Uncategorized

ಬೇಕೇ ಅನುವಾದ…

by Hema Khurshapur

ಮೇಲಿನ ಪದಗಳನ್ನು ಜಯಂತ ಕಾಯ್ಕಿಣಿ ಅವರ ಹಾಡೊಂದರಲ್ಲಿ ಬರುವ ಜೀವಗಳ ಭಾಷೆ ಇದು ಬೇಕೆ ಅನುವಾದ…ಸಾಲಿನಿಂದ ಆರಿಸಿದ್ದು. ಸೋನು ನಿಗಮ್ ತಮ್ಮದೇ ವಿಶಿಷ್ಟ ಉಚ್ಚಾರಣೆಯ ಕನ್ನಡದಲ್ಲಿ ಬೇಕೇ… ಎಂದು ಎಳೆದು ಹಾಡುತ್ತಿದ್ದರೆ ನಾನು ಬೇಕು ಬೇಕು ಎಂದು ತಲೆ ಆಡಿಸುತ್ತಿರುತ್ತೇನೆ. 

ಅನುವಾದ ಪದ ಹೇಗೆ ಬಂದಿರಬಹುದು ಎನ್ನುವುದಕ್ಕೆ ನನ್ನ ಹತ್ರ ಒಂದು ಚೆಂದದ ಲಾಜಿಕ್ ಇದೆ. ದುಡ್ಡು ಬಂಗಾರ ಎತ್ತಿಡುವಾಗ ಆಪತ್ಕಾಲಕ್ಕೆ ಕಾಲಕ್ಕೆ ಅನುವಾಗಲಿ ಅಂತ ಇಟ್ಟಿದ್ದೆ ಎನ್ನುವ ಮಾತನ್ನು ಬಹುತೇಕ ಎಲ್ಲರೂ ಕೇಳಿರುತ್ತೇವೆ. ಭಾಷೆ ಅರ್ಥ ಆಗದ್ದು ಕೂಡ ಕಷ್ಟದ ಕಾಲವೇ ಅಲ್ವ… ಆಗ ಅನುವು ಮಾಡಿಕೊಡುವ ಭಾಷೆಯೇ  ಅನುವಾದ. 

ಅನುವಾದ ಇಲ್ಲದಿದ್ದರೆ ಎಷ್ಟೋ ಕಥೆಗಳು, ಎಷ್ಟೋ ವಿಷಯಗಳು ಅಗತ್ಯ ಇದ್ದವರಿಗೆ ತಲುಪುತ್ತಲೇ ಇರಲಿಲ್ಲ. ಅದರಲ್ಲೂ ಮಕ್ಕಳಿಗೆ.

ಅನುವಾದ: ಪದವೇ ಸೆಳೆಯುವಂತದ್ದು. ಮಗುವಿನ ತೊದಲ ನುಡಿ ಅಪರಿಚಿತರಿಗೆ ಅರ್ಥ ಆಗದೆ ಇದ್ದಾಗ ಅಪ್ಪ-ಅಮ್ಮ ತಮ್ಮ ಮಗು ಹೇಳಿದ್ದು ಇದನ್ನೇ ಎಂದು ಎದುರಿನವರಿಗೆ ಅರ್ಥ ಮಾಡಿಸುವುದಿದೆಯಲ್ಲ ಅದು ಜಗತ್ತು ಕಾಣುವ ಮೊದಲ ಅನುವಾದ.  

ಕಥೆ, ಕಾವ್ಯ, ಬರಹ ಏನೇ ಇರಲಿ ಭಾಷೆಯಿಂದ ಭಾಷೆಗೆ ಅನುವಾದಗೊಂಡಾಗ ಮೂಲ ಭಾಷೆಯ ಭಾಷಾ ವೈವಿಧ್ಯವನ್ನು ಅನುವಾದಿತ ಭಾಷೆಯಲ್ಲಿ ಹಿಡಿದಿಡುವುದು ನಿಜಕ್ಕೂ ಕಷ್ಟದ ಕೆಲಸ. ಅದು ಚಿಟಿಕೆ ಹೊಡೆದಷ್ಟು ಸುಲಭವಾಗಿ ಬಂದರೆ ಮಾತ್ರ ಅಲ್ಲೊಂದು ಮ್ಯಾಜಿಕ್ ಆಗಿರುತ್ತದೆ. 

ಇಂಥದ್ದೊಂದು ಮ್ಯಾಜಿಕ್ ಅನ್ನು ನಾನು ಕಂಡಿದ್ದು ಪ್ರಥಮ್ ಬುಕ್ಸ್ ನಲ್ಲಿ. ಒಂದು ಕಥೆ ಹದಿನಾರು ಭಾಷೆಗೆ ಅನುವಾದಗೊಂಡಾಗಲೂ ಅದು ಆ ಭಾಷೆಯಲ್ಲೇ ಹುಟ್ಟಿ ಬೆಳೆದ ಕಥೆ ಎನ್ನುವಷ್ಟು ಆಪ್ತವಾಗಿರುತ್ತದೆ.

