Uncategorized

‘ದಿ ಗ್ರೇಟ್ ರಿಫಾಸ’ ಎಂಬ ಅನುವಾದದ ಸಫಾರಿ

ಹೇಮಾ Image credits – avadhimag.in

 

This post was written by Hema Khurshapur.

Hema Khurshapur is an editor at Pratham Books.

 

******************

ಪ್ರಥಮ್ ಬುಕ್ಸ್ದಿ ಗ್ರೇಟ್ ರಿಫಾಸಕತೆಯನ್ನು ಓದಿದ ತಕ್ಷಣ ಇದರ ಕನ್ನಡ ಅನುವಾದವನ್ನು ಕೃಪಾಕರ ಸೇನಾನಿ ಅವರಿಂದಲೇ ಮಾಡಿಸಬೇಕು ಎಂದು ನಿರ್ಧರಿಸಿದ್ದು ಭಾರ್ಗವಿ ಮತ್ತು ನಾನು. ಆದರೆ, ಹೋದಲ್ಲಿಯ ತನಕ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಳ್ಳುವುದೆಂದರೆ ಪಂಚಪ್ರಾಣ ಎನ್ನುವ ಈ ಸ್ನೇಹಜೀವಿಗಳು ಬಿಡುವಾಗಿದ್ದಾರೋ ಇಲ್ಲವೋ ಎನ್ನುವ ಯೋಚನೆ ಬಂತು. ಆದದ್ದಾಗಲಿ ನೋಡೋಣ ಎಂದು ಕೃಪಾಕರ ಅವರ ವಾಟ್ಯ್ಸಾಪಿನಲ್ಲಿ ಈ ಬಗ್ಗೆ ತುತ್ತೂರಿ ಊದೋಣವೆಂದು ಪೀಪಿ ಸರಿ ಮಾಡಿಕೊಂಡೆ.

 

ಸೇನಾನಿ ಮತ್ತು ಕೃಪಾಕರ Image credits – Krupakar Senani

ಉಭಯ ಕುಶಲೋಪರಿ ನಂತರ, ನಿಮ್ಮ ಅಸಖ್ಯಾಂತ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಈ ಕತೆಯನ್ನು ಅನುವಾದ ಮಾಡಿಕೊಡಬೇಕು ಎಂದು ದಿಗಿಲು ಬೀಳಿಸಿದೆ. ಆಗಲ್ಲ ಎಂದರೆ ಬೇರೆಯವರನ್ನು ಹುಡುಕಿ ಕೊಡುವ ಜವಾಬ್ದಾರಿ ನಿಮ್ಮದೇ ಎಂದು ದಿಗಿಲನ್ನು ದ್ವಿಗುಣಗೊಳಿಸಿದೆ! 

ಸಂಜೆ-ಇರುಳು ಎನ್ನದೆ ಒಂದೇ ಶೃತಿಯಲ್ಲಿ ಕೊರೆಯುತ್ತಿದ್ದವಳ ಕಾಟ ತಾಳಲಾರದೇ, ‘ಕಾಡಿನ ಕರೆಗೆ ತಮ್ಮನ್ನೇ ತೆತ್ತುಕೊಂಡವರಿಗೆ ಈ ಅನುವಾದವೂ ತಾವು ಮಾಡಬೇಕಾದ ಕೆಲಸ ಎನಿಸಿ, ಒಪ್ಪಿಕೊಂಡ ಹಿರಿಯರ ಸೌಜನ್ಯಕ್ಕೆ ವಂದೇ. ಗೌರವಧನದ ವಿಷಯದಲ್ಲೂ ಮನವೊಲಿಸಲು ಸಾಧ್ಯವೇ ಇಲ್ಲದ ಖಚಿತ ಮಾತಿನಲ್ಲಿ ಬೇಡವೆಂದರು.

