. ಅನುವಾದಕ್ಕೆ ಭಾಷೆ ಅನುವಾಗಲ್ಲ ಅಂತನಿಸಿದಾಗೆಲ್ಲ ಅಲ್ಲೇ ನಿಲ್ಲಿಸಿ ಏನಾದ್ರೂ ಹೊಳೆಯುತ್ತದಾ ಅಂತ ಬೇರೆ ಏನೋ ಓದಲು ಶುರು ಮಾಡ್ತೀನಿ. ಆದರೆ, ಕತೆ ಏಕಾಂತದಲ್ಲಿ ಆಗುವಂಥದ್ದು.

ಅನುವಾದದಲ್ಲಿ ಸಾಂಸ್ಕೃತಿಕ ಸಂದರ್ಭದ ಕುರಿತು

ಪೋಲೆಂಡಿನಲ್ಲಿ ಸಬ್‌ವೇಗಳಿಲ್ಲ ಹಾಗಾಗಿ ಯಿದ್ದಿಶ್‌ನಲ್ಲಿ ಅದಕ್ಕೆ ಹೆಸರಿಲ್ಲ ಎಂದು ಹೇಳುತ್ತಾ ಸಿಂಗರ್, ಅಮೆರಿಕಕ್ಕೆ ಬಂದ ಮೇಲೆ ತಾನು ಬರೆಯೋಕೆ ಪರದಾಡಬೇಕಾಯ್ತು ಎನ್ನುತ್ತಾನೆ. ಬರೆವಣಿಗಾಗಲೀ, ಅನುವಾದಕ್ಕಾಗಲೀ ಭಾಷೆ ಅನುವಾಗದಿರುವ ಕಷ್ಟ ಏನು?

ಅಯ್ಯೋ ಯಾಕ್ ಕೇಳ್ತೀರಾ ಭಾಷೆ ಒದಗಿ ಬರದೇ ಇರೋ ಕಷ್ಟವನ್ನ! ಬಹಳ ಕಷ್ಟ. ಕನ್ನಡದಲ್ಲಿ, ಆ ವಿಷಯದ ಬಗ್ಗೆ ಬರೀತಾ ಇದ್ರೂ ರೆಡ್ಡಿಯವರ ‘ಭಿನ್ನ-ಅಭಿಪ್ರಾಯ’ ಅನುವಾದ ಮಾಡುವಾಗ ಬಹಳ ಸವಾಲುಗಳು ಎದುರಾದವು. ಒಂದು ಭಾಷೆಗೆ ಅದರದ್ದೇ ಆದ ಜಾಯಮಾನ ಮತ್ತು ಸಂದರ್ಭ ಇರತ್ತೆ. ಅದು ಸಿಂಗರ್ ವಿಷಯದಲ್ಲಿ ಸಬ್‌ವೇ ಆಗಿರಬಹುದು, 20-30 ವರ್ಷಗಳ ಹಿಂದೆ ಮೆಟ್ರೊ ಅಂದ್ರೆ ನಮಗೂ ಗೊತ್ತಿರಲಿಲ್ಲ. ಜಯಂತ ಕಾಯ್ಕಿಣಿ ‘ಮುಂಬಯಿ 7:55ರ ಲೋಕಲ್’ ಅಂತ ಕತೆ ಬರೆದರೆ ಮಂಡ್ಯ, ಮದ್ದೂರಿನಿಂದ ಆಚೆಗೇ ಹೋಗದ ಒಬ್ಬ ಓದುಗನಿಗೆ ಅದು ಯಾವ ಅರ್ಥ ಮೂಡಿಸತ್ತೆ? ಅದಕ್ಕೇ ನಾವು ಪದಗಳನ್ನ ಎರವಲು ಪಡಿತೀವಿ. ಅದು ಕಷ್ಟವೂ ಅಲ್ಲ. ಸಬ್‌ವೇನ ಸಬ್‌ವೇ ಅಂತಲೇ ಬರೆದ್ರಾಯ್ತು. 

ಭಾಷೆಗೆ ಅದರದ್ದೇ ಆದ ಮಿತಿಗಳಿರುತ್ತವೆ. ಅದನ್ನ ಹಿಗ್ಗಿಸೋದು, ಮಿತಿಯಲ್ಲೇ ನಿಭಾಯಿಸೋದು ಪ್ರತಿ ಅನುವಾದದಲ್ಲೂ ಸವಾಲು. ಉದಾಹರಣೆಗೆ Fiscal deficit ಕನ್ನಡದಲ್ಲಿ ಹೇಗೆ ಬರೀಬೇಕು ಅನ್ನೋದು. ಕನ್ನಡ ಸಂದರ್ಭದಲ್ಲಿ ಇದನ್ನ ಹೇಳಬೇಕಂದ್ರೆ – ಪ್ರಜಾಪ್ರಭುತ್ವ, ಸರಕಾರ, ಸರಕಾರದ ನೀತಿ ನಿಯಮಗಳು, ದುಡ್ಡು ಕಾಸನ್ನ ನಿಭಾಯಿಸೋ ಸಂದರ್ಭ ಯಾವಾಗ ಬಂತು? ಆಗ ಇದಕ್ಕೆ ಸರಿಯಾದ ಭಾಷೆ ಇತ್ತಾ ನಮ್ಮಲ್ಲಿ ಹೀಗೆ ಒಂದು ವಿಸ್ತೃತ ಚೌಕಟ್ಟಿನಲ್ಲಿ ಹೇಳಬೇಕಾಗತ್ತೆ. ಫೈನಾನ್ಸ್ ಕಮಿಷನ್ ಕೂಡ ಹಾಗೇ. ಫೈನಾನ್ಸ್ ಕಮಿಷನ್ ಅನ್ನೋದು ಕೇಂದ್ರ ಸರಕಾರಕ್ಕೂ, ರಾಜ್ಯ ಸರಕಾರಕ್ಕೂ ಹಣ ಬಟವಾಡೆ ಮಾಡುವ ಒಂದು ಏರ್ಪಾಟು. ಕನ್ನಡ ಭಾಷಾ ವಿಕಸನ ಸಂದರ್ಭದಲ್ಲಿ ಎಂದೂ ಯಾರೂ ಹಣ ಬಟವಾಡೆ ಮಾಡಿಲ್ಲ ಅಂದ್ರೆ ಆ ಏರ್ಪಾಟಿಗೆ ಏನಂತ ಕರೆಯೋದು? ಈ ಥರದ್ದೆಲ್ಲ ತೊಂದರೆಗಳಿರತ್ತೆ. ಉದಾ: ಈಜುಕೊಳ – ನಮಗೆ ಗೊತ್ತಿದ್ದಿದ್ದು ಕೊಳ. ಅದರಲ್ಲಿ ಈಜುತ್ತಿದ್ದೆವು. ಈಜುವುದರಿಂದ ಆದ ಕೊಳವಲ್ಲ! ಈಗ ಅದನ್ನ ಇಷ್ಟುದ್ದ, ಇಷ್ಟಗಲ ಎನ್ನುವ ಫ್ರೇಮಿನಲ್ಲಿ ಕಟ್ಕೊಂಡಿದೀವಿ. ನೀರು ಬಿಟ್ಕೊಂಡು, ಕ್ಲೀನ್ ಮಾಡ್ಕೊಂಡು, ಇಷ್ಟೇ ಆಳ ನೀರಿರಬೇಕು…. ಈ ಥರದ್ದೆಲ್ಲ ಬೆಳಸ್ಕೊಂಡಿದೀವಿ. ಹೀಗೆ ಅನುವಾದದಿಂದ ಭಾಷೆ ಬೆಳೆಯಬಹುದು. ಇಂಗ್ಲಿಷ್ ಎಲ್ಲ ಭಾಷೆಯ ಪದಗಳನ್ನ ಸುಲಭವಾಗಿ ಎರವಲು ಪಡೆದು ಆಕ್ಸಫರ್ಡ್ ಡಿಕ್ಷನರಿಯಲ್ಲಿ ಜಾಗ ಕೊಡತ್ತೆ; ‘ಚಟ್ನಿ. ಅಯ್ಯೋ…’ ಥರ. 

ಫ್ಲಾಪಿಗೆ ಕನ್ನಡದಲ್ಲಿ ಯಾಕೆ ಅರ್ಥ ಹುಡುಕಬೇಕು? ಪೆನ್ ಡ್ರೈವ್ ಯೂನಿವರ್ಸಲ್ ಆಗಿ ಒಪ್ಪಿದ ಪದವಾಗಿದ್ರೆ ಹಾಗೇ ಉಪಯೋಗಿಸಹುದಪ್ಪ. ಅರ್ಥ ಹುಡುಕುವ ಬದಲು ಅದನ್ನೇ ಕನ್ನಡಿಕರಿಸಿಕೊಂಡ್ರೆ ಆಯ್ತು. ಸ್ವಲ್ಪ ಮಡಿವಂತಿಕೆ ಬಿಟ್ರೆ ಒಳ್ಳೇದು. – ಎಂ ಎಸ್ ಶ್ರೀರಾಮ್ 

