Uncategorized

‘ಮಕ್ಕಳ ಜನಪ್ರಿಯ ಸಾಹಿತ್ಯ ಗುಚ್ಛ’ ಬಿಡುಗಡೆ

Bhargavi G M (Kannada Editor, Pratham Books) writes about the launch of ‘Makkala Janapriya Sahitya‘ : a set of five children’s books showcasing the wonderful works of five of Kannada literature’s greatest poets.

ಮಕ್ಕಳ ಕಥೆ ಸರಳವಾಗಿಯೇ ಇರಬೇಕಿಲ್ಲ‘ – ವಿವೇಕ ಶಾನಭಾಗ

ಮಕ್ಕಳ ಕಥೆ ಅಂದಾಕ್ಷಣ, ಅದು ಸರಳವಾಗಿರಬೇಕು, ಇಷ್ಟು ವಯಸ್ಸಿನ ಮಕ್ಕಳಿಗೆ ಇಷ್ಟು ಪದಗಳ ಮಿತಿ ಸಾಕು, ಇಷ್ಟು ಹೊಸ ಪದಗಳನ್ನೂ ಸೇರಿಸಿದರೆ ಹೇಗೆ?, ಮಾತಾಡಿದಂತೆ ಬರೆದರೆ ಮಕ್ಕಳ ಕಲಿಕಾ ಕೌಶಲಗಳಿಗೆ ಪೆಟ್ಟು ಬೀಳಲ್ಲವಾ? ಕನ್ನಡವೇಕೋ ಇಂಗ್ಲಿಷಿನಷ್ಟು ಸಲೀಸಾಗಿ ಓದಿಸಿಕೊಳ್ಳುತ್ತಿಲ್ಲವಲ್ಲ… ಹೀಗೆಲ್ಲಾ ಅಂದುಕೊಳ್ಳುತ್ತಾ ಅನುವಾದಕರ ವಾಕ್ಯಗಳಿಗೆ ಕತ್ತರಿ ಹಾಕುತ್ತಲೇ ಇರುವುದು ನಮ್ಮ ಅನುದಿನದ ಪ್ರಯೋಗ. ಇನ್ನು, ಕನ್ನಡದ ಶ್ರೇಷ್ಠ ಕವಿಗಳು ಮಕ್ಕಳ ಸಾಹಿತ್ಯವೆಂದು ಕಡೆಗಣಿಸದೇ ನಿರಾಯಾಸವಾಗಿ ಬರೆದ ಮಕ್ಕಳ ಜನಪ್ರಿಯ ಸಾಹಿತ್ಯಕ್ಕೆ ಆಯ್ಕೆಯಾಗಿದ್ದವು. ಈ ಸರಳ ಪದ್ಯಗಳನ್ನು ಚಿತ್ರಕಾರರಿಗಾಗಿ ಇಂಗ್ಲಿಷಿಗೆ ಅನುವಾದಿಸುವ ಪ್ರಯತ್ನ ಮಾಡಿದ್ದೆವು. ಆಗಲೇ, ಎಲ್ಲಾ ಕಾಲಕ್ಕೂ ಪ್ರಸ್ತುತವಾಗಬಲ್ಲ ಈ ಪದ್ಯಗಳು ಕನ್ನಡ ಸಾಹಿತ್ಯ ಶ್ರೀಮಂತಿಕೆಯ ಕುರುಹಲ್ಲದೇ ಮತ್ತೇನಲ್ಲ ಅನಿಸಿತು. “ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯಶಿಷು” ಎಂಬ ಕುವೆಂಪು ಅವರ ಸಾಲುಗಳು ನೆನಪಾದವು.