ಅನುವಾದದ ಬಗ್ಗೆ: 

ಅನುವಾದ ಮಾಡುವುದಾಗಿ ಒಪ್ಪಿಕೊಂಡ ಮೇಲೆ, ಮಕ್ಕಳ ಪುಸ್ತಕ ಅನುವಾದದ ಪೂರ್ವತಯಾರಿಯಂತೆ ಅಕ್ಷರಮಿತಿಯ, ಚಿತ್ರಗಳ ಬಗ್ಗೆ ಮಾಹಿತಿಗಳನ್ನು ಕೇಳಿದರು. ಕತೆ ಎಷ್ಟು ಸೊಗಸಾಗಿ, ಸರಾಗವಾಗಿ ಓದಿಸಿಕೊಳ್ಳುತ್ತದೆ ಎಂದರೆ ನೀವೇ ನೋಡಿ ಬೇಕಾದ್ರೆ: ದಿ ಗ್ರೇಟ್ ರಿಫಾಸ

ಅನುವಾದ ಹೇಗಿರಬೇಕು ಎನ್ನುವುದಕ್ಕೆ ಕೆಲವು ಉದಾಹರಣೆಗಳು:

The sloth bears, with their sharp snouts, started sniffing around. “Here, Papa, here,” shouted a bear cub. “Diesel smell, diesel smell!” Papa Bear shuffled to his son and inhaled deeply. “Good catch, Cubby, but those are not fresh. Keep trying.”

ಅಪ್ಪನ ಬೆನ್ನ ಮೇಲೆ ಕುಳಿತು ಸವಾರಿ ಹೊರಟಿದ್ದ ಕರಡಿ ಮರಿಯೊಂದು ಕೆಳಗೆ ಹಾರಿ, “ಅಪ್ಪ, ಅಪ್ಪ… ಇಲ್ಲಿ ಡೀಸೆಲ್ ವಾಸನೆ ಬರ್ತಿದೆ,” ಎಂದು ಕೂಗಿತು. ನೆಲಕ್ಕೆ ಮೂತಿ ಒತ್ತಿ ಒಮ್ಮೆ ಗಾಳಿ ಎಳೆದು, “ಶಹಭಾಷ್! ಪರವಾಗಿಲ್ಲ ನೀನು… ಆದ್ರೆ ಅದು ಇವತ್ತಿನದಲ್ಲ ಮಗು… ಮತ್ತೆ ಪ್ರಯತ್ನ ಮಾಡು,” ಎಂದು ಅಪ್ಪ ಕರಡಿ ಮುಂದೆ ಸಾಗಿತು.

But the entire stretch till the Power Line was very quiet.

ಆದರೆ ಕಾಡಿನ ಮಧ್ಯಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳ ಓಣಿಯವರೆಗೆ ನಡೆದರೂ ಮನುಷ್ಯರ ಚಟುವಟಿಕೆಗಳಿಲ್ಲದೆ ಕಾಡು ನಿಶ್ಯಬ್ದವಾಗಿತ್ತು.

Mighty old Bhogeshwara, the long-tusked elephant, took charge.

ಉದ್ದ ದಂತದ, ಹಿರಿಯ ಗಂಡಾನೆ ಭೋಗೇಶ್ವರ ನಾಯಕತ್ವ ವಹಿಸಿಕೊಂಡಿತು.

“Does that mean we can roam freely now?” Scarface, the leopard, sawed. 

ಹಾಗಾದರೆ ನಾವು ಆರಾಮಾಗಿ ಓಡಾಡಿಕೊಂಡು ಇರಬಹುದು?” ಸ್ಕಾರ್ ಫೇಸ್ ಎಂಬ ದೊಡ್ಡ ಗಂಡು ಚಿರತೆ ತನ್ನ ಉಜ್ಜುವ ಗರಗಸದ ದನಿಯಲ್ಲಿ ಹೇಳಿತು.