‘ಭಿನ್ನ-ಅಭಿಪ್ರಾಯ’ ಓದಿ ಅನೇಕರು ಹೇಳಿದ್ದು: ತೀರಾ ಕನ್ನಡೀಕರಿಸಲು ಹೋಗಿ ಓದಕ್ಕೇ ಕಷ್ಟವಾಗ್ಬಿಟ್ಟಿದೆ. ನೀವು ಕನ್ನಡದಲ್ಲಿ ಉಪಯೋಗಿಸಿದ terminology ನಮಗೆ ಇಂಗ್ಲಿಷಿನಲ್ಲೇ ಹೆಚ್ಚು familiar ಇದೆ ಅಂತ. ಪುಸ್ತಕದ ಕೊನೆಯಲ್ಲಿ ಒಂದು ಗ್ಲಾಸರಿ ಕೊಟ್ಟಿದ್ರೆ ಚೆನ್ನಾಗಿರ್ತಿತ್ತು ಅನ್ನೋ ಸಲಹೆ ಕೂಡ ಬಂತು… ಮೂಲ ಭಾಷೆಯಲ್ಲಿಯೇ ಬರೆಯೋವಾಗ ತೆಗೆದುಕೊಳ್ಳೋ ಸ್ವಾತಂತ್ರ ಅನುವಾದದಲ್ಲಿ ಸಾಧ್ಯವೇ? ಬೇರೆ ಭಾಷೆಯ/ಇಂಗ್ಲಿಷ್ ಪದಗಳನ್ನ ಆರಾಮಾಗಿ ಬಳಸ್ತೀನಿ. ಆದ್ರೆ ಅನುವಾದ ಮಾಡೋವಾಗ ಒಂದು ದ್ವಂದ್ವ ಇರತ್ತೆ. ಸಮಾನಾರ್ಥಕ ಪದ ಬರಿದೇ ಇದ್ರೆ, ‘ಓದುಗರು ನನಗೆ ಕನ್ನಡ ಬರಲ್ಲ ಅಂತಂದ್ಕೊಂಡು ಬಿಟ್ರೆ?!’ ಅನುವಾದ ಮಾಡುವಾಗ ಶುದ್ಧವಾಗಿರಲು ಹೆಚ್ಚು ಪ್ರಯತ್ನಿಸುತ್ತೇವೆ. 

ಅನುವಾದದಲ್ಲಿ ಪದಗಳನ್ನ ಎರವಲು ಪಡೆಯಬೇಕು ಅಂತ ಹೇಳ್ತೀನಿ. ಆದ್ರೆ ನಾನೇ ಪಡೆದಿಲ್ಲ! ಅನುವಾದ ವಿಸ್ತಾರ ಆಗ್ಬೇಕು ಅಂದ್ರೆ ಎರವಲು ಪಡೆಯಬೇಕು. ಇಲ್ಲೊಂದು ಕಷ್ಟದ ಪ್ರಶ್ನೆ ಎದುರಾಗತ್ತೆ: ಸಮಾನಾಂತರ ಕನ್ನಡ ಪದ ಇದ್ರೆ ಅದನ್ನ ಕೊಂದು, ಬೇರೆ ಪದ ತರಬೇಕಾ? ಭಾಷಾ ಶುದ್ಧತೆ ಬಲಿ ಕೊಡಬೇಕಾ? ಇಲ್ಲಿ ಏನನ್ನ ಅನುವಾದ ಮಾಡ್ತೀವಿ ಅನ್ನೋದೂ ಮುಖ್ಯವಾಗುತ್ತದೆ. ಚೇತನ್ ಭಗತ್ ಇಂಗ್ಲಿಷಿನಲ್ಲಿ ಸಾಕಷ್ಟು ಹಿಂದಿ ಇರತ್ತೆ. ಸುಲಭವಾಗಿ ಓದಿಸಿಕೊಳ್ಳತ್ತೆ. ಹೊಸ ಓದುಗರಿಗೆ ಇಂಗ್ಲಿಷ್ ಸಾಹಿತ್ಯದೊಳಗೆ ಬರಲು ಪ್ರವೇಶಿಕೆ ಒದಗಿಸತ್ತೆ. ಇದಕ್ಕೆ ಅದರದ್ದೇ ಆದ ಒಂದು ವ್ಯಾಲ್ಯೂ ಇದೆ. ಆದರೆ, “ಈ ಎಡಬಿಡಂಗಿ ಭಾಷೆ ಬೇಕಿಲ್ಲ. ಶುದ್ಧ ಇಂಗ್ಲಿಷಿನಲ್ಲೇ ಬರೆದಿದ್ರೆ ಆಗ್ತಿತ್ತು,” ಅಂತ ಹೇಳೋ ಸಂಪ್ರದಾಯಸ್ಥರೂ ಇದಾರೆ. ಇದು ಸುಲಭವಾಗಿ ಪರಿಹಾರವಾಗುವ ವಿಷಯವಲ್ಲ. ಸ್ವಲ್ಪ ಜಟಿಲ. ಅನುವಾದದಲ್ಲೂ ಇದೇ ಆಗೋದು. ಸರಳ/ಕ್ಲಿಷ್ಟ/ಎರವಲು ಪದ ಉಪಯೋಗಿಸ್ಬೇಕಾ ಬೇಡ್ವಾ? ಗೊತ್ತಿಲ್ಲ! ‘ಬೇಟೆಯಲ್ಲ ಆಟವೆಲ್ಲ’ ಕಾದಂಬರಿಯಲ್ಲಿ ಸ್ವಲ್ಪ ಜಾಸ್ತಿನೇ ಹಿಂದಿ, ಇಂಗ್ಲಿಷ್ ಬಳಸಿದ್ದೀನಿ. ಒಂದ್ವೇಳೆ ಅದನ್ನ ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ ಅನುವಾದ ಮಾಡ್ಬೇಕಾಗಿದ್ರೆ ಇಷ್ಟು ಬಳಸ್ತಿರ್ಲಿಲ್ಲ. ಇದನ್ನೇ ನಾನು ಹೇಳೋದು, ಸ್ವಂತ ಪಠ್ಯದಲ್ಲಿ ತಗೊಂಡಷ್ಟು ಸ್ವಾತಂತ್ರ್ಯವನ್ನ ಅನುವಾದದಲ್ಲಿ ತಗೊಳೋಕೆ ಆಗಲ್ಲ ಅಂತ.

ಟೋನಿ ಮಾರಿಸನ್ Beloved ಕಾದಂಬರಿಯಲ್ಲಿ ಗುಲಾಮರ ಮುಖವಾಡದ (Bit) ಬಗ್ಗೆ ಬರೀತಾರೆ. ಕನ್ನಡದ ಮಟ್ಟಿಗೆ ಕಂಡಿಲ್ಲದ, ಕೇಳಿಲ್ಲದ ಈ ಕ್ರಿಯೆಯನ್ನ ಭಾಷೆಯಲ್ಲಿ ಹಿಡಿಯಲು ಆಗತ್ತಾ?

ಕಷ್ಟ, ಕಷ್ಟ… ಅದಕ್ಕೆ ಸಮಾನಾಂತರವಾದ ಪದ ಸಿಕ್ರೆ ಮಾತ್ರ ತರ್ಲಿಕ್ಕೆ ಸಾಧ್ಯ. ಉದಾ: Arms Trade ಬಗ್ಗೆ ಆರ್ ಕೆ ಲಕ್ಷ್ಮಣ್ ದು ‘ಟ್ರಿಗರ್ ಹ್ಯಾಪಿ’ ಅಂತ ಒಂದು ಪ್ರಬಂಧ ಇದೆ. ಇದು ತುಂಬಾ ಮೆಟಫಾರಿಕಲ್ ಆದ ಟೈಟಲ್. ಯಾವುದೇ ಯೋಚನೆ, ಬಂಧನವಿಲ್ದೇ ಸರಳವಾಗಿ, ಆರಾಮವಾಗಿ ಹೋಗುವವರಿಗೆ ‘ಟ್ರಿಗರ್ ಹ್ಯಾಪಿ’ ಅಂತಾರೆ. ಈ ಪ್ರಬಂಧದ Contextನಲ್ಲಿ ‘ಟ್ರಿಗರ್ ಹ್ಯಾಪಿ’ ಅನ್ನೋದು ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಲೇಖನದ ಶೀರ್ಷಿಕೆ. ಟ್ರಿಗರ್ ಒತ್ತಿದರೆ ಸಂತೋಷ ಆಗತ್ತೆ ಅಂತ ಅನುವಾದಿಸಕ್ಕಾಗಲ್ಲ! ಇದನ್ನ ಅನುವಾದಿಸುವಾಗ ಪರ್ಯಾಪ್ತ ಪದ ಸಿಗದೆ ಒದ್ದಾಡ್ತಿದ್ದೆ. ಅ ರಾ ಸೇ ಹತ್ತಿರ ಮಾತಾಡ್ತಾ ಹೀಗೆ ಅಂತ ಹೇಳ್ದೆ. ಅದಕ್ಕೆ ಅವರು, “ಅಯ್ಯೋ ಅದೇನ್ ಮಹಾಕಷ್ಟ… ‘ಕದನ ಕುತೂಹಲ’ ಅಂತ ಬರೀರಿ,” ಅಂದ್ರು. ಇದು ಎಷ್ಟು ಸೂಕ್ತವಾಗಿದೆ ನೋಡಿ, ಕನ್ನಡದ ಜಾಯಮಾನಕ್ಕೂ ಒಗ್ಗುತ್ತೆ. ಆದರೆ, ಈ ಅದೃಷ್ಟ ಎಲ್ಲ ಅನುವಾದಗಳಿಗೆ ಒದಗಿ ಬರೋಲ್ಲ ಅನ್ನೋದೇ ಅನುವಾದದ ವಾಸ್ತವ!

ಪ್ರತಿ 3,6,9… ಕಿಮೀಗೆ ಭಾಷೆಯ ಡೈಲೆಕ್ಟ್ ಬದಲಾಗತ್ತೆ ಅಂತ ಹೇಳ್ತಿವಿ. ಇದನ್ನ ಅನುವಾದದಲ್ಲಿ ಹಿಡಿಯೋದಂತೂ ಅಸಾಧ್ಯ. ಆದರೆ, ಬೇರೆ ಬೇರೆ ಭಾಷೆಗಳನ್ನ ಕಲಿತು ಅನುವಾದ ಮಾಡುವವರನ್ನ ನಾವು ನೋಡುತ್ತೇವೆ. ಹಾಗಾದ್ರೆ ಇವರೆಲ್ಲ ಒಂದು ದೇಶ/ರಾಜ್ಯದ ಗ್ರಂಥಸ್ಥ ಭಾಷೆ ಕಲಿತು ಅನುವಾದ ಮಾಡಿದ ಹಾಗಲ್ಲವೇ? ಹೀಗೆ ಆಗುವ ಅನುವಾದದಲ್ಲಿ ಭಾಷೆಯ ಒಟ್ಟು ಸಾರ ಹಿಡಿಯಲು ಸಾಧ್ಯವೇ?

