Uncategorized

ಮುಕ್ತ ಅನುವಾದಕ್ಕೆ ಜನ ಸೇರಿಸಿದ ಫೇಸ್‌ ಬುಕ್ಕು, ವಾಟ್ಸ್ಯಾಪು!

*ಕೊರೊನಾ ಕಾಲದಲ್ಲಿ ಕೈ ಹಿಡಿದ ತಂತ್ರಜ್ಞಾನ

by Bhargavi G M

ಮಕ್ಕಳ ಕತೆಗಳ ಅನುವಾದಕ್ಕೆ ಹೀಗೊಂದು ಅವಕಾಶ ಎಂದು ನಾಲ್ಕೈದು ಮಂದಿ ಸಮಾನ ಮನಸ್ಕರೊಂದಿಗೆ ಹಂಚಿಕೊಂಡಾಗಲೆಲ್ಲ ಆಯಿತು ಖಂಡಿತ ಮಾಡೋಣ ಅನ್ನುವ ಪ್ರತಿಕ್ರಿಯೆಯೇ ಬಂದಿದೆ. ಆದರೆ, ಅದಾಗಲೇ ಪ್ರಪಂಚದ ಆಗು-ಹೋಗುಗಳ ಬಗ್ಗೆ ನೂರಾರು ತರಹ ವಿಶ್ಲೇಷಿಸುವ ನಮ್ಮ ಬುದ್ಧಿ, ಅದೇಕೋ ಸರಳ ಭಾಷೆಯಲ್ಲಿ ಮಕ್ಕಳಿಗೊಂದು ಕತೆ ಬರೆಯುವುದನ್ನೋ, ಹೇಳುವುದನ್ನೋ ಮಾಡಲು ಹೋದರೆ ಮಂದವಾಗಿ ಬಿಡುತ್ತದೆ. ಬಹುಶಃ ಇಲ್ಲಿ ವಿಷಯ, ವಸ್ತು ಮತ್ತು ಕತೆಯ ಹೇಳುಗಾರಿಕೆಯ ವೈಖರಿ ಇಂದಿದ್ದಂತೆ ನಾಳೆ ಇರದ ನಿರಂತರತೆಯದ್ದೇ ಸವಾಲು.  

Illustration by Alankrita Amaya

ಕಳೆದ ಫೆಬ್ರವರಿಯಲ್ಲಿ ಬಸವನಗುಡಿಯ ಮುನ್ನೋಟ ಪುಸ್ತಕದಂಗಡಿಯಲ್ಲಿ ನಾವು ನಡೆಸಿದ ಸ್ವಯಂಪ್ರೇರಿತ ಅನುವಾದ ಚಟುವಟಿಕೆಯ ಮುಂದಿನ ಭಾಗವನ್ನು ಇನ್ನೇನು ಆರಂಭಿಸಬೇಕಿತ್ತು.
ಈ ಬಾರಿ ೧೫ಕ್ಕೂ ಹೆಚ್ಚು ಕತೆಗಳನ್ನ ಅನುವಾದಿಸಲು ಆಸಕ್ತರನ್ನು ಒಗ್ಗೂಡಿಸಬೇಕಿತ್ತು. 

ಈ ಮೇಲಿನ ಚಿತ್ರ ಯಾವ ಕತೆಯದ್ದೆಂದು ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಆದರೆ, ಈ ಕೊರೊನಾದ ಲಾಕ್‌ ಡೌನ್‌ ಮಧ್ಯೆ ಕಳೆದ ಸಲದಂತೆ ಈ ಸಲ ಒಬ್ಬೊಬ್ಬರನ್ನಾಗಿ ಒಗ್ಗೂಡಿಸಿ, ಮಾತುಕತೆಯಾಡಿ, ವಿಶ್ಲೇಷಿಸಿ ಈ ಚಟುವಟಿಕೆ ನಡೆಸುವುದಂತೂ ಅಸಾಧ್ಯದ ಮಾತೇ ಆಗಿತ್ತು. ಇದೇ ಸಂಬಂಧ ಇಜ್ಞಾನದ ಶ್ರೀನಿಧಿ ಅವರೊಂದಿಗೆ ಮಾತನಾಡುತ್ತಿದ್ದಾಗ, ಫೇಸ್‌ ಬುಕ್‌ ಪುಟದಲ್ಲಿ ಹೀಗೊಂದು ಅವಕಾಶವಿದೆ ಎಂದು ಪೋಸ್ಟ್‌ ಮಾಡಿ ನೋಡೋಣ ಎಂದುಬಿಟ್ಟರು. ಆಶ್ಚರ್ಯ ಎನಿಸಿದರೂ ಮುಂದಿನ ಎರಡು ಗಂಟೆಯೊಳಗೆ ಹೀಗೆ ನೋಂದಾಯಿಸಿಕೊಂಡವರ ಸಂಖ್ಯೆ ೫೦ ದಾಟಿತ್ತು! ಹೀಗೆ, ಚಿಕ್ಕಾಸನ್ನೂ ಪಡೆಯದೇ ಅನುವಾದ ಮಾಡಿಕೊಡಲು ಒಪ್ಪಿದ ಮಕ್ಕಳ ಮನಸ್ಸಿನ ಎಲ್ಲಾ ಆಸಕ್ತರಿಗೂ ನಾವು ಆಭಾರಿಗಳು. 