ಕೃಪಾಕರ ಸೇನಾನಿ ಬಗ್ಗೆ: 

ಹೆಸರುಗಳಿಗೆಪರಿಚಯ ಬೇಕಿಲ್ಲ. ಪ್ರಪಂಚಕ್ಕೇ ಗೊತ್ತು! (ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳುಪುಸ್ತಕದ – “ಉಂಗಳ್ ಪೇರ್ ಉಲಗಕ್ಕೆ ತೆರಿಯೋ…!!! …ವಾಂಗೋ” (ನಿಮ್ಮ ಹೆಸರು ಪ್ರಪಂಚಕ್ಕೆ ಗೊತ್ತು ಬನ್ನಿ) ಸಾಲು ನೆನಪಾಯಿತೇ?!!!) ಹೆಸರುಗಳಿಗೆ ಪದ ಯಾಕೆ ಸಿಂಗಲ್ ಕೋಟ್ ನಡುವೆ ಎಂದರೆ; ಮೂರು ದಶಕಗಳ ಹಿಂದೆ ವೀರಪ್ಪನ್ ಇವರಿಬ್ಬರನ್ನು ಅಪಹರಿಸುವುದಕ್ಕಿಂತ ಮುಂಚೆ ಕೃಪಾಕರ ಸೇನಾನಿ ಎನ್ನುವುದು ಒಬ್ಬರದ್ದೇ ಹೆಸರು ಎಂದು ಅನೇಕರು ನಂಬಿದ್ದರು.

ಬೇರೆ-ಬೇರೆ ಆದರೂ, ಇಬ್ಬರೂ ಬೇರೆ-ಬೇರೆ ಅಂತನಿಸುವುದೇ ಇಲ್ಲ. ವಿಷಯ, ಯೋಚನೆ, ಮಾತು, ಅಭಿಪ್ರಾಯ ಎಲ್ಲದರಲ್ಲೂ ಒಬ್ಬರೊಳಗೆ ಒಬ್ಬರು ಮಿಳಿತಗೊಂಡ ಏಕತ್ವ. ಎಲ್ಲಿಯಾದರೂ ಒಬ್ಬರು ಕಂಡರೆ, ಇನ್ನೊಬ್ಬರು ಇಲ್ಲೇ ಎಲ್ಲೋ ಇರಬೇಕು ಎನ್ನುವಷ್ಟು ಕೈ-ಕೈಯೊಳಗೆ ಹಿಡಿದ ಭಾವ. ಅನುಭವಕ್ಕೂ ಅಭಿವ್ಯಕ್ತಿಗೂ ಅಂತರವೇ ಇಲ್ಲದ ಆಪ್ತತೆ. ನನಗಂತೂ ಯಾವುದಾದರೂ ಕಾರ್ಯಕ್ರಮದಲ್ಲಿ ಒಬ್ಬರ ಪಕ್ಕ ಇನ್ನೊಬ್ಬರು ಸ್ನೇಹ-ಸಾಂಗತ್ಯಕ್ಕೆ ಉಪಮೇಯವೇ ಬೇಡ, ನಮ್ಮ ಉಪಸ್ಥಿತಿ ಸಾಕು ಎನ್ನುವಂತೆ ಕುಳಿತವರನ್ನು ನೋಡುವುದೇ ಸಡಗರದ ಸಂಗತಿ.

ಮಾತಿಗೆ ಮುನ್ನ, ಇಬ್ಬರೂ ಒಬ್ಬರ ಕಣ್ಣಲ್ಲಿ ಒಬ್ಬರು ನೋಡುವ ಕ್ಷಣದಲ್ಲಿ ನನಗೆ ನೆನಪಾಗುವ ಸಾಲುಗಳು,
If I Could write the beauty of your eyes
And in fresh numbers number all your graces
The ages to Come would say, “This poet lies-
Such heavenly touches ne’er touched earthly faces.”

ಸ್ನೇಹದ ಬಗ್ಗೆ ಆಯ್ತು, ವೃತ್ತಿ-ಪ್ರವೃತ್ತಿ ಬಗ್ಗೆ ಒಂದಿಷ್ಟು:
ತುಂಬಾ ಕಡಿಮೆ ಜನಕ್ಕೆ ಬದುಕಿನಲ್ಲಿ ವೃತ್ತಿ-ಪ್ರವೃತ್ತಿ ಒಂದೇ ಆಗಿರುತ್ತದೆ. ಅದರಲ್ಲಿ ಇವರಿಬ್ಬರು. ಕಲಿತಿದ್ದು, ಕೆಲಸ ಮಾಡಿದ್ದು ಎಲ್ಲ ಬೇರೆ-ಬೇರೆ ಆದರೂ ಇವರಿಬ್ಬರನ್ನು ಅಂಟು ಹಾಕಿದ ತಂತು ಕಾಡಿನ ಕರೆ!ಪಕ್ಷಿ ವೀಕ್ಷಣೆ, ವನ್ಯಜೀವಿಗಳ ಫೋಟೋ ತೆಗೆಯುವುದು ಇಬ್ಬರಿಗೂ ಸಮಾನ ಆಸಕ್ತಿಯ ಸಂಗತಿಗಳು.

