Uncategorized

ಮಕ್ಕಳ ಕಥೆ ಅನುವಾದ ಏನು ಸುಲಭಾನಾ? 

ಕರೊನಾ ತಂದ ಅನುವಾದಾವಕಾಶ 

ಜ್ಞಾನಮೂರ್ತಿ ಬಿ.ಆರ್.‌ 

 

ಸ್ವಯಂಪ್ರೇರಿತ ಅನುವಾದಕ್ಕೆ ಕೈ ಜೋಡಿಸುವಂತೆ ಮಾಡಿದ ಫೇಸ್‌ ಬುಕ್‌ ಪೋಸ್ಟ್‌ ಒಂದರ ಮನವಿಗೆ ಸ್ಪಂದಿಸಿದವರು ೭೦ಕ್ಕೂ ಹೆಚ್ಚು ಆಸಕ್ತರು. ಈ ಪೈಕಿ ಅನುವಾದಕ ಜ್ಞಾನಮೂರ್ತಿ ಬಿ.ಆರ್.‌ ಪ್ರಥಮ್‌ ಬುಕ್ಸ್‌ ಕತೆಯ ಅನುವಾದದ ಪಯಣ ಹೇಗಿತ್ತು, ಈ ಸ್ವಯಂ ಪ್ರೇರಿತ ಚಟುವಟಿಕೆಯ ರೂಪುರೇಷೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಈ ಕೆಳಗೆ ಹಂಚಿ ಕೊಂಡಿದ್ದಾರೆ. 

ಪದ ೬೦೦, ಸಮಯ ೩ ತಿಂಗಳು!

ಕರೋನಾ ಕಾಲದಲ್ಲಿ ಮನೆಯಿಂದ ಕೆಲಸ ಮಾಡಿ ಸಮಯ ಸವೆಸುತ್ತಿದ್ದ ನನಗೆ ಹಾಗೂ ನನ್ನಂಥ ಇನ್ನೂ ಅನೇಕರಿಗೆ ಪ್ರಥಮ್ ಬುಕ್ಸ್​ನ  ಸ್ಟೋರಿವೀವರ್  ನಲ್ಲಿರುವ ಕಥೆಗಳನ್ನು ಅನುವಾದ ಮಾಡುವ ಕೈಂಕರ್ಯಕ್ಕೆ ಕೈಜೋಡಿಸುವ ಅವಕಾಶ ಬಂದೊದಗಿದ್ದು ಕರೋನದ ಆಗಮನದಂತೆಯೇ! ಅನಿರೀಕ್ಷಿತವಾಗಿತ್ತು! ಈ ಮುನ್ನುಡಿಯ ಮೂಲಕ ನಾನು ಅನುವಾದ ಮಾಡಿದ ಕಥೆ ಒಂದೇ, ಅದು ಸುಮಾರು 600 ಪದಗಳದು. ಆದರೆ ಈ ಕಥೆಯ ಅನುವಾದ ಪೂರ್ಣಗೊಂಡು, ಕಠಿಣ ಪರಿಷ್ಕರಣೆಗೆ ಒಳಗೊಂಡು, ಪ್ರಕಟಗೊಳ್ಳಲು ಸುಮಾರು ಮೂರು ತಿಂಗಳು ಬೇಕಾಯಿತು.

