Uncategorized

ಕಾಡು ಎಚ್ಚೆತ್ತಾಗ

This post was written by Bhargavi Pushpak. Bhargavi is an Editor at Pratham Books.

ಸುದರ್ಶನ್‌ ಶಾ ಅವರ When a Forest Wakes Up ಕನ್ನಡಕ್ಕೆ ಕಾಡು ಎಚ್ಚೆತ್ತಾಗ ಎಂದು ಅನುವಾದಗೊಂಡಿದೆ. ಅನುವಾದಕರು ಪಲ್ಲವಿ ರಾವ್ .

ಕಾಡು ಎಚ್ಚೆತ್ತಾಗ written by Sudarshan Shaw, illustrated by Sudarshan Shaw and translated into Kannada by Pallavi Rao

ಈ ಕತೆಯು ಕಾಡಿನಲ್ಲಿ ಒಂದು ದಿನ ಹೇಗಿರಬಹುದು ಎಂಬುದನ್ನು ಕಾವ್ಯಾತ್ಮಕವಾಗಿ ಚಿತ್ರಿಸಿದೆ.

ಕಲಾವಿದ ಸುದರ್ಶನ್‌ ಶಾ ಅವರ ಮೊದಲ ಮಕ್ಕಳ ಪುಸ್ತಕ When a Forest Wakes Up ಅನ್ನು ಪ್ರಥಮ್‌ ಬುಕ್ಸ್‌ ಪ್ರಕಟಿಸಿದೆ. ಈ ಕತೆಯು ಆನಿಮಿಸಂ ಎಂಬ ಪರಿಕಲ್ಪನೆಯಿಂದ ಪ್ರೇರಣೆಗೊಂಡಿದೆ. ಸೂರ್ಯನಿಂದ ಹಿಡಿದು ಕಲ್ಲುಬಂಡೆಗಳವರೆಗೂ ಎಲ್ಲವಕ್ಕೂ ನಮ್ಮಂತೆಯೇ ಜೀವವಿದೆ ಎಂಬ ಆದಿವಾಸಿ ಜನರಾದ ಗೊಂಡರ ಪ್ರಾಚೀನ ನಂಬಿಕೆಯಿಂದ ಪ್ರೇರಿತವಾದ ಕತೆ ಇದು.

ಗೊರಕೆ ಹೊಡೆಯುತ್ತಿರುವ ಎರಡು ರೈನೊಗಳಂತೆ ಕಾಣುವ ಬೆಟ್ಟಗಳ ನಡುವಿಂದ ಹುಲಿಯಂತೆ ಜಿಗಿದ ಸೂರ್ಯ ಇಡೀ ಕಾಡನ್ನು ಎಬ್ಬಿಸಿಬಿಟ್ಟ. ಕಾಡು ಒಂದು ಮೊಸಳೆ ಜಾತಿಯ ಪ್ರಾಣಿಯಂತೆ ಮತ್ತು ತಂಗಾಳಿಯು ಚಿಟ್ಟೆಗಳ ಹಿಂಡಿನಂತೆ. ಹಾಗಿದ್ದರೆ, ಈ ಕಾಡು ಮುಂದೆ ಯಾವ ರೂಪ ಪಡೆಯಲಿದೆ? ಇದನ್ನ ನೀವು ಚಿತ್ರಕಾರ ಮತ್ತು ಇಲ್ಲಸ್ಟ್ರೇಟರ್ ಸುದರ್ಶನ್‌ ಶಾ ಅವರ ಕತೆ ಓದಿಯೇ ತಿಳಿಯಬೇಕು.