ಹೌದ್ಹೌದು… ನಮ್ಮ ಗೋಪಾಲಕೃಷ್ಣ ಪೈ ‘ಸ್ವಪ್ನ ಸಾರಸ್ವತ’ ಬರೆದು ಈ ಬದಲಾಗುವ ಡೈಲೆಕ್ಟ್ ಅನ್ನೋದನ್ನ ತುಂಬಾ ಪ್ರಚಲಿತಗೊಳಿಸಿದರು. ಡೈಲೆಕ್ಟ್ ಗಳನ್ನ ಅನುವಾದದಲ್ಲಿ ಹಿಡಿಯಕ್ಕಾಗಲ್ಲ. ಇದು ಅನುವಾದಕರ ಸ್ಥಳೀಯ ಭಾಷಾಜ್ಞಾನ, ಅದನ್ನ ಎಷ್ಟು ಅಳವಡಿಸಿಕೊಂಡಿದಾರೆ, ಏನನ್ನ ಓದಿದಾರೆ… ಇಂಥದ್ದೆಲ್ಲ ಮುಖ್ಯವಾಗತ್ತೆ. ಉದಾ: ಅಕಸ್ಮಾತ್ ನಾನು ಕನ್ನಡದಿಂದ ತೆಲುಗಿಗೆ (Of course ಮಾಡಲ್ಲ) ಮಾಡ್ತೀನಿ ಅಂತಿಟ್ಕೊಳ್ಳಿ. ಆಗ ನಾನು ಗೋದಾವರಿಯ ತೆಲುಗು ಉಪಯೋಗಿಸುತ್ತೀನಾ ಅಥವಾ ಕರೀಂನಗರದ್ದಾ ಅನ್ನೋ ಪ್ರಶ್ನೆ ಎದುರಾಗತ್ತೆ. ತೆಲಂಗಾಣದ ಕತೆಗಳನ್ನ ಕನ್ನಡಕ್ಕೆ ತರುವಾಗ ಬೆಂಗಳೂರಿನ ಭಾಷೆ ಯಾಕೆ ಉಪಯೋಗಿಬೇಕು? ಧಾರವಾಡ, ಉತ್ತರ ಕನ್ನಡ, ಮಂಗಳೂರು ಭಾಷೆ ಉಪಯೋಗಿಸಬಾರ್ದಾ? ಶುದ್ಧ ಕನ್ನಡ ಅನ್ನೋದು ಏನು? ಗ್ರಾಂಥಿಕವಾದ ಕನ್ನಡ ಅಂತ ಹೇಳಿದ್ರೂ, ಮೈಸೂರು, ಬಾಗಲಕೋಟೆ, ವಿಜಯಪುರದ ಭಾಷೆಯ ದನಿ ಬೇರೆಯೇ ಇರುತ್ತೆ. ದೇವನೂರು ‘ಕುಸುಮಬಾಲೆ’ಯನ್ನು ನಂಜನಗೂಡು, ಚಾಮರಾಜನಗರದ ಡೈಲೆಕ್ಟಿನಲ್ಲಿ ಬರೆದಿದ್ದಾರೆ ಅದನ್ನ ಯಾವ ಥರ ಅನುವಾದ ಮಾಡ್ತೀರಿ? ಇದನ್ನ ಬೇರೆ ಭಾಷೆಯಲ್ಲಿ ಗ್ರಹಿಸಬೇಕು ಅಂದ್ರೆ ಅದು ಅನುವಾದಕರ ಓದಿನ ಮೇಲೆ, ಯಾವ ಡೈಲೆಕ್ಟಿನಲ್ಲಿ ಅವರ ‘ಕೈ ಕೂತಿದೆ’ ಅನ್ನೋದರ ಮೇಲೆ ನಿಂತಿರತ್ತೆ. ಅನುವಾದಕ್ಕೆ ಅಂತ ಯೂನಿವರ್ಸಲ್ ಆದ ಹೊಸ ನುಡಿಗಟ್ಟನ್ನು ತಯಾರಿಸಲು ಸಾಧ್ಯವಿಲ್ಲ. ಚಾಮರಾಜನಗರದ ಡೈಲೆಕ್ಟ್ ಅನ್ನ ಯಥಾವತ್ ಕರೀಂನಗರ ತೆಲುಗಲ್ಲಿ ಮಾಡ್ತೀನಿ ಅಂದ್ರೆ ಆಗಲ್ಲ. ಇಲ್ಲಿ ಆಯ್ಕೆಗಳಿಲ್ಲ. ನಿಮ್ಮ ‘ಹಿಡಿತ’ದಲ್ಲಿರುವ ಭಾಷೆಯಲ್ಲೇ ಅನುವಾದ ಮಾಡಬೇಕು.

ಒಂದು ಭಾಷೆಯ ನುಡಿಗಟ್ಟಿಗೆ ಸಮಾನವಾದದ್ದನ್ನು ಮತ್ತೊಂದು ಭಾಷೆಯಲ್ಲಿ ಕಂಡುಕೊಳ್ಳುವುದು ಬಹುದೊಡ್ಡ ಸಮಸ್ಯೆ. ಇದನ್ನು ನೀವು ಎದುರಿಸಿದ್ದೀರ?

ಮೇಲೆ ಹೇಳಿದೆನಲ್ಲ ‘ಕದನ ಕುತೂಹಲ’ ಒಂದು ಅನುಭವ. ಇಂಗ್ಲಿಷಿನ ನುಡಿಗಟ್ಟು, ಆಕ್ಟಿವ್-ಪ್ಯಾಸಿವ್ ವಾಯ್ಸ್, ಸಬೆಕ್ಟ್-ಆಬ್ಜೆಕ್ಟ್ ಪ್ರೆಡಿಕೇಟ್‌ನ ಸಿಸ್ಟಂ ಬೇರೆಯೇ ಆಗಿರೋದ್ರಿಂದ ಕಷ್ಟ ಆಗತ್ತೆ. ಎಡಿಟಿಂಗ್ ತುಂಬಾ ಮಾಡ್ಬೇಕಾಗತ್ತೆ. ತೆಲುಗಿನಿಂದ ಕನ್ನಡಕ್ಕೆ ತರೋದು ಅಷ್ಟು ಕಷ್ಟ ಆಗೋಲ್ಲ. ಬೇರೆ ಭಾರತೀಯ ಭಾಷೆಗಳಿಂದ ತರುವಾಗ ಎಡಿಟಿಂಗ್ ಕೆಲಸ ಅಷ್ಟಾಗಿರೋಲ್ಲ. ಮಂಚಿ ಅವರು ‘ಅಮರಾವತಿ ಕತೆ’ಗಳನ್ನ ಕನ್ನಡಲ್ಲೇ ಹೇಳ್ತೀದಾರೆ ಅನ್ನೋ ಅನುಭವ ಬರುತ್ತದೆ. ಅನುವಾದ ಸರಳವಾಗಿ ಆಗತ್ತೆ. ಆದರೂ ಕೆಲವು ಟರ್ಮಿನಾಲಜಿಗಳನ್ನ ತರೋದು ಕಷ್ಟ. ಉದಾ: ರಾಮುಲು ಅನ್ನೋ ಹೆಸರು. ಇದು ತೀರಾ ತೆಲುಗಿನದು. ಉಚ್ಚಾರಣೆಯಲ್ಲಿ ತೆಲುಗು ಧ್ವನಿಸಬೇಕು ಅಂತಿದ್ದಾಗ ರಾಮಣ್ಣ, ರಾಮಪ್ಪ ಅಂತ ಮಾಡಕ್ಕಾಗಲ್ಲ. ನಾನು ಕೆಲವು ಟರ್ಮಿನಾಲಜಿಗಳನ್ನ ತೆಲುಗು ಸೌಂಡ್ ಆಗೋಥರವೇ ಉಳಿಸ್ಕೊತೀನಿ. ಕನ್ನಡದಲ್ಲಿ ಬರೆಯೋ ಕತೆಗಳಲ್ಲೂ ಇದನ್ನ ಮಾಡ್ತೀನಿ. ಆದ್ರೆ ಕರಡು ತಿದ್ದೋರು ಎಲ್ಲ ತಿದ್ದಿ ಬಿಡುತ್ತಾರೆ! ಉದಾ: ರೋಡನ್ನ ತೆಲುಗಲ್ಲಿ ರೊಡ್ಡು ಅಂತ ಬಳಸ್ತಾರೆ. ‘ಸಲ್ಮಾನ್ ಖಾನನ ಡಿಫಿಕಲ್ಟೀಸು‘ ಸಂಕಲನದಲ್ಲಿ ರೊಡ್ಡು ಅಂತಲೇ ಬಳಸಿದ್ದೆ. ಪ್ರಕಾಶಕರು ಎಲ್ಲ ತಿದ್ದ್ಹಾಕಿ, ‘ಭಾಳಾ ಮಿಶ್ಟೀಕಿತ್ತು’ ಅಂತ ಹೇಳಿದ್ರು ಏನ್ ಮಾಡ್ತೀರ? “ಮಿಸ್ಟೇಕ್ ಅಲ್ಲಪ್ಪ, ಬರ್ದಿರೋದೇ ಹಾಗೆ, ಅದು ಹೈದರಬಾದಿನಲ್ಲಿ ನಡೆಯೋದ್ರಿಂದ ಭಾಷೆಗೆ ಹೈದರಾಬಾದಿತನ ಇರ್ಲಿ ಅಂತ ರೋಡನ್ನ ‘ರೊಡ್ಡು’ ಅಂತ ಬಳ್ಸಿದೀನಿ,” ಎಂದೆ. ಎರಡು ಭಾಷೆ ಗೊತ್ತಿದ್ದು, ಆಯಾ ಭಾಷೆಯ ಜಾಯಮಾನಕ್ಕೆ ತಕ್ಕಂತೆ ಬರಿಯೋ ಲೇಖಕರಿಗೆ ಇಂಥವೆಲ್ಲ ವಿಚಿತ್ರ ಕಷ್ಟಗಳಿರ್ತವೆ.