ಕಾಡಿನ ನಿಗೂಢ ಜಗತ್ತಿನ ಬಗ್ಗೆ ಇಬ್ಬರೊಳಗಿರುವ ತೀರದ ಮೋಹ, ಕುತೂಹಲ ನೋಡಿದಾಗಲೆಲ್ಲ ನೆನಪಾಗುವುದು,
“A bone to the dog is not charity. Charity is the bone shared with the dog, when you are just as hungry as the dog.”
― The Call of the Wild, Jack London,

ಪಶ್ಚಿಮ ಘಟ್ಟದ ಪ್ರಾಣಿ-ಪಕ್ಷಿಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಈ ಜೋಡಿಯ ಸಾವಿರಾರು ವನ್ಯಜೀವಿ ಫೋಟೋಗಳು ಜಗತ್ತಿನ ಪ್ರತಿಷ್ಠಿತ ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಸೀಳುನಾಯಿಗಳ ಬದುಕಿನ ಕುರಿತಾದ ಚಿತ್ರ ವಿಶ್ವದ ಗಮನ ಸೆಳೆದಿದ್ದು ಈಗ ಇತಿಹಾಸ. ವೃತ್ತಿ ಮತ್ತು ಸ್ನೇಹದ ಕುರಿತಾದ ಇವರ ಮೌಲ್ಯ, ಬದ್ಧತೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟ.

ಹೆಚ್ಚಿನ ಮಾಹಿತಿ: 

ಕೃಪಾಕರ್-ಸೇನಾನಿ ಅವರು ದಶಕಗಳಿಂದ ವಿವಿಧ ಕ್ಷೇತ್ರಗಳಲ್ಲಿ ಬಹುಮುಖಿ ಕಾರ್ಯಗಳ ಮೂಲಕ ಚಿರಪರಿಚಿತರು. ವನ್ಯಜೀವಿಗಳ ಕುರಿತಾದ ಸಾಕ್ಷ್ಯಚಿತ್ರ ನಿರ್ಮಾಣ, ಸಲಹೆಗಾರರು, ಛಾಯಾಗ್ರಾಹಕರು ಮತ್ತು ಸಂರಕ್ಷಣಾವಾದಿಗಳು.

ಅವರು ನ್ಯಾಷನಲ್ ಜಿಯಾಗ್ರಫಿಕ್, ಬಿಬಿಸಿ, ಅನಿಮಲ್ ಪ್ಲಾನೆಟ್, ಡಿಸ್ಕವರಿ ಮತ್ತು ಎಆರ್‌ಟಿಇಗಾಗಿ ಕೆಲಸ ಮಾಡಿದ್ದಾರೆ. ಅವರ ಸಾಕ್ಷ್ಯಚಿತ್ರಗಳು ಪ್ರಪಂಚದಾದ್ಯಂತ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಯನ್ನು ಗಳಿಸಿವೆ. ಅವರ ಪ್ರಶಸ್ತಿಗಳ ಪಟ್ಟಿ ದೊಡ್ಡದಾಗಿದ್ದು, ಪ್ರತಿಷ್ಠಿತ ವೈಲ್ಡ್ ಸ್ಕ್ರೀನ್ ಚಲನಚಿತ್ರೋತ್ಸವದಲ್ಲಿ ಏಷಿಯಾಟಿಕ್ ಕಾಡುನಾಯಿಗಳ ಕುರಿತು ಅವರು ನಿರ್ಮಿಸಿರುವ ದಿ ಪ್ಯಾಕ್ಸಾಕ್ಷ್ಯಚಿತ್ರಕ್ಕಾಗಿ ಅವರಿಗೆ ಗ್ರೀನ್‌ ಆಸ್ಕರ್ ಪ್ರಶಸ್ತಿ ದೊರಕಿದೆ. ಇದಲ್ಲದೇ, ಜಪಾನ್ ವನ್ಯಜೀವಿ ಚಲನಚಿತ್ರೋತ್ಸವದಲ್ಲಿ ಫೆಸ್ಟಿವಲ್ ಗ್ರ್ಯಾಂಡ್ ಪ್ರಶಸ್ತಿ. Vatavaran ಪರಿಸರ ಮತ್ತು 2007 ವನ್ಯಜೀವಿ ಚಿತ್ರೋತ್ಸವದಲ್ಲಿ ಉತ್ಸವ ಪ್ರಶಸ್ತಿ ಮತ್ತು ಅತ್ಯುತ್ತಮ ಕತೆ ಪ್ರಶಸ್ತಿ ಸೇರಿದಂತೆ ಅನೇಕ ದಾಖಲೆಗಳು ಇವರ ಮುಡಿಗೇರಿವೆ.