ದೇಶೀಯ ಸಾಂಪ್ರದಾಯಿಕ ಕಲೆಗೆ ಸಮಕಾಲೀನ ಸ್ಪರ್ಶ ನೀಡಿರುವ ಇವರ ಸಮಗ್ರ ಚಿತ್ರರಚನೆ ಆಕರ್ಷಣೀಯವಾಗಿದೆ. “ಈ ಪುಸ್ತಕದ ಮೂಲ ಆಲೋಚನೆಯೇ, ವ್ಯಾಖ್ಯಾನ ಬದಲಿಸುವುದು,” ಎನ್ನುತ್ತಾರವರು. ಮಕ್ಕಳು ತಮ್ಮ ಸುತ್ತಲಿನ ಪ್ರಪಂಚನವನ್ನು ಮುಕ್ತ ಮನಸ್ಸಿನಿಂದ ನೋಡುತ್ತಾರೆ. ಆಕಾಶದತ್ತ ತಲೆ ಎತ್ತಿ ನೋಡುವಾಗೆಲ್ಲ ಚಲಿಸುವ ಮೋಡಗಳ ಹಿಂದೆ ಅವರಿಗೆ ಲೆಕ್ಕವಿಲ್ಲದಷ್ಟು ಕಲ್ಪನೆಗಳು, ಚಿತ್ರಗಳು ಮೂಡುತ್ತವೆ. ಮಕ್ಕಳು ಮ್ಯಾಜಿಕ್‌ ಅನ್ನು ನಂಬುತ್ತಾರೆ. ನಾವು ದೊಡ್ಡವರಾದಂತೆಲ್ಲ, ನಮ್ಮ ನಂಬಿಕೆಗಳಿಗೆ ಹೊರತಾದ ವಿಷಯಗಳನ್ನು ಗಮನಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತೇವೆ. ಮಕ್ಕಳು ತಾವು ನೋಡುವುದನ್ನೇ ನಂಬುತ್ತಾರೆ. ಈ ಪುಸ್ತಕದ ಮೂಲಕ, ಮಕ್ಕಳು ಜಗತ್ತನ್ನು ವಿಭಿನ್ನವಾಗಿ ಕಾಣಲಿ ಹಾಗೂ ಅವರ ಕಲ್ಪನೆಗಳಿಗೆ ಮತ್ತಷ್ಟು ಹುರುಪು ಸಿಗಲಿ ಎಂಬುದು ಅವರ ಆಶಯ. ಅಂದಹಾಗೆ, ಹಲವು ರಾಜ್ಯಗಳ ವನ್ಯಜೀವಿ ಸಂರಕ್ಷಣೆಯ ಕತೆಗಳನ್ನು ತಮ್ಮ ಚಿತ್ರಗಳ ಮೂಲಕ ಪ್ರಸ್ತುತಪಡಿಸುವುದು ಸುದರ್ಶನ್‌ ಅವರ ಹೆಗ್ಗಳಿಕೆ.

“ಈ ಪುಸ್ತಕದಲ್ಲಿ, ರಾತ್ರಿ ಕಳೆದು ಬೆಳಗು ಕಾಣುವಾಗ ಕಾಡು ಪ್ರಾಣಿಗಳ ಸ್ವಭಾವ, ವರ್ತನೆಯನ್ನು ಚಿತ್ರಗಳ ಮೂಲಕ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಘರ್ಜಿಸುವ ಹುಲಿ ಹಾಗೂ ಗೊರಕೆ ಹೊಡೆಯುವ ರೈನೊಗಳು ಕಾಡಿನ ಸೂರ್ಯೋದಯವನ್ನು ಸೂಚಿಸಿದರೆ, ಬಣ್ಣಗಳು ಹಾಗೂ ಪ್ರಾಣಿ, ಪಕ್ಷಿಗಳ ಚಲನೆಯ ಮೂಲಕ ಕಾಡು ಜೀವಂತಿಕೆ ಪಡೆದು, ಕಗ್ಗತ್ತಲಿಗೆ ಜಾರುವುದನ್ನು ಹೇಳಲಾಗಿದೆ. ಈ ಪುಸ್ತಕಕ್ಕಾಗಿ ನಾನು ಕಲಾಂಕಾರಿ, ಪತ್ತಚಿತ್ರ, ಆದಿವಾಸಿ ಜನರಾದ ಗೊಂಡರ ಕಲೆಯ ಸಮ್ಮಿಶ್ರಣದೊಂದಿಗೆ ಭಿನ್ನ ನೋಟ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ. ಕತೆಗಾಗಿ ಬಣ್ಣಗಳನ್ನು ಸಹ ಕಾಡಿನಲ್ಲಿ ಬೆಳಗಿನ ಚಿತ್ರ ಮೂಡಿಸುವ ರೀತಿಯಲ್ಲಿ ಆಯ್ಕೆ ಮಾಡಲಾಗಿದೆ. ಈ ಪುಸ್ತಕ ಹಲವು ಅರ್ಥ ವಿವರಣೆಗಳಿಗೆ ಮುಕ್ತವಾಗಿದೆ. ಪ್ರತಿ ಬಾರಿ ನೀವು ಪುಸ್ತಕವನ್ನು ಓದಿದಾಗಲೂ, ಹೊಸ ಹೊಳಹು ಮೂಡಬಹುದು,” ಎನ್ನುತ್ತಾರೆ ಸುದರ್ಶನ್.