ಮೂಲ ಲೇಖಕರು ಅನುವಾದದಲ್ಲಿ ಸೊರಗುತ್ತಾರೆ ಎನ್ನುವ ಮಾತಿದೆ. ಎಷ್ಟು ನಿಜ?

 ಹೌದ್ಹೌದು… ಸೊರಗೇ ಸೊರಗ್ತಾರೆ. ಅನುವಾದದಲ್ಲಿ ಅಲ್ಲ, ಅದೇ ಲೇಖಕ ಅದೇ ಕತೆಯನ್ನು ಎರಡನೇ ಸಲ ಬರೆದರೂ ಸೊರಗ್ತಾನೆ. ಇದಕ್ಕೊಂದು ಇಂಟರೆಸ್ಟಿಂಗ್ ಉದಾ: ನಿರಂಜನರು ಕೈಬರೆಹದಲ್ಲಿ ಬರೆದಿಟ್ಟಿದ್ದ ಒಂದು ಕಾದಂಬರಿಯನ್ನ ಯಾರೋ ರದ್ದಿ ಪೇಪರ್ ಜೊತೆ ಹಾಕಿ ಕಳೆದು ಹೋಯ್ತಂತೆ. ಇದಾದ ಎಷ್ಟೋ ವರ್ಷಗಳ ನಂತರ ಅವರನ್ನ ಭೇಟಿಯಾದಾಗ, “ಆ ಕಾದಂಬರಿನಾ ಮತ್ತೆ ಬರ್ದಿದೀನಿ. ಆದ್ರೆ ಇದು ಮೊದಲಿನ ಥರ ಇಲ್ಲವೇ ಇಲ್ಲ,” ಅಂದ್ರು. ಯಾಕೆಂದ್ರೆ ಬರೆಯೋವಾಗ/ಬರೆದು ಮುಗಿಸಿದ ಮೇಲೆ ಈ ವಾಕ್ಯ, ಸ್ಟೇಟ್ಮೆಂಟ್ ಎಲ್ಲಿಂದ ಬಂತು? ನಾನೇನಾ ಬರೆದಿದ್ದು… ಅಂತನಿಸತ್ತೆ. ಬರೆಯೋ ಆ ಕ್ಷಣದಲ್ಲಿ ಏನೋ ಆವಾಹನೆ ಆದಂತಾಗಿ ಬರೆದು ಬಿಟ್ಟಿರುತ್ತೇವೆ. ಎಲ್ಲ ಹೊತ್ತಲ್ಲೂ ‘ಮೈಮೇಲೆ’ ಒಂದೇ ವಿಷಯ ಬರಬೇಕು ಅಂತಿಲ್ಲವಲ್ಲ! ಬರೆಹಗಾರನೇ ಆ ಟೆಕ್ಸ್ಟ್ ಯಥಾವತ್ ರಿಕ್ರಿಯೇಟ್ ಮಾಡಕ್ಕಾಗಲ್ಲ ಅಂದ್ಮೇಲೆ, ಅನುವಾದಕರು ಪಾಪ ಅಲ್ವ!

ಹಿಂದಿಯಲ್ಲಿ ಗಾಡಿ, ಟ್ರೈನ್, ಮೇಜು ಕುರ್ಚಿ… ಸ್ತ್ರೀ ಲಿಂಗ. ಇಂಗ್ಲಿಷಿನಲ್ಲಿ ನಾಯಿ, ಬೆಕ್ಕುಗಳಿಗೂ ಪುಲ್ಲಿಂಗ/ಸ್ತ್ರೀ ಲಿಂಗ ಅನ್ವಯವಾಗುತ್ತದೆ. ಪ್ರತಿ ಭಾಷೆಗೂ ಅದರದ್ದೇ ಮಿತಿ ಇರತ್ತೆ. ಆದರೆ, ಕನ್ನಡದಲ್ಲಿ ಪ್ರಾಣಿ-ಪಕ್ಷಿ, ವಸ್ತುಗಳಿಗೆ ನಪುಂಸಕ ಲಿಂಗ ಬಳಕೆಗೆ ಅವಕಾಶ ಇದೆ. ಆದರೂ, ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಪ್ರಾಣಿಗಳು ಕಡ್ಡಾಯವಾಗಿ ಅವನು‘ ‘ಅವಳುಎಂದಾಗಿ, ಅದೇ ಸರಿ ಅಂತಾದ್ರೆ, ಮಕ್ಕಳಿಗೆ ಕಲಿಸುವ ಕನ್ನಡದ ತೀರಾ ಮೂಲ ವ್ಯಾಕರಣ ಗೊಂದಲಮಯವಲ್ಲವೇ?

ಇದು ಗೊಂದಲಮಯ ಅಂತ ಮಕ್ಕಳೇ ಬಂದು ದೂರು ಕೊಟ್ಟಿಲ್ಲ ಅಂತ ಅಂದ್ಕೊತೀನಿ (ನಗು). ಕತೆಯಲ್ಲಿ ಪ್ರಾಣಿಗಳಿಗೆ ಅವನು/ಅವಳು ಅಂತಿದ್ದು; ನಿಜ ಜೀವನದಲ್ಲಿ ಅದು/ಇದು ಅನ್ನೋದು ಅಷ್ಟು ಗೊಂದಲದ ವಿಷಯ ಅಲ್ಲ. ಮಕ್ಕಳಿಗೆ ಭಾಷಾ ವೈವಿಧ್ಯತೆ ತಿಳೀಬೇಕದರೆ ಹೀಗೆ ಬಳಸೋದಕ್ಕೆ ಅಡ್ಡಿಯಿಲ್ಲ. ಇದರಲ್ಲೂ ಒಂದು ಸಾಂದರ್ಭಿಕ ಭಿನ್ನತೆ ಇದೆ. ಮಕ್ಕಳ ಮನೆಯಲ್ಲಿ ನಾಯಿ/ಬೆಕ್ಕು ಇದ್ರೆ most likely ಅವರು ಅವನು/ಅವಳು ಅಂತಲೇ ಕರೀತಾರೆ. ಪರಿಚಯ ಇಲ್ಲದವುಗಳನ್ನ ಅದು/ಇದು ಅಂತಾರೆ. ರೈತಾಪಿ ಮನೆಗಳಲ್ಲಿ ಎತ್ತು, ಹಸು-ಕರು, ನಾಯಿ, ಬೆಕ್ಕು, ಕೋಳಿ, ಕುರಿ… ಎಲ್ಲವೂ ಸಂಸಾರದ ಒಂದು ಭಾಗವೇ. ಇದು ಅನುವಾದದ ತೊಂದ್ರೆ ಅಲ್ಲ. ಆ ವಿಷಯದ ಜೊತೆ ಹೇಗೆ ಕನೆಕ್ಟ್ ಮಾಡ್ತೀರಿ ಅನ್ನೋದು ಮುಖ್ಯ. ನನ್ನ ಗೆಳೆಯರೊಬ್ಬರು ಅವರ ಮಕ್ಕಳನ್ನ ‘It’ ಅಂತನ್ನೋರು. ‘It has come, it has gone… It went to school today’ ಅಂತಿದ್ರು. ಇದೇನಪ್ಪ ‘ಇಟ್’ ಅಂದ್ರೆ; ತಮಿಳಲ್ಲಿ ಅವಳು ಅನ್ನೋದಕ್ಕೆ ‘ಅದ…’ ಅಂತಾರಂತೆ. ಅವರು ಅದನ್ನ ಇಂಗ್ಲಿಷಿಗೆ ಅನುವಾದ ಮಾಡ್ಕೊಂಡು ಹೇಳೋರು. ಹವ್ಯಕರಲ್ಲಿ, “ಅಪ್ಪ ಬಂದ, ಅಪ್ಪನಿಗೆ ಹೇಳ್ತೀನಿ, ಅಂವಾ ಹೋದ,” ಎಲ್ಲವೂ ಗೌರವ ಸೂಚಕವೇ! ಈಗ ಉದಾ: ತೆಲುಗಲ್ಲಿ ನೀರು, ಹಾಲು.. ಈ ಥರದ್ದೆಲ್ಲ ಬಹುವಚನ. ನೀಳ್ಳು, ಹಾಲು ಉಕ್ಕಿದವು (ಪಾಲು ಪೊಂಗಾಯ್). ಅದೆಲ್ಲ ಆಯಾ ಭಾಷೆಯ ಜಾಯಮಾನ. ಸಂದರ್ಭಕ್ಕೆ ತಕ್ಕಂತೆ ಈ ವೈವಿಧ್ಯತೆ ಉಳಿಸಿ ಕೊಳ್ಳೋದು ಒಳ್ಳೇದು. 