ಅವರು ತಮ್ಮ ಅನುಭವಗಳ ಆಧಾರದ ಮೇಲೆ ಅನೇಕ ರೋಮಾಂಚಕ ಪುಸ್ತಕಗಳು ಮತ್ತು ಫೋಟೋ ಜರ್ನಲ್‌ ಗಳನ್ನು ಬರೆದಿದ್ದಾರೆ. ತಮ್ಮ ಜೀವಜಾಲಪುಸ್ತಕಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು‘ ‘ಕೆನ್ನಾಯಿಯ ಜಾಡಿನಲ್ಲಿಮತ್ತೆರೆಡು ಅಪರೂಪದ ಪುಸ್ತಕಗಳ ಲೇಖಕರು. 

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಮತ್ತು ಪೋಷಿಸುವ ಗುರಿಯೊಂದಿಗೆ ಅವರು “ನಮ್ಮ ಸಂಘ” ಎಂಬ ಎನ್‌ಜಿಒ ಸ್ಥಾಪಿಸಿದ್ದಾರೆ. 18 ವರ್ಷ ಹಳೆಯದಾದ ಈ ಸಂಸ್ಥೆಯು ಬಂಡೀಪುರ ಅರಣ್ಯದ 200 ಕಿಮೀ ವ್ಯಾಪ್ತಿಯ 203 ಹಳ್ಳಿಗಳಲ್ಲಿ 38000 ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಿದ್ದು, ಅರಣ್ಯದ ಮೇಲಿನ ನಿವಾಸಿಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಆ ಪ್ರದೇಶದ ಬಡ ವಿದ್ಯಾರ್ಥಿನಿಯರಿಗೂ ಶಿಕ್ಷಣ ನೀಡುವ ಈ ಸ್ವಯಂಪ್ರೇರಿತ ಕೆಲಸವು ಭಾರತದ ಅತ್ಯಂತ ಯಶಸ್ವಿ ಸಂರಕ್ಷಣಾ ಪ್ರಯತ್ನವೆಂದು ಪರಿಗಣಿಸಲಾಗಿದೆ.

ಕೃಪಾಕರ ಸೇನಾನಿ ಬರಹವೊಂದರ ಆಯ್ದ ಸಾಲುಗಳು:

ಹುಲಿಯ ಜಾಡಿನಲ್ಲಿ…

ಆದರೆ, ನಕ್ಷತ್ರದ ಬೆಳಕೂ ಇಲ್ಲದ ಆ ರಾತ್ರಿಯಲ್ಲಿ ನನಗೇನೂ ಕಾಣಿಸುತ್ತಿರಲಿಲ್ಲ. ಆಕಾಶದಲ್ಲಿ ಒಂದು ಮಿಂಚಾದರೂ ಹರಿದಿದ್ದರೆ ಏನಾದರೂ ಕಾಣ ಸಿಗುತ್ತಿತ್ತೇನೋ ಎಂದು ತಹತಹಿಸುತ್ತಿದ್ದೆ. ಹತ್ತಿರದಲ್ಲೇ ಜರಗುತ್ತಿದ್ದ ಆ ಅದ್ಭುತ ನಾಟಕವನ್ನು ನೋಡಲಾಗದಿದ್ದಕ್ಕೆ ಸಂಕಟವಾಗುತ್ತಿತ್ತು. ಆದರೆ ಕುತೂಹಲಕ್ಕಾಗಿ ಹೊರಗೆ ಹೋಗಿ ಸಾಯುವುದಕ್ಕಿಂತ ಆ ರಾತ್ರಿಯಲ್ಲಿ ಕಂಡ ಕತೆಯನ್ನು ಹೇಳಲು ಬದುಕುಳಿಯುವುದು ಒಳಿತೆಂದು ನನ್ನ ಪ್ರಜ್ಞೆ ಎಚ್ಚರಿಸುತ್ತಿತ್ತು. ಕಾಡಿನ ನಮ್ಮ ಅನುಭವಗಳಿಂದಾಗಿ, ನಾನು ನನ್ನ ಭೀತಿಯನ್ನು ಗೌರವಿಸಲು ಬಹಳ ಹಿಂದೆಯೇ ಕಲಿತಿದ್ದೆ!

ಸ್ವಲ್ಪದೂರ ಸಾಗಿದ್ದಾಗ ಅಂಗಾತ ಬಿದ್ದಿದ್ದ ದೊಡ್ಡ ಕಪ್ಪೆಯೊಂದು ಕಂಡಿತು. ಅದು ಸುಮೊ ಕುಸ್ತಿಪಟುವೊಬ್ಬ ಹೊಟ್ಟೆಮೇಲಾಗಿ ಮಲಗಿದಂತೆ ಕಾಣುತ್ತಿತ್ತು. ಆ ಕಪ್ಪೆ ಏಕೆ ಸತ್ತಿರಬಹುದೆಂದು ಪರೀಕ್ಷಿಸಲು ಕುಕ್ಕರಗಾಲಿನಲ್ಲಿ ಕುಳಿತು ಹತ್ತಿರದಿಂದ ನೋಡಿದೆ. ಅದರ ಹೊಟ್ಟೆಯ ಮೇಲೆ ಮರಳ ಕಣಗಳಿದ್ದವು. ಆಶ್ಚರ್ಯವಾಯಿತು. ಆಗ ಇದ್ದಕ್ಕಿದ್ದಂತೆ ಅದರ ಹೊಟ್ಟೆಯ ಮೇಲಿದ್ದ ಮರಳ ಕಣಗಳು ಅದುರಿದವು.

ನಂತರದ ಕೆಲವೇ ಸೆಕೆಂಡುಗಳಲ್ಲಿ ಆ ಕಪ್ಪೆ ಬದುಕಿರುವುದು ಖಚಿತವಾಯಿತು. ಆದರೆ ಇದೇಕೆ ಹೀಗೆ ಹೊಟ್ಟೆ ಮೇಲಾಗಿ ಅಲ್ಲಾಡದೆ ಮಲಗಿದೆ? ಸೋಜಿಗದ ದೊಡ್ಡ ಚಿತ್ರಣ ಸಿಗಬಹುದೆಂದು ಸ್ವಲ್ಪ ಹಿಂದೆ ಸರಿದು, ಮತ್ತೊಮ್ಮೆ ಹೆಜ್ಜೆಗಳನ್ನು ಗಮನಿಸಿದೆ. ಹುಲಿಯ ಒಂದು ಹೆಜ್ಜೆಯ ಗುರುತು ಮಾತ್ರ ಅದಿರಬೇಕಾದ ಸ್ಥಳದಿಂದ ಕಾಣೆಯಾಗಿತ್ತು. ಸರಿಯಾಗಿ ಅದೇ ಜಾಗದಲ್ಲಿ ಈ ಕಪ್ಪೆ ಹೊಟ್ಟೆ ಮೇಲಾಗಿ ಬಿದ್ದಿತ್ತು!