ಬೆಂಗಳೂರು: ಮಕ್ಕಳಿಗೆ ಸರಳವಾಗಿಯೇ ಕಥೆ ಹೇಳಬೇಕಿಲ್ಲ, ಸಂಕೀರ್ಣ ವಿಷಯಗಳನ್ನು ಅವರು ಅರ್ಥ ಮಾಡಿಕೊಳ್ಳಬಲ್ಲರು. ನನ್ನ ಮಕ್ಕಳಿಗೆ ನನಗಿಂತಲೂ ಅವರಜ್ಜಿ ಹೇಳುವ ಕಥೆಯೇ ಇಷ್ಟವಾಗುತ್ತಿತ್ತು ಎಂದು ಲೇಖಕ, ನಾಟಕಕಾರ ವಿವೇಕ ಶಾನಭಾಗ ಹೇಳಿದರು.
ಪ್ರಥಮ್ ಬುಕ್ಸ್ ನಿಂದ ನಗರದ ರಿಟ್ಜ್ ಕಾರ್ಲ್ಟನ್ ಹೋಟೆಲ್ ನಲ್ಲಿ ಏರ್ಪಡಿಸಿದ್ದ ‘ಮಕ್ಕಳ ಜನಪ್ರಿಯ ಸಾಹಿತ್ಯ’ – ಚಿತ್ರಪುಸ್ತಕ ಗುಚ್ಛ ಅನಾವರಣಗೊಳಿಸಿ ಮಾತನಾಡಿದರು.
“ಬರೆದಂತೆ ಓದಲು, ಓದಿದಂತೆ ಬರೆಯಲು ಬರುವ ಏಕೈಕ ಭಾಷೆ ಕನ್ನಡ. ಈ ಗುಚ್ಛದಲ್ಲಿನ ಐದು ಕವನಗಳು ಸಹ ಮಕ್ಕಳ ಅನುಭವ ಪ್ರಪಂಚವನ್ನು ವಿಸ್ತರಿಸುವಂತಹದ್ದೇ ಆಗಿವೆ. ಉದಾಹರಣೆಗೆ ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’ ಕವನದಲ್ಲಿ ಶಬ್ದಗಳ ಲಾಲಿತ್ಯ ಮಕ್ಕಳಲ್ಲಿ ಬೆರಗು ಮೂಡಿಸುತ್ತದೆ. ಬಾಲ್ಯದ ಸಹಜ ಕುತೂಹಲವನ್ನು ತಣಿಸುತ್ತದೆ” ಎಂದರು.

ಏನಿದು ‘ಮಕ್ಕಳ ಜನಪ್ರಿಯ ಸಾಹಿತ್ಯ’


ಕನ್ನಡದ ಶ್ರೇಷ್ಠ ಕವಿಗಳಾದ ಪಂಜೆ ಮಂಗೇಶರಾಯ, ಕುವೆಂಪು, ಡಾ.ಜಿ.ಪಿ.ರಾಜರತ್ನಂ, ಡಾ.ಸಿದ್ಧಯ್ಯ ಪುರಾಣಿಕ, ಬಿ.ಕೆ.ತಿರುಮಲಮ್ಮ ಅವರ ಆಯ್ದ ಕವನಗಳ ಸಂಗ್ರಹವೇ ಮಕ್ಕಳ ಜನಪ್ರಿಯ ಸಾಹಿತ್ಯ ಗುಚ್ಛ. ಪುಸ್ತಕಗಳ ಪರಿಚಯ ನೀಡಿದ ವಿವೇಕ ಶಾನಭಾಗ, ಈ ಕವನಗಳು ಯಾವುದೇ ಆಲೋಚನೆಯಿಂದ ಮೂಡಿದ್ದಲ್ಲ, ಅದೊಂದು ಅನುಭವ. ಅದನ್ನು ಇಡಿಯಾಗಿ ಮಕ್ಕಳಿಗೆ ತಿಳಿಸುವ ಪ್ರಯತ್ನವಾಗಿ ಇದನ್ನು ಆಯ್ಕೆ ಮಾಡಿದೆ. ಜತೆಗೆ, ಕನ್ನಡದ ಕೆಲ ಮುಖ್ಯ ಲೇಖಕರ ಪರಿಚಯವನ್ನೂ ಮಾಡಿಸುವ ಉದ್ದೇಶವಿತ್ತು. ನಾವು ಚಿಕ್ಕವರಿದ್ದಾಗ ಓದಿದ ಕವಿತೆಗಳಲ್ಲಿರುವ ಚಿತ್ರಗಳು‌ ಇನ್ನೂ ನೆನಪಿವೆ. ಮರು ಚಿತ್ರಿಸಿರುವ ತುತ್ತೂರಿ, ಅಜ್ಜನ ಕೋಲು, ನಮ್ಮ ಮನೆಯ ಸಣ್ಣ ಪಾಪ ಎಲ್ಲ ಕವನಗಳಿಗೂ ಸುಂದರ ಚಿತ್ರಗಳಿವೆ. ಇವು ಈ ಕಾಲದ ಕನ್ನಡ ‌ಬಲ್ಲ ಮಕ್ಕಳು ಮತ್ತು ಕನ್ನಡೇತರರನ್ನೂ ಆಕರ್ಷಿಸುವ ವಿಶ್ವಾಸವಿದೆ” ಎಂದರು.