ಇದಕ್ಕೆ ಪ್ರಥಮ್ ಬುಕ್ಸ್ ನ ಒಂದೆರೆಡು ಕಥೆಗಳ ಉದಾಹರಣೆ

And you know what?
The plates are still there, beneath our feet,
moving very, very slowly.
(Except for when they move suddenly,
which causes big earthquakes!)

ನಿಮಗಿದು ಗೊತ್ತೆ?
ನಮ್ಮ ಕಾಲ ಬುಡದಲ್ಲಿ  ಭೂ ತಟ್ಟೆಗಳು ಈಗಲೂ ಇವೆ.
ಯಾವಾಗಲೂಸರಿಯುತ್ತಿರುತ್ತವೆತುಂಬಾತುಂಬಾನಿಧಾನವಾಗಿ.
(ಕೆಲವು ಸಲ ಅವು ಒಮ್ಮೆಲೆ ಸರಿದಾಡಿದಾಗ
ತೀವ್ರ ಭೂಕಂಪನಗಳು ಉಂಟಾಗುತ್ತವೆ ಅಷ್ಟೆ!)

Illustration by Sarthak Sinha for The Mighty Tethys Sea

—–

She clutched Noonu, her blanket, closer.
It smelled of sleep, milk, and dreams.

ಚೈತು ಹೊದಿಕೆ ‘ನೂನು’ವನ್ನುಮೈತುಂಬಾ ಸುತ್ತಿಕೊಂಡಳು. 
ಅದು ನಿದ್ದೆ, ಹಾಲು ಮತ್ತುಕನಸುಗಳನ್ನು ಸೂಸುತ್ತಿತ್ತು.

—–

As Raghobadada marched on towards Maheshwar, Ahilyabai sent him a message, “Fighting you would not affect me, as much as it would affect your prestige if you lose to a woman.” Raghobadada reached Ujjain. Ahilyabai set out to meet him and how! She headed a procession of her entire army, elephants and horses.

ರಾಘೋಬದಾದಾ ಮಹೇಶ್ವರಕ್ಕೆ ಹೊರಡುತ್ತಿದ್ದಂತೇ, ಅಹಿಲ್ಯಾಬಾಯಿ ಅವನಿಗೊಂದು ಸಂದೇಶವನ್ನು ಕಳುಹಿಸಿದಳು. “ನಿನ್ನೊಡನೆ ಯುದ್ಧ ಮಾಡುವುದರಿಂದ ನಾನು ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ, ನೀನು ನನ್ನ ಕೈಯಲ್ಲಿ, ಅಂದರೆ ಒಬ್ಬ ಹೆಣ್ಣುಮಗಳ ಕೈಯಲ್ಲಿ ಸೋತರೆ, ನಿನ್ನ ಮರ್ಯಾದೆಗೆ ಏನಾಗಬಹುದೆಂದು ಯೋಚಿಸು,” ಎಂದು ಅದರಲ್ಲಿ ಬರೆದಿತ್ತು. ರಾಘೋಬದಾದಾ ಉಜ್ಜಯಿನಿ ತಲುಪಿದ್ದ. ಅಹಿಲ್ಯಾಬಾಯಿ ಅವನನ್ನು ಎದುರಿಸಲು ಅಣಿಯಾದಳು. ಅದೂ, ಹೇಗೆ ಅನ್ನುತ್ತೀರಾ? ತನ್ನ ಇಡೀ ಸೇನೆಯನ್ನು ಹೊರಡಿಸಿ ತಾನು ಎಲ್ಲರಿಗಿಂತ ಮುನ್ನಡೆದಳು.

—–

ನೋಟ ಎಂದರೆ ಕಣ್ಣು ಅನುವಾದಿಸಿದ್ದು, ಸ್ಪರ್ಶ ಎಂದರೆ ಚರ್ಮ ಅನುವಾದಿಸಿದ್ದು, ರುಚಿ ಎಂದರೆ ನಾಲಿಗೆಯ ಅನುವಾದಿಸಿದ್ದು, ಪರಿಮಳ, ವಾಸನೆ ಎಂದರೆ ಮೂಗು ಅನುವಾದಿಸಿದ್ದು. ಹೀಗೆ ನಾವು ನೋಡುವ, ಅನುಭವಿಸುವ ಎಲ್ಲವೂ ಒಂದಲ್ಲ ಒಂದು ರೀತಿ ಅನುವಾದವೇ. ನಾನು ಮಕ್ಕಳಿಗಾಗಿ ಅನುವಾದ ಮಾಡುವುದರಿಂದಲೂ ಹೀಗನಿಸಬಹುದು! 