ತನ್ನ ದಾರಿಯಲ್ಲಿ ಬರುತ್ತಿದ್ದ ಕಪ್ಪೆಯನ್ನು ಹುಲಿ ಗಮನಿಸಿಲ್ಲ. ತನ್ನ ಎಡ ಮುಂಗಾಲಿಗೆ ತಗುಲಿ, ಪಲ್ಟಿಹೊಡೆದು ಬೀಳುತ್ತಿದ್ದ ಕಪ್ಪೆಯನ್ನು ಕಡೇ ಕ್ಷಣದಲ್ಲಿ ಕಂಡ ಹುಲಿ ಹೌಹಾರಿರಬಹುದು! ತನ್ನ ಕಾಲಡಿಗೆ ಸಿಕ್ಕು ಕಪ್ಪೆ ಸಾಯುವುದನ್ನು ತಪ್ಪಿಸಲು ಮುಂಗಾಲ ಮೇಲೆ ಭಾರ ಕೊಡದಂತೆ ಕಪ್ಪೆಯ ಮೇಲಿನಿಂದ ನೆಗೆದು ಹುಲಿ ಮುಂದೆ ಸಾಗಿತ್ತು.

ಕಪ್ಪೆ ಅನುಭವಿಸಿದ ಯಾತನೆ ಏನೇ ಇರಬಹುದು, ಈ ಘಟನೆಯನ್ನು ಒಡೆದು ಕಟ್ಟಿದ ಪ್ರಕ್ರಿಯೆ ನನಗಂತೂ ಬಹಳ ವಿನೋದಕರವಾಗಿತ್ತು. ಹೇಗೆ ಅದರ ಪ್ರಪಂಚ ಉಲ್ಟಾಪಲ್ಟಾ ಆಗಿರಬಹುದೆಂದು ಕಲ್ಪಿಸಿಕೊಳ್ಳುತ್ತಾ ಅದನ್ನು ಮತ್ತೆ ತಿರುಗಿಸಿ ಹೊಟ್ಟೆ ಕಾಲುಗಳ ಮೇಲೆ ಕೂರಿಸಿ ನಾನು ಹುಲಿಯ ಜಾಡಿನಲ್ಲಿ ಮುಂದುವರಿದೆ. ಕೆಲವು ಹೆಜ್ಜೆಗಳ ನಂತರ ಹಿಂದಿರುಗಿ ನೋಡಿದೆ, ಕಪ್ಪೆ ದಿಙ್ಮೂಢತೆಯಿಂದ ನಾನು ಕೂರಿಸಿದ ಹಾಗೆ ಕುಳಿತಿತ್ತು.

ಆ ಕಪ್ಪೆ ಅಕ್ಷರಶಃ ಹುಲಿಯ ಪಂಜದಡಿಗೆ ಸಿಲುಕಿ ಕತೆ ಹೇಳಲು ಇನ್ನೂ ಬದುಕುಳಿದಿತ್ತು. ಇದೊಂದು ಅಸಾಮಾನ್ಯ ಅನುಭವವೇ ಸರಿ. ಆ ಕಪ್ಪೆಗೇನಾದರೂ ಬರೆಯುವ ಅಭ್ಯಾಸವಿದ್ದಿದ್ದರೆ – ತಾನು ಎದುರಾದ ಹುಲಿಯ ವಿರುದ್ಧ ಸೆಣೆಸಿದ್ದು, ಸೋಲೊಪ್ಪಿದ ಹುಲಿ ಬಾಲ ಮುದುರಿಕೊಂಡು ಓಡಿಹೋಗಿದ್ದು, ದಾರಿಯಲ್ಲಿ ಬಂದ ಹುಲುಮಾನವನೊಬ್ಬ ತನ್ನ ಧೈರ್ಯವನ್ನು ಮೆಚ್ಚಿ ತಲೆ ಕೆಳಗಾಗಿದ್ದ ಭೂಮಿಯನ್ನು ಸರಿಪಡಿಸಿದ್ದನ್ನೆಲ್ಲ ಬರೆದು, ಟೈಗರ್ ಕಪ್ಪೆಯಾಗಿ ಅದೆಷ್ಟೋ ತಲೆಮಾರುಗಳಲ್ಲಿ ಅಜರಾಮರವಾಗಿ ಉಳಿಯುತ್ತಿತ್ತೇನೊ…

 

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here