ರಾಜರತ್ನಂ ಅವರಲ್ಲಿತ್ತು ಪುಸ್ತಕ ಭಂಡಾರ
ಡಾ.ಜಿ.ಪಿ.ರಾಜರತ್ನಂ ಅವರ ಸೋದರ ಸಂಬಂಧಿ ಉಷಾ ಮುಕುಂದ ಮಾತನಾಡಿ, ಚಿಕ್ಕಂದಿನಲ್ಲಿ ನನಗೆ ಪುಸ್ತಕ ಓದುವ ಹವ್ಯಾಸವಿತ್ತು. ಆದರೆ, ಅದು ಬಹುಶಃ ನನ್ನನ್ನು ಇದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲೇ ಮುಂದುವರಿಯಲು ಪ್ರೇರಣೆ ನೀಡಿದ್ದು ನನ್ನ ಚಿಕ್ಕಪ್ಪ ರಾಜರತ್ನಂ ಅವರೊಂದಿಗಿನ ಒಡನಾಟವೇ. ಏಕೆಂದರೆ, ಸಾಕಷ್ಟು ಪುಸ್ತಕಗಳ ಪರಿಚಯವನ್ನೂ ಅವರು ನನಗೆ ಮಾಡಿಸಿದ್ದರು. ತಮ್ಮಲ್ಲಿನ ಪುಸ್ತಕ ಸಂಗ್ರಹಗಳನ್ನು ಸಭೆ, ಸಮಾರಂಭಗಳಿಗೆ ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತಿದ್ದರು. ಒಂದು ವೇಳೆ, ಹಾಗೆ ಪುಸ್ತಕ ತೆಗೆದುಕೊಂಡವರು ಎಲ್ಲೆಂದರಲ್ಲಿ ಅದನ್ನು ಇಟ್ಟು ಮರೆತರೂ ಅವರು ಬೇಸರಿಸಿಕೊಳ್ಳುತ್ತಿರಲಿಲ್ಲ. ಅವುಗಳನ್ನು ಕೊಟ್ಟಷ್ಟೇ ವಿನಯದಿಂದ ಆರಿಸಿಕೊಂಡು ಬ್ಯಾಗಿಗೆ ಹಾಕಿಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡರು.