Illustration by Sunaina Coelho

ಹಂತಗಳಲ್ಲಿ ಪರಿಷ್ಕರಣೆ

ಕಾರಣ, ಈ ಪ್ರಕ್ರಿಯೆಯು ನಾಲ್ಕು ಹಂತಗಳಲ್ಲಿ ನೆಡೆಯಿತು- ಹಂತ 1- ಪ್ರಥಮ್ ಬುಕ್ಸ್​ನ ಅನುವಾದ ಮಾರ್ಗಸೂಚಿಗಳೊಂದಿಗೆ ಒಬ್ಬರಿಗೆ ತಲಾ ಒಂದರಂತೆ ಕಥೆಯ ಹಂಚಿಕೆ, ಹಂತ 2- ಅನುವಾದ ಪೂರ್ಣಗೊಂಡ ನಂತರ ಪರಿಣಿತರಿಂದ ಅದರ ಪರಿಶೀಲನೆ, ಹಂತ 3- ವಿಡಿಯೋ ಕರೆಯ ಮೂಲಕ ಪರಿಣಿತರು ಮತ್ತು ಆಯಾ ಕಥೆಯ ಅನುವಾದಕರ ನಡುವೆ ನೇರ ಸಮಾಲೋಚನೆ ಮತ್ತು ಅಂತಿಮಗೊಳಿಸುವಿಕೆ. ಹಂತ 4- ಸ್ಟೋರಿವೀವರ್ ವೆಬ್ಸೈಟಿನಲ್ಲಿ ಡ್ರಾಫ್ಟ್ (ಕರಡು) ಸಿದ್ಧಪಡಿಸುವಿಕೆ ಮತ್ತು ಪ್ರಕಟಿಸುವಿಕೆ. ಈ ದೀರ್ಘ ಪ್ರಕ್ರಿಯೆಯಿಂದಾಗಿ ಅನೇಕ ಸೂಕ್ಷ್ಮ ಅಂಶಗಳನ್ನು ಕಲಿಯುವ ಅವಕಾಶ ನನಗೆ ಒದಗಿ ಬಂತು; ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಇನ್ನೂ 30ಕ್ಕೂ ಹೆಚ್ಚು ಆಸಕ್ತರಿಗೆ ಹೀಗೆಯೇ ಅನಿಸಿರಬಹುದು. ಈ ಅವಕಾಶಕ್ಕಾಗಿ ಧನ್ಯವಾದಗಳು. ಅನುವಾದಿತ ಕಥೆಗಳನ್ನು ಪರಿಶೀಲಿಸಿ ಆತ್ಮೀಯವಾಗಿ ಸಲಹೆ-ಸೂಚನೆ ನೀಡಿ, ತಿದ್ದಿದ ವಿಜ್ಞಾನಿ ಕೊಳ್ಳೇಗಾಲ ಶರ್ಮಾ ಮತ್ತು ಶ್ರೀ. ಶ್ರೀನಿಧಿಯವರು ಕೃತಜ್ಞತೆಗೆ ಅರ್ಹರು. ಈ ಚಟುವಟಿಕೆಯ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ನಾನಿಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ, ಆದರೆ ನನ್ನ ಅಭಿಪ್ರಾಯಗಳು ಈ ಚಟುವಟಿಕೆಗೆ ಮಾತ್ರ ಸೀಮಿತವಲ್ಲ. 