ಮೂಲ ಪುಸ್ತಕ ಯಾವುದೇ ಭಾಷೆಯಲ್ಲಿ ಎಷ್ಟೇ ಅದ್ಬುತವಾಗಿ ಬಂದಿದ್ದರೂ ನಾವು ಓದುವ ಭಾಷೆಯಲ್ಲಿ ಅದು ಹೇಗೆ ಬಂದಿದೆ ಎನ್ನುವುದರರ ಮೇಲೆ ನಮ್ಮ ಅಭಿಪ್ರಾಯ ನಿಂತಿರುವುದರಿಂದ, ಸೃಷ್ಟಿಗಿಂತ ಪುನರ್ ಸೃಷ್ಟಿಗೆ ಹೆಚ್ಚು ಮಹತ್ವ ಅನುವಾದದ ಅರಿವಿನಲ್ಲಿ. 

ಇದೇ ಲಾಜಿಕ್ ಅನ್ನು ಮುಂದುವರಿಸಿಕೊಂಡು ಹೋದರೂ ಪುಸ್ತಕ ಕೊಳ್ಳುವಾಗ ಗೊತ್ತಿರುವ ಭಾಷೆಯಲ್ಲಿರುವ ಪುಸ್ತಕ ಅನುವಾದ ಆಗಿದ್ದರೆ, ಮೂಲವನ್ನ ಒಂದು ಸಲ ಕಣ್ಣಾಡಿಸಿ, ಅನುವಾದ ಇಷ್ಟವಾಗಬಹುದೇ ಎಂದು ಪರಿಶೀಲಿಸಿ, ಅನುವಾದಕರ ಸಾಹಿತ್ಯ ಸೇವೆ ಗಣನೆ ತಂದುಕೊಂಡು; ಕೊಳ್ಳುವುದೇ ಬೇಡವೇ ಎಂದು ತೀರ್ಮಾನಿಸುತ್ತೇವೆ. ಅನುವಾದದ ಬಗ್ಗೆ ಎಷ್ಟೆಲ್ಲ ಮಾತನಾಡಿದರೂ, ಹಿಂದಿ ನನಗೆ ಕನ್ನಡದಷ್ಟೇ ಆಪ್ತ ಎನಿಸುವ ಭಾಷೆ ಆಗಿರುವುದರಿಂದ ನಾನು ಮೂಲ ಹಿಂದಿ ಅಂತ ಇದ್ರೆ ಕೊಳ್ಳಲು ಒಂದು ಕ್ಷಣ ಹಿಂದೆ ಮುಂದೆ ನೋಡುತ್ತೇನೆ. ಮೂಲವನ್ನೇ ಓದಬಹುದಲ್ಲ ಎನ್ನುವ ಯೋಚನೆಗೆ. 

ಈ ಇಬ್ಬಗೆ ಎರಡು ಮೂರು ಭಾಷೆ ಚೆನ್ನಾಗಿ ಬಲ್ಲವರೆಲ್ಲರನ್ನೂ ಕಾಡುತ್ತದೆ. ನನ್ನ ಸಂಗ್ರಹದಲ್ಲಿ ಮೂಲ ಕೃತಿಗಳಿಗಿಂತ ಅನುವಾದಿತ ಕೃತಿಗಳ ಸಂಖ್ಯೆಯೇ ದೊಡ್ಡದಿದೆ. ಚೆನ್ನಾಗಿದೆ ಎನ್ನುವುದಕ್ಕೆ ಒಂದೆರೆಡು ಉದಾಹರಣೆಗಳು ಸಿಕ್ಕಬಹುದು. ಆದರೆ ಅನುವಾದವನ್ನು ಹೇಗೆ ಮಾಡಬಾರದು ಎನ್ನುವುದಕ್ಕೆ ಸಿಗುವ ಉದಾಹರಣೆಗಳು ಅಸಂಖ್ಯ. ಅದನ್ನು ನೋಡಿ ತಿದ್ದಿಕೊಳ್ಳಲೆಂದೇ ನಾನು ಅಷ್ಟು ಪುಸ್ತಕಗಳನ್ನು ಎತ್ತಿಟ್ಟುಕೊಂಡು ಓದಿ ಅಯ್ಯೋ ಎಷ್ಟು ಮಕ್ಕಿ ಕಾ ಮಕ್ಕಿ ಅನುವಾದ ಮಾಡಿದ್ದಾರಲ್ಲ ಎಂದು ಪೇಚಾಡುವುದು. 

ಅಡಚಣೆ ಕಡಿಮೆಯಾಗಿ ಅನುವಾದ ಎಲ್ಲರಿಗೂ ಅನುವಾಗಲಿ!!

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here