ಈ ಪುಸ್ತಕದ ಗದ್ಯಕ್ಕೆ ಒಂದು ಲಯವಿದೆ. “ಚಿತ್ರಕ್ಕೆ ಹೊಂದುವ ರೀತಿ ಗದ್ಯದಲ್ಲೊಂದು ಲಯಬದ್ಧತೆ ಇರಬೇಕೆಂಬುದೇ ಮುಖ್ಯ ಆಲೋಚನೆ ಆಗಿತ್ತು,” ಮಕ್ಕಳಿಗೆ ಸರಳವಾದ ಲಯ ಇಷ್ಟವಾಗುತ್ತೆ ಎನ್ನುವ ಸುದರ್ಶನ್‌ ಬಹುತೇಕ ತಮ್ಮ ಬಾಲ್ಯ ಕಳೆದದ್ದು ಒಡಿಶಾದ ಭುವನೇಶ್ವರದಲ್ಲಿ. ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಮೂಲೆ ಮೂಲೆಯನ್ನು ಕಂಡಿರುವುದರಿಂದ, ಎರಡೂ ರಾಜ್ಯಗಳ ಶ್ರೀಮಂತ ಸಂಸ್ಕೃತಿಯ ಛಾಪು ತಮ್ಮಲ್ಲಿ ಗಾಢವಾಗಿದೆ. ಒಡಿಶಾದ ಪ್ರತಿ ಮೂಲೆಗೂ ಹೇಳಿಕೊಳ್ಳುವ ಮಾತುಗಳಿವೆ. ಈ ಅನುಭವಗಳೇ ನನಗೆ ಪ್ರೇರಣೆ ಎನ್ನುತ್ತಾರವರು. ದೆಹಲಿಯ NIFTಯಲ್ಲಿ ಅಂತಿಮ ವರ್ಷದ ಪದವಿ ವೇಳೆ, ರಾಜಸ್ತಾನದ ಚಿತ್ರಕಲೆ ಫದ್‌ ಕುರಿತಾದ ಪ್ರಾಜೆಕ್ಟ್‌ ಸಲುವಾಗಿ ರಣಥಂಬೋರಿಗೆ ಪ್ರಯಾಣಿಸುವ ಅವಕಾಶ ಸುದರ್ಶನ್‌ಗೆ ಸಿಕ್ಕಿತಂತೆ. ಅಲ್ಲಿ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ವನ್ಯಜೀವಿಗಳ ಚಿತ್ರರಚನೆಗೆ ಹೇಗೆ ಸಮ್ಮಿಶ್ರಗೊಳಿಸಬಹುದು ಎಂಬುದನ್ನು ಕಲಿತರಂತೆ. ಇತ್ತೀಚೆಗೆ, ಇವರು ರಚಿಸಿದ ನಿರ್ದಿಷ್ಟ ಸಾಂಪ್ರದಾಯಿಕ ಕಲಾ ಪ್ರಕಾರಗಳ ಮೂಲಕ ಪ್ರಾದೇಶಿಕ ವೈವಿಧ್ಯತೆಯನ್ನು ಸಾರುವ ಒಡಿಶಾ, ಆಂಧ್ರಪ್ರದೇಶ, ರಾಜಸ್ತಾನ ಮತ್ತು ಪಶ್ಚಿಮ ಬಂಗಾಳದ ಭೂಪಟಗಳು ಮಾಹಿತಿ ಪ್ರಸರಣದ ಅತ್ಯುತ್ತಮ ಮಾದರಿಯಾಗಿ ಜನಮನ್ನಣೆ ಗಳಿಸಿವೆ.

ಒಡಿಶಾ, ಅಂಧ್ರಪ್ರದೇಶದ ಅರಣ್ಯ ಇಲಾಖೆಗಳ ಪ್ರಾಜೆಕ್ಟ್‌ಗಳು ಸೇರಿದಂತೆ ದೇಶಾದ್ಯಂತ ಹಲವು ಎನ್‌ಜಿಒಗಳಿಗಾಗಿ ಕೆಲಸ ಮಾಡುತ್ತಿರುವ ಸುದರ್ಶನ್‌, ಇತ್ತೀಚಿನ ದಿನಗಳಲ್ಲಿ ತಮ್ಮ ಕಲಾಸರಣಿ ‘My Picture of Divinity’ಯನ್ನು ಪೂರ್ಣಗೊಳಿಸುವಲ್ಲಿ ಹೆಚ್ಚು ಮಗ್ನರಾಗಿದ್ದಾರೆ. ಇದನ್ನು ಪುಸ್ತಕವಾಗಿ ಪ್ರಕಟಿಸಲು ಸಹ ಅವರು ಆಸಕ್ತರಾಗಿದ್ದಾರೆ. “ಈ ಕಲಾಸರಣಿಯ ಒಟ್ಟು 12 ಚಿತ್ರಗಳ ಪೈಕಿ 9 ಈಗಾಗಲೇ ಸಿದ್ಧ ಇವೆ. ಹಿಮಾಲಯ ಪರ್ವತಗಳು ಹಾಗೂ ಒಡಿಶಾದಂತಹ ವೈವಿಧ್ಯಮಯ ಭೂಪ್ರದೇಶಗಳ ಸಂರಕ್ಷಣೆ ಕುರಿತಾಗಿರುವ ಈ ಸರಣಿ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾದದ್ದು. ಉದಾಹರಣೆಗೆ, ಪ್ರತಿ ವರ್ಷ ಸಂತಾನೋತ್ಪತ್ತಿಗಾಗಿ ಒಡಿಶಾಗೆ ಬರುವ ಒಲಿವ್‌ ರಿಡ್ಲೆ ಆಮೆಗಳು ಮತ್ತು ಈ ಘಟನೆ ಹಿಂದಿನ ವಿಜ್ಞಾನ,” ಎನ್ನುತ್ತಾರವರು.

ಇದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಬರಹದ ಸಂಗ್ರಹಾನುವಾದ.

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here