ಮೂಲಕೃತಿ ಎಷ್ಟೇ ಗಂಭೀರವಾಗಿದ್ದರೂ, ಅನುವಾದ ಸರಳವಾಗಿ, ಅರ್ಥ ಆಗೋ ಹಾಗಿದ್ರೆ ಸಾಕು ಅನ್ನೋ ಮಾತು ಕೇಳ್ತಾ ಇರ್ತೀವಿ. ಹಾಗೆ ಒಂದು ಸರಳೀಕೃತ ಅನುವಾದ ಒಂದು ಭಾಷೆಯ ಓದುಗರ ಬೌದ್ಧಿಕ ಮಟ್ಟವನ್ನು ಕಡಿಮೆಯಾಗಿ ಅಂದಾಜಿಸಿದ ಹಾಗಲ್ವ?

ಇದನ್ನ ಕೂಡ ನಾನು generalize ಮಾಡೋಕೆ ಇಷ್ಟಪಡಲ್ಲ. Contextual ಆಗೇ ತಗೋಬೇಕು. ಮೂಲಕೃತಿ – ವಿಚಾರ, ಲೇಯರ್ಸ್, ಟೆಕ್ನಿಕ್, ಭಾಷಾಪ್ರಯೋಗ ಯಾವುದರಿಂದ ಕಷ್ಟ ಅನಿಸತ್ತೆ ಅನ್ನೋದನ್ನ ನೋಡಬೇಕು. ಅಲ್ಲಿನ ಸಂದರ್ಭದಿದ ಅನುವಾದ ನಿಭಾಯಿಸಬೇಕಾಗತ್ತೇ ಹೊರತು… dumb down ಮಾಡೋದೇ ಉದ್ದೇಶ ಆಗಿರಬಾರದು. ಹಾಗೇನಾದ್ರೂ ಇದ್ದಿದ್ರೆ ಅದನ್ನ ಮೂಲಭಾಷೆಯಲ್ಲೇ ಮರುಸೃಷ್ಟಿ ಮಾಡಿರ್ತಿದ್ರು. ‘ಕುಸುಮಬಾಲೆ’ ಬಂದಾಗ ನಾವೆಲ್ಲ, “ಇದನ್ನ ಕನ್ನಡಕ್ಕೆ ಯಾರಪ್ಪ ಅನುವಾದ ಮಾಡ್ತಾರೆ ಅಂತ ಲಘುವಾಗಿ ಕೇಳಿದ್ವಿ!”

ನಿಮ್ಮಿಷ್ಟದ ಅನುವಾದಿತ ಕೃತಿಗಳು?

ಇಂಗ್ಲಿಷಿನಲ್ಲಾದ್ರೆ ನಾನು ಇಷ್ಟೊತ್ತು ಹೇಳಿದ ಕೃತಿಗಳೆಲ್ಲ ಅನುವಾದವೇ. ಮಾರ್ಕೆಸ್, ಕುಂದೆರಾ, ಸಾರ್ತ್ರೆ, ಕಾಫ್ಕಾ, ಆಯೆಂಡೆ ಎಲ್ಲರದ್ದೂ ಅನುವಾದಿತ ಕೃತಿಗಳನ್ನೇ ಓದಿರೋದು. ಇವೆಲ್ಲ ನಮಗೆ ದಕ್ಕಿದ್ದು, ದಕ್ಕೋದು ಅನುವಾದದಿಂದ. ಹೆಚ್ಚುಕಮ್ಮಿ ಇಂಗ್ಲಿಷ್ ಮೂಲವಲ್ಲದ ಎಲ್ಲ ಸಾಹಿತ್ಯವನ್ನೂ ಅನುವಾದ ಅಂತಲೇ ಲೆಕ್ಕ ಹಾಕಬೇಕು. ಕನ್ನಡದಿಂದ ಇಂಗ್ಲಿಷಿಗೆ ಹೋದ ಕೃತಿಗಳಲ್ಲಿ ಪ್ರತಿಭಾ ನಾಡಿಗೇರ್ ಅನುವಾದಿಸಿದ ಯಶವಂತ ಚಿತ್ತಾಲರ ಶಿಕಾರಿ, ರಾಮಾನುಜನ್ ಅನುವಾದಿಸಿದ ಅನಂತಮೂರ್ತಿಯವರ ಸಂಸ್ಕಾರ’, ಶ್ರೀನಾಥ್ ಪೆರೂರು ಅನುವಾದಿಸಿದ ವಿವೇಕ ಶಾನಭಾಗರ ಘಾಚರ್ ಘೋಚರ್ ಒಳ್ಳೆಯ ಅನುವಾದಗಳೆಂದು ನಾನು ನಂಬುತ್ತೇನೆ.

ಅನುವಾದಕರಿಗೆ ಏನು ಹೇಳಲು ಇಷ್ಟುಪಡ್ತೀರಿ?

ಏನು ಹೇಳಲಿ? ನಗುವಿನೊಂದಿಗೆ; ಮಾಡಿ (Short pause) ಅಷ್ಟೇ! ಇನ್ನೇನ್ ಹೇಳಕ್ಕಾಗತ್ತೆ? ಹೆಚ್ಚೆಚ್ಚು ಅನುವಾದ ಮಾಡಿ. ಎಷ್ಟು ವಿಭಿನ್ನ ಕೃತಿ, ಶೈಲಿಗಳು ನಮ್ಮ ಕನ್ನಡಕ್ಕೆ ಬಂದ್ರೆ ಅಷ್ಟು ಒಳ್ಳೇದು. More the merrier ನಮ್ಮ ಜಗತ್ ವಿಸ್ತಾರ ಆಗತ್ತೆ. ಸಂಕುಚಿತವಾಗಿ ನೋಡದನ್ನ ಬಿಡ್ತೀವಿ. ಕೆಟ್ಟ ಅನುವಾದ ಇದ್ರೂ ಪರವಾಗಿಲ್ಲ ಅನುವಾದಿವಿರಲಿ. ನಾವು ವಿಶ್ವ ಸಾಹಿತ್ಯವನ್ನ ಓದೋದೇ ಅನುವಾದದಲ್ಲಿ. 

Machine translation ಥರದ್ದು ಸಾಹಿತ್ಯದ ಅನುವಾದದಲ್ಲೂ ಬಂದರೆ? ಅನುವಾದದಲ್ಲಿ ತಂತ್ರಜ್ಞಾನ ಇಣುಕುವುದು ಆತಂಕದ ಸಂಗತಿ ಅಲ್ವ?

ಎಂ ಎಸ್: ಯಾವ್ದೂ ನಮಗೆ ಆತಂಕ ಆಗ್ಬಾರ್ದು. ಅದು ಅನುವಾದಕರನ್ನ ಇಲ್ಲವಾಗಿಸುವುದಿಲ್ಲ, ಸಾಧ್ಯವೂ ಇಲ್ಲ. ಅದಕ್ಕೆ ಸೂಕ್ಷ್ಮ ಗೊತ್ತಾಗೋಲ್ಲ. Machine translation ಮಾಡಿದ್ರೆ ಡಿಕ್ಷನರಿ ಹಿಡಿದು ಅನುವಾದ ಮಾಡಿದ್ಹಂಗಾಗತ್ತೆ. Machine translation, Artificial intelligence ಅನ್ನೋದು ಹಿಂದಿನ ಅನುವಾದದಿಂದ ಕಲಿತು ಪರಿಷ್ಕರಿಸುವ ಪ್ರಕ್ರಿಯೆ. ಅದು ಅನುವಾದಕರ ಆಯ್ಕೆಗಳನ್ನು ಹೆಚ್ಚಿಸುತ್ತದೆ. ಆದರೆ, ಅಲ್ಲಿಯ ಸಂದರ್ಭವನ್ನು algorithmಗೆ ಗ್ರಹಿಸಲು ಸಾಧ್ಯವಾ? ಅದಕ್ಕೂ ಮಾನವನೇ ಗ್ರಾಸ ಒದಗಿಸಬೇಕು. ಈಗ ನೀವು ಒಂದು ರೊಬೊ ಇಟ್ಕೊಂಡ್ರೆ ಅದಕ್ಕೆ input ಮಾಡ್ಬೇಕಾಗತ್ತೆ. 

ಅಡುಗೆ ಮಾಡುವಾಗ ನೀವು ಸಾರು ಮಾಡಿದ್ರೆ ಒಂದಿನ ಇದ್ದ್ಹಂಗೇ ಇನ್ನೊಂದಿನ ಇರತ್ತಾ? ಇಲ್ಲ ಅಲ್ವ. ಮಿಶಿನ್ ಮಾಡಿದ್ರೆ ದಿನದಿನವೂ ಒಂದೇ ಥರ, ಬೋರೆದ್ದು ಹೋಗತ್ತೆ. ಆಯ್ತಲ್ಲ ಅಲ್ಲಿಗೆ! ಮನುಷ್ಯರೇ ಅದನ್ನ ಮಾಡಿರೊದ್ರಿಂದ Ultimately ಎಲ್ಲವನ್ನ ನಾವು ಒಂದು ಸಾಧನವಾಗಿ ಉಪಯೋಗಿಸಿಕೊಳ್ತೀವಿ. ನನ್ನನ್ನು Google translate ಉಪಯೋಗಿಸ್ತೀರಾ ಅಂತ ಯಾರಾದರೂ ಕೇಳಿದ್ರೆ Of Course, Yes ಅನ್ನುತ್ತೇನೆ. ಮುಂಚೆ ನಾನು ಮೈಸೂರು ಯೂನಿವರ್ಸಿಟಿಯ ಇಂಗ್ಲಿಷ್-ಕನ್ನಡ ಡಿಕ್ಷನರಿ ಎಷ್ಟು ಉಪಯೋಗಿಸ್ತಾ ಇದ್ದೇನೋ ಹಾಗೆ ಮತ್ತು ಅದರ ಜೊತೆಗೆ ಇದನ್ನೂ ಉಪಯೋಗಿಸ್ತೀನಿ. Google translateನಲ್ಲಿ ಬಂದ ಪದಗಳನ್ನ ಪ್ರತಿಸಲ ಅನುವಾದದಲ್ಲಿ ಉಪಯೋಗಿಸ್ತಿನಾ? ಇಲ್ಲ. ಅದು ಕೊಡುವ ಮೂರ್ನಾಲ್ಕು ಸಾಧ್ಯತೆಗಳೂ ಸರಿ ಹೋಗದೇ, ಸಮಾನಾಂತರ ಪದಗಳ ಅರ್ಥ ಹುಡಕ್ತೀನಿ. ಅದೂ ಸರಿ ಹೋಗಲ್ಲ. ಹುಡುಕ್ತಾ ಹುಡುಕ್ತಾ ಸರಿಯಾದ ಪದದ ಕೊಕ್ಕೆ ಸಿಗತ್ತೆ. ಹಾಗಾಗಿ ಅದೊಂದು ಪರಿಕರ. ಇಸ್ಮಾಯಿಲ್ ಗೆ ಎಷ್ಟು ಫೋನ್ ಮಾಡ್ತೀನೋ, ಅಷ್ಟ ಗೂಗಲ್ Google translate ಸಹ ನೋಡ್ತಿನಿ. ಕಡೆಗೂ ಸಂದರ್ಭೋಚಿತ ಪದವನ್ನು ನನ್ನ ಮನಸ್ಸು ಹೇಳುತ್ತದೆಯೇ ಹೊರತು ಯಂತ್ರವಲ್ಲ!