ಅನುವಾದ – ವಾದವಲ್ಲ 

ತಾಂತ್ರಿಕ ಹಾಗೂ ವೈದ್ಯಕೀಯ ಕ್ಷೇತ್ರದ ಪಠ್ಯವನ್ನು ಅನುವಾದ ಮಾಡುವುದು ತುಂಬಾ ಜಟಿಲವಾದ್ದು. ಅಲ್ಲಿ ವಿಷಯದ ಆಳವಾದ ಜ್ಞಾನ ಬೇಕಾಗುತ್ತದೆ, ಜೊತೆಗೆ ಯಾವ ಭಾಷೆಗೆ (ಉದ್ದೇಶಿತ ಭಾಷೆ) ಅನುವಾದಿಸುತ್ತೇವೆಯೋ ಅದರ ತಿಳಿವಳಿಕೆಯೂ ಅವಶ್ಯ. ಇವೆರಡೂ ಅಂಶಗಳು ತಿಳಿದಿವೆ ಎಂದಾದರೆ ಸಹಜವಾಗಿಯೇ ಅದೊಂದು ಹೆಮ್ಮೆಯ ಸಂಗತಿಯಾಗಿರುತ್ತದೆ. ಈ ಅಂಶಗಳ ಜೊತೆಗೆ ಯಾರಿಗಾಗಿ (ಉದ್ದೇಶಿತ ಓದುಗ) ಈ ಅನುವಾದ ಎಂಬುದು ನಿರ್ಣಾಯಕ ಅಂಶವಾಗುತ್ತದೆ. ಸರಳ ವ್ಯಾಕರಣ ಮತ್ತು ಸುಲಭ ಪದಗಳನ್ನು ಹೊಂದಿರುವ ಇಂಗ್ಲಿಷ್ ಭಾಷೆಯ ಮಕ್ಕಳ ಕಥೆಗಳು ಯಾವುದೇ ತೊಡಕುಗಳನ್ನು ಒಡ್ಡದೇ ನಿರರ್ಗಳವಾಗಿ ಓದಿಸಿಕೊಂಡು ಹೋಗುತ್ತವೆ. ಇದೇನು ಮಹಾ, ಸುಲಭವಾಗಿ ಅನುವಾದ ಮಾಡಿ ಬಿಸಾಕಬಹುದು ಎಂದೆನಿಸುವ ಇಂತಹ ಒಂದು ಕಥೆಯನ್ನು ಕನ್ನಡೀಕರಿಸಲು ಆಯ್ಕೆ ಮಾಡಿಕೊಂಡಾಗ ಅಲ್ಲಿಯೂ ಅನುವಾದ ಜಟಿಲ ಎನಿಸುತ್ತದೆ. ಅಂದರೆ ವಾಸ್ತವವಾಗಿ ಅನುವಾದ ಮಾಡಲು ಪ್ರಾರಂಭಿಸಿದಾಗ ಈ ಮಕ್ಕಳ ಕಥೆಗಳನ್ನು ನಿಷ್ಠೆಯಿಂದ ಅನುವಾದ ಮಾಡುವುದು ಎಂತಹ ಸವಾಲಿನ ಕೆಲಸ ಎಂಬುದು ತಿಳಿಯುತ್ತದೆ. ಮೂಲ ಭಾಷೆ, ಕಥೆಯ ವಿಷಯ, ಉದ್ದೇಶಿತ ಭಾಷೆ ಮತ್ತು ಯಾರಿಗಾಗಿ ಈ ಅನುವಾದ ಎಂಬ ತಿಳಿವಳಿಕೆಯಷ್ಟೇ ಅನುವಾದ ಮಾಡಲು ಬೇಕಾದ ಮಾನದಂಡ ಎಂದುಕೊಂಡರೆ ಅದು ಅನುವಾದ ವಾಗುವುದಿಲ್ಲ, ನಾನು ಮಾಡಿದ್ದೇ ಸರಿ ಎಂಬ ವಾದವಾಗುತ್ತದೆ ಅಷ್ಟೇ! ಮಕ್ಕಳ ಕಥೆಗಳನ್ನು ಅನುವಾದ ಮಾಡುತ್ತಾ ನಾವೂ ಮಕ್ಕಳಾಗಬೇಕಾಗುತ್ತದೆ, ಅವರ ಅನುಪಸ್ಥಿತಿಯಲ್ಲಿ ಅವರೊಂದಿಗೆ ನಿರಂತರ ಸಂವಹನ ಮಾಡಬೇಕಾಗುತ್ತದೆ.

Illustration by Priya Kuriyan

 