ಮರುದಿನವೇ ೫೦ ಜನರ ವಾಟ್ಸಾಪು ಗುಂಪೊಂದು ರಚನೆಯಾಗಿ, ಎರಡು ದಿನಗಳ ನಂತರ ಗೂಗಲ್‌ ಹ್ಯಾಂಗೌಟ್‌ ಮೂಲಕ ಆಸಕ್ತರಿಗೆ ಕರೆ ಮಾಡಿದೆವು,  ಹಿರಿಯ ವಿಜ್ಞಾನಿ ಹಾಗೂ ಪ್ರಥಮ್‌ ಬುಕ್ಸ್ ನ‌ ಸಂಪನ್ಮೂಲ ವ್ಯಕ್ತಿ ಕೊಳ್ಳೇಗಾಲ ಶರ್ಮ ಹಾಗೂ ಇಜ್ಞಾನದ ಶ್ರೀನಿಧಿ ಇಬ್ಬರೂ ಬಲು ಪ್ರೀತಿಯಿಂದ ಅನುವಾದಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಜೊತೆಗೆ, ವಿಮರ್ಶೆಯ ಹೊಣೆಯನ್ನೂ ಹೊತ್ತುಕೊಂಡರು.  

ಇನ್ನು, ಮಕ್ಕಳ ಕತೆಗಳ ಬಗ್ಗೆ ವಿಶೇಷ ಕಾಳಜಿಯಿಂದ ಕೆಲಸ ಮಾಡುತ್ತಿರುವ ಧನಪಾಲ ನಾಗರಾಜಪ್ಪ ಹಾಗೂ ಕಲಾಧರ ಅವರು ಸಹ ೭ ಪುಸ್ತಕಗಳ ಅನುವಾದವನ್ನು ತಮ್ಮ ಪರಿಚಿತರ ಹಾಗೂ ಮಕ್ಕಳೊಂದಿಗೆ ಕೆಲಸ ಮಾಡುತ್ತಿರುವ ಆಸಕ್ತರಿಂದ ಮಾಡಿಸಿಕೊಡುವ, ಅದರ ವಿಮರ್ಶೆಯನ್ನು ಖುದ್ದಾಗಿ ಮಾಡಿಕೊಡುವ ಭರವಸೆಯನ್ನೂ ಕೊಟ್ಟರು. ಹೀಗಾಗಿ, ಒಟ್ಟು ೨ ಗುಂಪು ರಚನೆಯಾಯಿತು. ಈ ಎಲ್ಲಾ ಕತೆಗಳ ರಿವ್ಯೂ ಪ್ರಕ್ರಿಯೆ ಹಾಗೂ ಅಂತಿಮ ರೂಪದ ಕುರಿತು ಮುಂದೆ ಇದೇ ವೇದಿಕೆಯಲ್ಲಿ ಇನ್ನಷ್ಟು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. 

ಕೊರೊನಾದ ಈ ಸಮಯದಲ್ಲಿ ಸ್ಕೂಲು ಶುರುವಾಗುವುದು ಯಾವ ಕಾಲಕ್ಕೋ ಎಂದು ಅಪ್ಪ – ಅಮ್ಮಂದಿರ ತಾಳ್ಮೆ ಪರೀಕ್ಷಿಸುವ ಕಂದಮ್ಮಗಳಿಗೆ, ಇಂತಹ ಮುದ ನೀಡುವ ಮಕ್ಕಳ ಅನುವಾದಿತ ಕತೆಗಳು ನಮ್ಮ ಕಡೆಯಿಂದ ಒಂದು ಸಣ್ಣ ಉಡುಗೊರೆಯಷ್ಟೆ.

ಮಕ್ಕಳ ಕತೆಗಳನ್ನು ಅನುವಾದಿಸಲು ನಿಮಗೂ ಆಸಕ್ತಿ ಇದ್ದರೆ, ಇಲ್ಲಿವೆ ಒಂದಿಷ್ಟು ಅವಕಾಶ.

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here