Out of Subject Questions!!

ನೀವು ಬರೆದಿರುವ ಪುಸ್ತಕ ಮಾಯಾದರ್ಪಣದಲ್ಲಿ ಇರುವ ಟಿಕ್ ಟಿಕ್ ಗಡಿಯಾರಕತೆ ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟ. ಹೀಗೊಂದು ಕತೆ ಬರೆಯಬಹುದು ಅಂತ ಯೋಚನೆ ಹೊಳೆದಿದ್ದು ಹೇಗೆ?

(ಚಿಕ್ಕ Blushing smileನೊಂದಿಗೆ) ಗೊತ್ತಿಲ್ಲ… ಬಾಳಾ ಹಿಂದೆ ಬರೆದಿದ್ದು ಅದು. ಆಗ ನಾನು ಮಾರ್ಕ್ ಟ್ವೇನ್ (ಒಂದು ಕಾಲದಲ್ಲಿ ಇವ ನನ್ನ ಪ್ರಿಯ ಲೇಖಕ. ಟ್ವೇನ್‌ನದ್ದು ತುಂಬಾ ಅದ್ಬುತ ಜೀವನ. ಪ್ರಿಂಟಿಂಗ್ ಪ್ರೆಸ್ ಅಂತ ಶುರುಮಾಡಿ ದಿವಾಳಿಯಾಗಿ, ಆಮೇಲೆ ಇನ್ನೇನೋ ಮಾಡಿ ಕಡೆಗೆ ಭಾಷಣ ಕೊಡಲು ಜಗತ್ತಿನ ಯಾತ್ರೆ ಕೈಗೊಂಡು ತನ್ನ ದುಡ್ಡನ್ನು ಮರುಸಂಪಾದಿಸಿದ Experimental ಮನುಷ್ಯ) ತುಂಬಾ ಓದ್ತಿದ್ದೆ. ಇಷ್ಟು ಓದ್ತೀದಿನಲ್ಲ ಅವನು ಸೃಷ್ಟಿಸಿದ ಪಾತ್ರಗಳು, ಸಂದರ್ಭ ಎಲ್ಲ ಸೇರಿಸಿ ಕತೆ ಬರೀಬಹ್ದು ಅಂತನಸಿ ಬರ್ದೆ. ಆಮೇಲಾಮೇಲೆ ಈ ಗಡಿಯಾರ ಎಲ್ಲ ಕತೆಗಳಲ್ಲಿ ನುಸುಳಲು ಶುರು ಮಾಡಿತು ಅಂತ ಬೇರೆ ಕಡೆ ಹೊರಳಿದೆ. ಆಗಿನ ಸಮಯಕ್ಕೆ ಕೆಲವರು ಶೆರ್ಲಾಕ್ ಹೋಮ್ಸ್ ರಿಕ್ರಿಯೇಟ್ ಮಾಡೋಕೆ ಪ್ರಯತ್ನಿಸಿದ್ದರು; ಶೆರ್ಲಾಕ್ ಹೋಮ್ಸ್ ಸತ್ತಿಲ್ಲ, Conan Doyle ಬದಲು ನಾವು ಬರೆದ್ರೆ ಹೇಗಿರತ್ತೆ ಅನ್ನೋ ಥರದ ಕತೆಗಳು ಬಂದಿದ್ವು. ಬಹುಶಃ ಅದ್ರಿಂದ ಈ ಕತೆ ಟ್ರಿಗರ್ ಆಗಿರಬಹುದು. ನನ್ನ ಕತೆಗಳಲ್ಲಿ ಹೀಗೆ ನಿಜಜೀವನದ ಪಾತ್ರಗಳು ಆಗಾಗ ಒಳನುಸುಳುತ್ತಾರೆ. ನಂದನ್ ನಿಲೇಕಣಿ, ರಾಜೀವ್ ಗಾಂಧಿ, ಎನ್ ಟಿ ರಾಮಾರಾವ್… ‘ಇದು ಸುದ್ದಿ, ಇದು ಸುದ್ದಿ’ ಕತೆಯ ರಾಮಲಿಂಗರಾಜು ಕೂಡ ನಿಜಜೀವನದ ಪಾತ್ರ. ಅವರನ್ನೆಲ್ಲ ಕರ್ಕೊಂಡು ಬರೋದು ಮಜಾ ಅನಿಸತ್ತೆ. ಅವರ ಹೆಸರನ್ನು ಹಾಳು ಮಾಡದಿದ್ದಷ್ಟು ಕಾಲ ಈ ರೀತಿಯ ಮಜಾ ಒಳ್ಳೆಯದು ಅಂತ ನನಗನ್ನಿಸುತ್ತದೆ! ‘ಇವನ್ಯಾರು ಅಂತ ಗೊತ್ತಾಗದೆ ಇದ್ರೆ ತೊಂದರೆಯಿಲ್ಲ. ಗೊತ್ತಿದ್ರೆ ಒಂಥರಾ ಮಿಸ್ಟರಿ ಬರುತ್ತೆ. ‘ಮಾಸ್ತಿ ವೆಂಕಟೇಶ ಅಯ್ಯಂಗಾರ್’ ಅಂತಲೇ ಒಂದು ಕತೆ ಬರ್ದಿದೀನಿ. ಅದೂ ಕೂಡ ಇಂಥದ್ದೇ ‘ಪ್ರಯೋಗಾತ್ಮಕ ಪ್ರಯೋಗ!’ ಹುಕಿ ಬಂದಾಗಲೆಲ್ಲ ಈ ಥರದ್ದು ಮಾಡ್ತಾ ಇರ್ತಿನಿ. ಇದನ್ನ weakness, ವ್ಯಸನ, ಸಿಗ್ನೇಚರ್… ಏನಾದ್ರೂ ತಿಳ್ಕೋಬಹುದು! ನಾಗತಿಹಳ್ಳಿ ಚಂದ್ರಶೇಖರ್, ಸುಭಾಷ್ ಘಾಯ್ ಅವರು ತಮ್ಮ ಸಿನಿಮಾಗಳ ಒಂದು ಸೀನ್ ನಲ್ಲಿ ಬಂದು ಹೋಗ್ತಾರಲ್ಲ ಹಾಗೆ… (ನಗು).

ಪ್ರಥಮ್ ಬುಕ್ಸ್ ಮಕ್ಕಳಿಗೆ ದೇಶ/ಜಗತ್ತಿನಲ್ಲಿರುವ ಬೇರೆ ಬೇರೆ ರೀತಿಯ ಮನೆಗಳನ್ನು ಕತೆಗಳ ಮೂಲಕ ಪರಿಚಯಿಸತ್ತೆ. ಉದಾ: ಟೋಡಾ, ಭುಂಗಾ, ಇಲೂ…. ನೀವು ಈಗ ಗೋಲಾಕಾರದ ಮನೆಗಳ ಬಗ್ಗೆ ಹೇಳಬೇಕು! 

ಓಹ್… ತುಂಬಾ ಹಿಂದೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆ ಈ ರುದ್ರಮಾತಾದ ಬಗ್ಗೆ! ಗುಜರಾತಿನ ಕಛ್ ಜಿಲ್ಲೆಯಲ್ಲಿ ಬರುತ್ತೆ ಈ ಊರು. ಆ ಭಾಗದಲ್ಲಿ ಭೂಕಂಪವಾದ ಮೇಲೆ ಹೊಸದಾಗಿ ನಿರ್ಮಾಣವಾದ ಈ ಗ್ರಾಮದ ಮನೆಗಳೆಲ್ಲಾ ಗೋಳಾಕಾರ! ಒಂದು ಕೋಣೆ, ಹಂಚಿನ ಸೂರು! ಇಷ್ಟೇ ಅಲ್ಲಿನ ಮನೆಯ ಪರಿಕಲ್ಪನೆ!! 19ನೇ ಶತಮಾನದಲ್ಲಿ ಆದ ಭೂಕಂಪದ ನಂತರ ಯಾವುದೇ ಕೋನವಿಲ್ಲದ ಕಟ್ಟಡ ಭೂಕಂಪವನ್ನು ತಡೆದು ನಿಲ್ಲುತ್ತದೆ ಅನ್ನುವುದನ್ನ ಅವರುಗಳು ಕಂಡುಕೊಂಡರಂತೆ. ಹೀಗಾಗಿ ಉತ್ತರ ಕಛ್ ಪ್ರದೇಶದಲ್ಲಿ ಈ ಗೋಳಾಕಾರದ ಮನೆಗಳು ನಿರ್ಮಾಣವಾಗಿದ್ದಂತೆ. ಭೂಕಂಪ ಆಗೋ ಸಾಧ್ಯತೆ ಇರೋ ಜಾಗಗಳಲ್ಲಿ ಮಜಬೂತಾದ ಕಟ್ಟಡ ಕಟ್ಟಬಾರ್ದು ಅನ್ನೋದು ವೈಜ್ಞಾನಿಕವಾಗಿಯೂ ಸಾಬೀತಾದ ಸತ್ಯ.

ಸಮಕಾಲೀನ ಸಂಗತಿಗಳಿಗೆ ಬರೆಹದ ಮೂಲಕ ಸ್ಪಂದಿಸುವ ನಿಮ್ಮ ಸಂವೇದನೆ ರೂಪಗೊಂಡಿದ್ದು ಹೇಗೆ? (ಸಂವೇದನೆ ರೂಪಗೊಂಡಿದ್ದು ಹೇಗೆ ಎನ್ನುವ ಪ್ರಶ್ನೆಯೇ ಅಷ್ಟು ಸಂವೇದನಾತ್ಮಕ ಅಲ್ಲ. ಕ್ಷಮಿಸಿ).

ಪ್ರತಿಕ್ರಿಯಿಸೋದು ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ, ಕಾಲದಿಂದ ಕಾಲಕ್ಕೆ ಬದಲಾಗತ್ತೆ. ನಮ್ಮ ಯೌವನದಲ್ಲಿ ಸಂಪಾದಕರಿಗೆ ಪತ್ರ ಬರೀತಾ ಇದ್ವಿ. ಈಗ ಟ್ವಿಟರ್ ನಲ್ಲಿ ImHO – This, That… ಅಂತ ಬರಿಯೋ ಕಾಲ. ಯಾವುದೇ ಘಟನೆ/ಪರಿಸ್ಥಿತಿಗೆ ಕೂಡಲೇ ಪ್ರತಿಕ್ರಿಯೆ ಕೊಡೋದು ನನಗಿಷ್ಟವಾಗಲ್ಲ. ತಕ್ಷಣಕ್ಕೆ ಪ್ರತಿಕ್ರಿಯಿಸೋದು ನನ್ನ ಜಾಯಮಾನ ಅಲ್ಲ. ಹಾಗೆ ಮಾಡಿದ್ರೆ ಯೋಚನೆ ಮಾಡದೇ ಪ್ರತಿಕ್ರಿಯೆ ಕೊಟ್ಟಿದೀವಿ ಅನಿಸತ್ತೆ. ಯಾರಾದರೂ ಪ್ರಶ್ನೆ ಕೇಳಿದರೆ, ನಾನು ಪ್ರಾಮಾಣಿಕವಾಗಿ; ಇದರ ಬಗ್ಗೆ ಯೋಚಿಸಿಲ್ಲ, ಯೋಚ್ನೆ ಮಾಡಿ ಹೇಳ್ತೀನಿ ಅಂತಲೇ ಹೇಳ್ತೀನಿ. ಪತ್ರಿಕೆಯವರು ಬಜೆಟ್ ಬಗ್ಗೆ 300 ಪದಗಳಲ್ಲಿ ನಿಮ್ಮ ಪ್ರತಿಕ್ರಿಯೆ ಬರ್ಕೊಡಿ ಅಂದ್ರೆ; 1200 ಪದಗಳಿಲ್ದಿದ್ರೆ ಆಗಲ್ಲ ಅಂತೀನಿ. ನನ್ನ ಪ್ರತಿಕ್ರಿಯೆಯ ತೀರ್ಮಾನಕ್ಕೆ ಒಂದು ವಾದ ಮಂಡಿಸಬೇಕು, ನನ್ನ ತೀರ್ಮಾನದ ಹಿನ್ನೆಲೆ ಏನು ಅನ್ನೋದನ್ನ ವಿವರಿಸಲು ನಾನು ಇಷ್ಟಪಡ್ತೀನಿ. ಸಮಕಾಲೀನದಲ್ಲಿ ನಡಿತಿರೋದಕ್ಕೆ ಪ್ರತಿಕ್ರಿಯೆ ಕೊಡಬೇಕು ಅಂತನಿಸಿದ್ರೂ, ನಾನು ತಕ್ಷಣ ಪ್ರತಿಕ್ರಿಯೆಯ ವೇದಿಕೆಗಳನ್ನ ಬಳಸಲ್ಲಾದ್ದರಿಂದ, ಅದೆಲ್ಲ ಮನಸಲ್ಲಿ ಕೂತಿರತ್ತೆ. ಪ್ರತಿಕ್ರಿಯಿಸುವ ಒತ್ತಡ ತೀವ್ರವಾದಾಗ ಬರೆವಣಿಗೆಯಲ್ಲಿ ವ್ಯಕ್ತವಾಗತ್ತೆ. 

ಉದಾ: ‘ಬೇಟೆಯಲ್ಲ ಆಟವೆಲ್ಲದಲ್ಲಿನ ಅಖ್ತರ್ ಪಾತ್ರ. ಈ ಪಾತ್ರ ಸೃಷ್ಟಿಯ ಹಿನ್ನೆಲೆ ಆಸ್ತಕಿಕರವಾಗಿದೆ. ಹೈದರಾಬಾದಿನಲ್ಲಿ ಪ್ರತಿವರ್ಷ ಮಂಥನ್ (ಪ್ರಥಮ್ ಬುಕ್ಸ್ ಮಂಥನ್ ಅಲ್ಲ!) ಅಂತ ನಡೆಯತ್ತೆ. ಅದರಲ್ಲೊಮ್ಮ ದೆಹಲಿ ಯೂನಿವರ್ಸಿಟಿಯ ಹಿಂದಿ ಪ್ರೊಫೆಸರ್ ಅಪೂರ್ವಾನಂದ್ ಸಮಕಾಲೀನ ಸಂಗತಿಗಳ ಬಗ್ಗೆ ಮಾತಾಡಿದ್ರು. ಮುಸ್ಲಿಂ ಹುಡುಗನಿಗೆ ಬಲವಂತವಾಗಿ ಗಡ್ಡ ಶೇವ್ ಮಾಡಿ ಕಳುಹಿಸಿದರೆ, ಕುರ್ತಾ ಪೈಜಾಮ ಹಾಕೋದನ್ನ ವಿರೋಧಿಸಿದ್ರೆ, ಸರ್ದಾಜಿಯ ಪೇಟ ತೆಗೆಸಿದ್ರೆ ಅದು ಆ ವ್ಯಕ್ತಿಯ ಮೇಲೆ ಎಸಗುವ ದೌರ್ಜನ್ಯ ಮತ್ತು ಕ್ರೌರ್ಯ ಎಂದು ಹೇಳಿದ್ದರು. ಬಾಹ್ಯವಾಗಿ ಯಾವುದೇ ಗಾಯಗಳು ಕಾಣದಿದ್ದ ಮಾತ್ರಕೆ ಅವರು ಘಾಸಿಗೊಂಡಿಲ್ಲ ಅಂತ ಅರ್ಥವಲ್ಲ. ಅದು ಒಂದು ಪೆಟ್ಟು. ಆ ವ್ಯಕ್ತಿತ್ವದ ಆಂತರ್ಯವನ್ನು ಕಲಕಿರುವ ದಾಳಿ. Insulting anybody is also injuring somebody... ಅಖ್ತರ್ ಪಾತ್ರ ಸೃಷ್ಟಿಯಾಗಲು ಹುಕ್ ಸಿಕ್ಕಿದ್ದೆ ಇಲ್ಲಿ. ಅದನ್ನ ಬರೆಯುತ್ತಿರುವಷ್ಟು ಕಾಲವೂ ಹಿನ್ನೆಲೆಯಲ್ಲಿ ಅಪೂರ್ವಾನಂದ್ ಮಾತುಗಳೇ ಓಡ್ತಿದ್ದವು ತಲೆಯಲ್ಲಿ. In fact, ಎರಡು ಮೂರು ಸಲ ಆ ಟಾಕ್ ಕೇಳ್ದೆ ಕೂಡ. ಆದ್ರೆ ಆ ಟಾಕ್ ಕೇಳಿದ್ರೆ, ಈ ಕ್ಯಾರೆಕ್ಟರ್ ಓದಿದ್ರೆ ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಅಂತಲೇ ಅನಿಸತ್ತೆ. ಆದ್ರೆ ವರ್ತಮಾನದ ಸಂಗತಿಗಳಿಗೆ ಹೇಗೆ ಪ್ರತಿಸ್ಪಂದಿಸೋದು ಅನ್ನೋದಿದೆಯಲ್ಲ ಅದನ್ನ ಹೇಳ್ತಿರೋದು ನಾನು. ಅವರು ಏನ್ ಹೇಳ್ತಿದಾರೆ ಅನ್ನೋದು ಮುಖ್ಯ. ಜೊತೆಗೆ ಅದನ್ನ ನಾನು ನನ್ನ ಲೋಕದಲ್ಲಿ ಹೇಗೆ ವ್ಯಾಖ್ಯಾನ ಮಾಡುತ್ತೇನೆ ಮತ್ತು ಅದನ್ನು ಹೇಗೆ ವ್ಯಕ್ತಪಡಿಸುತ್ತೇನೆ, ಪ್ರತಿಕ್ರಿಯಿಸುತ್ತೇನೆ ಅನ್ನೋದೂ ಮುಖ್ಯ. ನಾನು ಅದಕ್ಕಾಗಿ ಒಂದು ಪಾತ್ರ ಸೃಷ್ಟಿಸಿ ಅದರ ಮೂಲಕ ಹೇಳಿದೀನಿ. 