ವಿಭಿನ್ನ ಕಥೆಗಳ ಕಣಜ- ಸ್ಟೋರಿವೀವರ್ 

ಸ್ಟೋರಿವೀವರ್​ನಲ್ಲಿರುವ ಕಥೆಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಇಲ್ಲಿ ಅನುವಾದ ಇನ್ನೂ ಭಿನ್ನವಾಗಿ ಆಗಬೇಕಾಗುತ್ತದೆ. ಕಾರಣ, ಇಲ್ಲಿರುವ ಕಥೆಗಳನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಿಕೊಳ್ಳಬಹುದು; ಒಂದು- ಫೇರಿ ಟೇಲ್ ಅಥವಾ ಕಾಲ್ಪನಿಕ ಕಥೆ, ಸಾಹಸ, ಶೌರ್ಯ, ಕರುಣೆ ಇತ್ಯಾದಿ ವಿಷಯಾಂಶಗಳನ್ನು ಹೊಂದಿರುವಂತಹವು, ಎರಡು- ವಿಜ್ಞಾನ, ಗಣಿತ, ಪರಿಸರ ಅಧ್ಯಯನ ಇತ್ಯಾದಿ ವಿಷಯಗಳ ಪರಿಕಲ್ಪನೆಗಳನ್ನು ಹೊಂದಿರು ವಂತಹವು. ಒಂದನೇ ಗುಂಪಿನ ಕಥೆಗಳನ್ನು ಸುಲಭವಾಗಿ ಅನುವಾದಿಸ ಬಹುದೇನೋ, ಆದರೆ ಸವಾಲು ಎದುರಾಗುವುದು ಎರಡನೇ ಗುಂಪಿನ ವಿವಿಧ ವಿಷಯಗಳ ಪರಿಕಲ್ಪನೆಗಳನ್ನು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ಮಕ್ಕಳಿಗೆ ಅರ್ಥ ವಾಗುವಂತೆ ಹಾಗೂ ಕನ್ನ ಡದ ಜಾಯಮಾನಕ್ಕೂ ಹೊಂದುವಂತೆ ಅನುವಾದಿಸುವುದು. ಇದು ಸವಾಲು ಎಂದೆನಿ ಸಲು ಕಾರಣ, ಈ ವಿಷಯಗಳಲ್ಲಿರುವ ಹೆಚ್ಚಿನ ಪರಿಕಲ್ಪನೆಗಳು ಇಂಗ್ಲಿಷ್ ಭಾಷೆಯಲ್ಲಿಯೇ ಹುಟ್ಟುಕೊಂಡಿರುವುದರಿಂದ. ಹೀಗಾಗಿ ಅವುಗಳು ಇಂಗ್ಲೀಷಿನಲ್ಲಿಯೇ ಹೆಚ್ಚು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಇದೇ ಕಾರಣಕ್ಕೋ ಏನೋ ಇಂತಹ ಅನೇಕ ಕಥೆಗಳ ಅನುವಾದವನ್ನು ಓದುವಾಗ ಅನುವಾದಕ್ಕಿಂತ ಮೂಲವೇ ಹಿತವೆಸುತ್ತವೆ. 

ಪಾಠ ಒಂದೇ – ವಿಭಿನ್ನ ಭಾಷೆಗಳು – ವಿಭಿನ್ನ ಅಭಿವ್ಯಕ್ತಿಗಳು

ಒಂದೇ ವಿಷಯದ ಪರಿಕಲ್ಪನೆಯನ್ನು ಮಕ್ಕಳು ಸುಲಭವಾಗಿ ಅರ್ಥ ಮಾಡಿಕೊಳ್ಳುವ ರೀತಿ ಯಲ್ಲಿ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ತಿಳಿಸಲು ಮಾಡಿರುವ ವಿಭಿನ್ನ ಪ್ರಯತ್ನಗಳನ್ನು ನಾವು ಕೂಡ ಮಾಡುವುದರಿಂದ ಮಕ್ಕಳು ಆ ಪರಿಕಲ್ಪನೆಯನ್ನು ಇನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. 

ಅನುವಾದಕ ಮತ್ತು ಓದುವ ಮಕ್ಕಳ ನಡುವೆ ಉತ್ತಮ ಸಂವಹನ 

ಈ ಹಿಂದೆಯೇ ಪ್ರಸ್ತಾಪಿಸಿದಂತೆ ಒಬ್ಬ ಯಶಸ್ವಿ ಅನುವಾದಕ ಕಥೆಗಳನ್ನು ಅನುವಾದಿಸುವಾಗ ಅದನ್ನು ಓದುವ ಮಕ್ಕಳೊಂದಿಗೆ ಅವರ ಅನುಪಸ್ಥಿತಿಯಲ್ಲಿ ನಿರಂತರವಾಗಿ ಸಂವಹನ ನಡೆಸು ತ್ತಿರಬೇಕು. ಮಕ್ಕಳ ಅನುಪಸ್ಥಿತಿಯಲ್ಲಿ ನಮ್ಮ ಸಂವಹನ ಉತ್ತಮವಾಗಿ ನಡೆದಾಗ ಮಾತ್ರ ಅನುವಾದದಲ್ಲಿ ಗೊಂದಲವಾಗುವುದಿಲ್ಲ ಜೊತೆಗೆ ಮಕ್ಕಳು ಉಪಸ್ಥಿತಿಯಲ್ಲಿ ಕಥೆಯನ್ನು ಓದಿ ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗುತ್ತದೆ.