ಅಜ್ಜನ ಕೋಲಿನ ಕಥೆ 
“ಹೈದರಾಬಾದ್ ನಲ್ಲಿದ್ದಾಗ ಒಮ್ಮೆ ನಾನು ಮತ್ತು ನನ್ನ ತಂದೆಯವರು ಒಮ್ಮೆ ಪ್ರೊ.ಡಿ.ಕೆ. ಭೀಮಸೇನರಾವ್ ಅವರ ಮನೆಗೆ ಹೋಗಿದ್ದೆವು. ನೀವೇಕೆ ಮಕ್ಕಳ ಕವನಗಳನ್ನು ಬರೆಯಬಾರದು ಎಂದವರು ತಂದೆಯವರನ್ನು ಕೇಳಿದರು. ಇಲ್ಲಪ್ಪ, ನಾನು ಮಕ್ಕಳಿಗಾಗಿ ಈವರೆಗೆ ಏನೂ ಬರೆದಿಲ್ಲ ಅಷ್ಟಾಗಿ ತಿಳಿಯಲ್ಲ ಅನಿಸುತ್ತೆ ಎಂದಿದ್ದರು ಅಪ್ಪ. ಆದರೆ, ಭೀಮಸೇನರಾವ್ ಪಟ್ಟುಬಿಡದೇ ಒಂದು ರೂಮಲ್ಲಿ ಕೂರಿಸಿ ಬೀಗ ಜಡಿದು ಬಿಟ್ಟರು. ಕೆಲವೇ ನಿಮಿಷಗಳಲ್ಲಿ ಅಪ್ಪ ‘ನನ್ನ ಕುದುರೆ’ ಮತ್ತು ‘ಕರಡಿಯ ತಕ ತಕ ಕುಣಿಸುತ ಬಂದ’ ಕವಿತೆಗಳನ್ನು ಬರೆದಿದ್ದರು” ಎಂದು ನೆನಪಿಸಿಕೊಂಡವರು ಡಾ.ಸಿದ್ಧಯ್ಯ ಪುರಾಣಿಕ ಅವರ ಮಗಳು ವಿಜಯಾ ನಂದೀಶ್ವರ್.
ಪ್ರಥಮ್ ಬುಕ್ಸ್ ನ ಟ್ರಸ್ಟಿ, ಲೇಖಕಿ ಹಾಗೂ ಬಹುಮುಖ ಪ್ರತಿಭೆ ಕಾಂಚನ್ ಬ್ಯಾನರ್ಜಿ, ಆಯಾ ಭಾಷೆಯ ಸಾಂಸ್ಕೃತಿಕ ಪ್ರತಿಬಿಂಬವಾಗಿ ಗುರುತಿಸಿಕೊಳ್ಳುವುದೇ ಪ್ರಥಮ್ ಬುಕ್ಸ್ ಸ್ಥಾಪನೆಯ ಆಶೋತ್ತರಗಳಲ್ಲಿ ಪ್ರಮುಖ. ಅದಕ್ಕಾಗಿಯೇ ಮಾತೃಭಾಷೆಯಲ್ಲಿ ಕಥೆ ಪುಸ್ತಕಗಳು ಮಕ್ಕಳಿಗೆ ಸುಲಭವಾಗಿ ಸಿಗಬೇಕೆಂಬುದು ನಮ್ಮ ಧ್ಯೇಯ. ಸದ್ಯ ನಮ್ಮ ಕಥೆಗಳು 21 ಭಾಷೆಗಳಲ್ಲಿ ಭಾಷಾಂತರಗೊಂಡಿವೆ. ಕಳೆದ 1.5 ವರ್ಷಗಳಿಂದ ಚಾಲ್ತಿಯಲ್ಲಿರುವ ಡಿಜಿಟಲ್ ಮಾಧ್ಯಮ ಸ್ಟೋರಿವೀವರ್ ಕ್ರಿಯೇಟಿವ್ ಕಾಮನ್ಸ್ ನಡಿ ಮುಕ್ತ ಪರವಾನಗಿ ಹೊಂದಿದೆ. ಇಲ್ಲಿ ಪ್ರಕಟಿಸಿರುವ ಯಾವುದೇ ಕಥೆ, ಚಿತ್ರಗಳನ್ನು ಮರುಸೃಷ್ಟಿಸಿ ನಿಮ್ಮದೇ ಆವೃತ್ತಿಯಲ್ಲಿ ಪ್ರಕಟಿಸಬಹುದಾಗಿದೆ ಎಂದು ವಿವರಿಸಿದರು. ಇದೇ ವೇಳೆ, ತಮ್ಮ 32ನೇ ವಯಸ್ಸಿನಲ್ಲಿ ಕನ್ನಡ ಕಲಿತ ಆರಂಭದ ದಿನಗಳಲ್ಲಿ ತುತ್ತೂರಿ ಪದ್ಯ ಓದಿದ್ದನ್ನು ನೆನಪಿಸಿಕೊಂಡ ಅವರು, ಮಕ್ಕಳ ಜನಪ್ರಿಯ ಸಾಹಿತ್ಯದ ಎಲ್ಲಾ ಪುಸ್ತಕಗಳೂ ಅತ್ಯದ್ಭುತವಾಗಿ ಮರುಸೃಷ್ಟಿಗೊಂಡಿವೆ. ಇದೇ ಮೊದಲ ಬಾರಿಗೆ ಕನ್ನಡದ ಕೆಲ ಕ್ಲಾಸಿಕ್ ಕವನಗಳನ್ನು ಚಿತ್ರಪುಸ್ತಕವಾಗಿಸಿದ್ದೇವೆ. ಈ ಪದ್ಯಗಳು ಓದಲು ಮಾತ್ರವಲ್ಲ, ಕೇಳಲು ಸಹ ಇಂಪಾಗಿವೆ. ಒತ್ತಕ್ಷರಗಳಿಲ್ಲದ ಸರಳ ಸಾಲುಗಳಿವೆ ಎಂದರು.
ಕವಿ ಪಂಜೆ ಮಂಗೇಶರಾಯ ಅವರ ದೊಡ್ಡ ಮೊಮ್ಮಗಳು ಉಮಾ ರಾವ್, ಡಾ.ಜಿ.ಪಿ.ರಾಜರತ್ನಂ, ಬಿ.ಕೆ.ತಿರುಮಲಮ್ಮ ಅವರ ಸೋದರ ಸಂಬಂಧಿ ಲಕ್ಷ್ಮೀ ಶ್ರೀಧರನ್, ತುತ್ತೂರಿ ಮತ್ತು ನಮ್ಮ ಮನೆಯ ಸಣ್ಣ ಪಾಪ ಕವನಗಳ ಚಿತ್ರಕಾರ ಸತ್ಯ ಕೃಷ್ಣ ಪ್ರಕಾಶ್, ಪ್ರಥಮ್ ಬುಕ್ಸ್ ನ ಮುಖ್ಯಸ್ಥೆ ಸುಜೇನ್ ಸಿಂಘ್, ಇದ್ದರು.
ಟಾಟಾ ಟ್ರಸ್ಟ್ ನ ಪರಾಗ್ ಮುಂದಾಳ್ತನದಲ್ಲಿ ಪ್ರಥಮ್ ಬುಕ್ಸ್ ಜತೆಗೂಡಿ ಕನ್ನಡದ ಈ ಶ್ರೇಷ್ಠ ಕವನಗಳನ್ನು ಚಿತ್ರಪುಸ್ತಕ ಗುಚ್ಛವಾಗಿ ಹೊರತಂದಿದೆ. ಈ ಪುಸ್ತಕಗಳಿಗೆ ಬಿ.ಜಿ.ಗುಜ್ಜಾರಪ್ಪ, ಸತ್ಯ ಕೃಷ್ಣ ಪ್ರಕಾಶ್, ಪ್ರೊಯ್ತಿ ರಾಯ್, ಕಲ್ಯಾಣಿ ನರವ್ಣೆ ಮತ್ತು ಆದ್ರಿಜಾ ಘೋಷ್ ಚಿತ್ರಗಳನ್ನು ಬರೆದಿದ್ದಾರೆ. ‘ಮಕ್ಕಳ ಜನಪ್ರಿಯ ಸಾಹಿತ್ಯ’ ಕವನಗಳ ಗುಚ್ಛವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here