ಅದರಲ್ಲಿ ಒಂದು ಸೂಕ್ಷ್ಮವಿದೆ: ಪ್ರತಿ ಸಲ ಸುಜಾತಾಳಿಗೆ ಅಖ್ತರನನ್ನು ತಬ್ಬಿ ಸ್ವಾಗತಿಸಬೇಕು-ಬೀಳ್ಕೊಡಬೇಕು ಅಂತ ಅನ್ನಿಸುತ್ತಿರುತ್ತದೆ. ಆದರೆ, ಬರೇ ಕೈಕುಲುಕಿ ಬೆನ್ನು ಚಪ್ಪರಿಸುತ್ತಾಳೆ. ಈ ತಬ್ಬುವುದು ಅನಿರುದ್ಧನ ಜೊತೆ ಅಷ್ಟು ಕಷ್ಟವಾಗೋಲ್ಲ. ಎಲ್ಲೋ ಒಂದು ಕಡೆ ಅವಳಲ್ಲಿ ಸುಪ್ತವಾಗಿರುವ ಪೂರ್ವಾಗ್ರಹದ ಗಡಿಗಳನ್ನ ಪ್ರಯತ್ನಪೂರ್ವಕವಾಗಿಯೂ ಮೀರಕ್ಕಾಗಲ್ಲ, ನಾವೆಲ್ಲರೂ ನಮ್ಮದೇ ಆದ ಸ್ವಂತ ಮಿತಿಗಳೊಳಗೆ ಬದಕ್ತೀವಿ. ಹಾಗಾಗಿ ನಾನು ಸಮಕಾಲೀನದಲ್ಲಿ ನಡಿತಿರೋದನ್ನ ಗ್ರಹಿಸಿ, ಬರೆವಣಿಗೆ ಮೂಲಕ ಪ್ರತಿಸ್ಪಂದಿಸ್ತೀನಿ.

ನಿಮ್ಮನ್ನು ತುಂಬಾ ಕಳವಳಕ್ಕೀಡು ಮಾಡುವ ಸಂಗತಿ?

ನನಗೆ ಎರಡು ಸಂಗತಿಗಳು ಕಳವಳಕ್ಕೀಡು ಮಾಡುತ್ತವೆ. ಒಂದು: ಸರಕಾರದ ನೋಟಿಸ್ ಬಂದ್ರೆ ತುಂಬಾ ಕಳವಳ ಆಗತ್ತೆ. ಮೊದಲಿಂದಲೂ ಸರಕಾರದ ಅಧಿಕಾರಿಗಳ ಬಗ್ಗೆ ಭಯ. ಅಪ್ಪ ಸರಕಾರದಲ್ಲಿ ಇದ್ದಿದ್ದರಿಂದ ಬಂತೋ ಏನೋ ಗೊತ್ತಿಲ್ಲ. ಇನ್ನೊಂದು: ಬೆಳಗ್ಗೆ ಎದ್ದು ನಲ್ಲಿ ತಿರುಗಿಸಿದಾಗ ನೀರು ಬರ್ದೆ ಇರೋದು ವಿಪರೀತ ಕಿರಿಕಿರಿ ಮಾಡತ್ತೆ. ಮೋಟರ್ ಆನ್ ಮಾಡಲು ಹೋದಾಗ ಅದು ಸುಟ್ಟೋಗಿದ್ರೆ… ಒಂದ್ ಹತ್ತು ಕಾಲ್ ಮಾಡಿ, ಮನೆಯಲ್ಲಿದ್ದವರನ್ನೆಲ್ಲ ತುರ್ತುಸಭೆ ಕರ್ದು, ಮೇಲಿನ ಟ್ಯಾಂಕಿಗೆ ನೀರು ಏರುವುದು ಇನ್ನು ಯಾವ ಕಾಲಕ್ಕೆ ಏನೋ? ಅತ್ಯಗತ್ಯಕ್ಕೆ ಬಿಟ್ಟು ಬೇರೆ ಯಾವುದಕ್ಕೂ ನಲ್ಲಿಯಿಂದ ನೀರು ಬಿಟ್ಕೋಬೇಡಿ ಅಂತ ಫರ್ಮಾನು ಹೊರಡಿಸ್ತೀನಿ. ಇದ್ರಿಂದ ದೊಡ್ಡ ತೊಂದ್ರೆ ಏನಾಗಲ್ಲ. ಆದ್ರೂ… ತಕ್ಷಣ ಪರಿಹಾರ ಕಂಡುಕೊಳ್ಳದಿದ್ರೆ ನಂಗೆ ಮುಂದೆ ಇನ್ನೇನೂ ಮಾಡಕ್ಕಾಗಲ್ಲ. ಪ್ರಪಂಚದಲ್ಲಿ Electricity, Water supply ಬಂದ್ ಆಗೋಗಿಬಿಟ್ರೆ ಅನ್ನೋ ಯೋಚನೆಯೇ ನಂಗೆ ತುಂಬಾ ಕಳವಳ ಉಂಟು ಮಾಡತ್ತೆ. 

ಪ್ರಥಮ್ ಬುಕ್ಸ್ನ ಐದು ಪುಸ್ತಕಗಳ ಹೆಸರು? ಮಗನಿಗೆ ಹೇಳಿದ ಮೊದಲ ಕತೆ? ಮಕ್ಕಳ ಪುಸ್ತಕಗಳು, ನಿಮಗಿಷ್ಟವಾದವು?

ಪುಚ್ಕು’ ‘ಶ್ರೀಂಗೇರಿ ಶ್ರೀನಿವಾಸ’ ‘ಮಲರ್ ಕಟ್ಟಿದ ದೊಡ್ಡ ಮನೆ’ ‘ನನ್ನ ಹಾರೈಕೆ’ ‘ಐದನೇ ಸಂಖ್ಯೆ ಎಲ್ಲಿ?’. ಮಗನಿಗೆ ಹೇಳಿದ ಮೊದಲ ಕತೆ: ಜಯಂತ ಕಾಯ್ಕಿಣಿದು. ಹೆಸರು ಮರೆತು ಹೋಗಿದೆ. ಆ ಕತೆಯಲ್ಲಿ; ತುಂಬಾ ಕೋಪಗೊಂಡಿದ್ದ ಸಿಟಿ ಬಸ್ ಡ್ರೈವರ್ ಡಬಲ್ ಡೆಕ್ಕರ್ ಬಸ್ಸನ್ನ ಮುಂಬಯಿಯಿಂದ ರತ್ನಗಿರಿಗೆ ತಗೊಂಡು ಹೋಗಿ ಬಿಡ್ತಾನೆ. ಆರ್ಡಿನರಿ ಬಸ್ ತಗೊಂಡು ಹೋಗಿಬಿಡ್ಬೋದು ಕಣ್ರೀ… ಡಬಲ್ ಡೆಕ್ಕರ್ ಬಸ್ ಅಷ್ಟು ಸುಲಭ ಅಲ್ಲ. ನಂಗೇ ಬಾಳಾ ಅದ್ಭುತ ಅನಿಸಿದ ಕತೆ ಅದು. ಅದನ್ನೇ ಸ್ವಲ್ಪ ಅಪಭ್ರಂಶ ಮಾಡಿ ಮಗನಿಗೆ ಹೇಳಿದ್ದೆ. ಕೆ ವಿ ತಿರುಮಲೇಶ್, ವೆಂಕಟೇಶಮೂರ್ತಿ ಅವರುಗಳು ಮಕ್ಕಳಿಗಾಗಿ ಬರ್ದಿರೋ ಸಾಹಿತ್ಯ, ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎಲ್ಲ ಇಷ್ಟ. ಬೆಳದದ್ದೆ ಚಂದಮಾಮ, ಬಾಲಮಿತ್ರ ಓದ್ಕೋಂಡು… ವಿಕ್ರಮ ಬೇತಾಳನ ಕತೆಗಳು, ಒಂದೂರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನು… ಇಲ್ಲಿಂದ ನಾವೆಲ್ಲರೂ ಒಳ್ಳೆಯವರಾಗಿರಬೇಕು… (ನಗು) ಹ್ಯಾರಿ ಪಾಟರ್ ನನಗೆ ಮಕ್ಕಳ ಕತೆ ಅನಿಸೋಲ್ಲ. ಅದರಲ್ಲಿ ತುಂಬಾ ಕ್ರೌರ್ಯ ಇದೆ. 

Rapid Round

It drives me crazy – ಕನ್ನಡದಲ್ಲಿ ಹೇಳಿ.

– ತಲೆ ಕೆಟ್ಟ್ಹೋಗ್ಬಿಟ್ಟಿದೆ

ಚಾಮರಾಜಪೇಟೆ ಹೇಗಿದೆ?

– ಚಾಮರಾಜಪೇಟೆ ಇಸ್ ಓಕೆ… ಮೈಸೂರ್ ಇಸ್ ವಂಡರ್ಫುಲ್

ಜಗಳಾಡಕ್ಕೆ ಬರುತ್ತಾ?

– ಓಹ್ ಫಸ್ಟ್ ಕ್ಲಾಸಾಗಿ… 

‘ಅನುವಾದವನ್ನ ಸಂಭ್ರಮಿಸೋಣ’ ಸರಣಿಯ ಮುಂದಿನ ಕಂತಿಗೆ ಯಾರಿಗೆ ‘ಖೊ’ ಕೊಡಲು ಇಷ್ಟಪಡುತ್ತೀರಿ?

ಕೇಶವ ಮಳಗಿ 

Wonderful… ಯಾವುದಕ್ಕೆ ಹೇಳ್ತೀರಿ? 

– ಈ ಇಂಟರ್ ವ್ಯೂಗೆ!

 

ಸಂದರ್ಶನದ ಇಂಗ್ಲಿಷ್ ಆವೃತ್ತಿಯ ಲಿಂಕ್ ಇಲ್ಲಿದೆ. 

ಈ ಸಂದರ್ಶನ ಮೊದಲು ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here