ಮಕ್ಕಳ ಪುಸ್ತಕಗಳನ್ನು ಯಶಸ್ವಿಯಾಗಿ ಅನುವಾದಿಸಲು ಕೆಲವು ಸಹಾಯಕ ಸಲಹೆಗಳು

  • ಅನುವಾದಕರಿಗೆ ಉದ್ದೇಶಿತ ಭಾಷೆಯ ಬರಣಿಗೆ ಶೈಲಿ ತಿಳಿದಿರಬೇಕು
  • ಉದ್ದೇಶಿತ ಭಾಷೆಯಲ್ಲಿರುವ ಕೆಲವು ಮಕ್ಕಳ ಕಥೆಗಳನ್ನು ಓದಿಕೊಂಡಿರಬೇಕು
  • ಕಥೆಯ ಮೂಲ ಉದ್ದೇಶವನ್ನು ತಿಳಿದುಕೊಂಡರೆ ಅನುವಾದ ಕಾರ್ಯ ಸುಲಭವಾಗುತ್ತದೆ
  • ಮೂಲ ಕಥೆಯಿಂದ ಸರಿಯಬಾರದು; ಸ್ವಾತಂತ್ರ್ಯ ತೆಗೆದುಕೊಳ್ಳಬಾರದು 
  • ಅನುವಾದಿಸಲು ಪ್ರಾರಂಭಿಸುವ ಮುನ್ನ ಪಠ್ಯ ಓದಬೇಕು, ಕೆಲವೊಮ್ಮೆ ಸಾಕಷ್ಟು ಬಾರಿ ಓದುವುದು ಉತ್ತಮ
  • ಅನುವಾದ ಮಾಡುವಾಗ ಯಾವುದೋ ಸಂವಾದಿ ಪದ ಕೂಡಲೇ ಹೊಳೆಯದಿದ್ದರೆ, ಸ್ವಲ್ಪ ವಿರಾಮ ತೆಗೆದುಕೊಂಡು ಪುನಃ ಮರಳಿ, ಸುಳಿಯುತ್ತದೆ.
  • ಪಠ್ಯದ ಮೂಲಕ್ಕೆ ಚ್ಯುತಿ ಬರದಂತೆ ಉದ್ದೇಶಿತ ಭಾಷೆಯಲ್ಲಿ ಸಮಾನ ಅರ್ಥವನ್ನು ಹುಡುಕಬೇಕು.
  • ಅನುವಾದವನ್ನು ಸಂಪಾದಿಸುವಾಗ, ಜೋರಾಗಿ ಓದಬೇಕು: ಓದು ಕೃತಕ ಎನಿಸಬಾರದು  
  • ಅನುವಾದ ಸಂಪಾದಿಸಿ ಅಂತ್ಯಗೊಳಿಸಿದ ನಂತರ ಕೆಲವು ದಿನಗಳವರೆಗೆ ವಿರಾಮ ತೆಗೆದುಕೊಂಡು, ಪುನಃ ಓದಿ ನೋಡಬೇಕು.
  • ಅನುವಾದಿತ ಕಥೆಯನ್ನು ಕೊನೆಯ ನಿಮಿಷದವರೆಗೆ ಸಂಪಾದಿಸುವುದನ್ನು ಮುಂದುವರಿಸಬೇಕು.

 

Jnanamurthy B.R. is a professional translator based in Mysuru, India, and works as a Resource Person in National Translation Mission, Central Institute of Indian Languages. He has translated and reviewed more than 130 children stories for ‘Room to Read’ an NGO, and ‘EMESCO’. Apropos, he has translated Iravaty Karve’s English book ‘Hindu Society- an Interpretation’ into Kannada and edited Kannada translation of M.N. Srinivas’s ‘Social Change in Modern India’. Coordinated and executed several workshops and events on translation techniques. Also, successfully accomplished projects assigned by NCERT, CBI, AIISH, KSOU, Karnataka State Govt., Intel, Amazon, Snapchat, etc. His thrust areas of translation include humanities, general science, medicine, advertising, marketing, legal documents and others.

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here