Uncategorized

ಹಣ್ಣು ಮತ್ತು ತರಕಾರಿ ಎನ್ನುವುದೇಕೆ?

ಪ್ರಥಮ್ ಬುಕ್ಸ್ ‘My First Book’ ಸರಣಿಯ ಆನ್ ಲೈನ್ ಆವೃತ್ತಿ ಪ್ರಕಟಗೊಂಡಿದೆ. ಈ ಸರಣಿಯ My First Book of Fruits and Vegetables/ ಹಣ್ಣು ಮತ್ತು ತರಕಾರಿಗಳ ಬಗ್ಗೆ ನನ್ನ ಮೊದಲ ಪುಸ್ತಕದಲ್ಲಿ ಹಣ್ಣು ಮತ್ತು ತರಕಾರಿಗಳ ಹೆಸರುಗಳನ್ನು ಆಕರ್ಷಕ ಚಿತ್ರಗಳೊಂದಿಗೆ ಪರಿಚಯಿಸಲಾಗಿದೆ.  ಹಾಗಾದರೆ, ತರಕಾರಿ, ಹಣ್ಣು ಎಂಬ ವ್ಯತ್ಯಾಸಗಳನ್ನು ನಾವೇಕೆ ಮಾಡಿಕೊಂಡೆವು? ತಿಳಿಯೋಣವಾ?.

ಬೀಜಗಳನ್ನು ಹೊಂದಿರುವ ಮತ್ತು ಹೂವಿನಿಂದ ಬೆಳವಣಿಗೆಯಾಗುವ ಸಸ್ಯದ ಯಾವುದೇ ತಿರುಳಿನ ಭಾಗವೇ ಹಣ್ಣು. ಆದರೆ ತರಕಾರಿ ಬೆಳೆಯುವುದು ಮೃದುಕಾಂಡ ಹೊಂದಿರುವ ಸಸ್ಯಗಳಲ್ಲಿ. ಸಸ್ಯಶಾಸ್ತ್ರಜ್ಞರ ಪ್ರಕಾರ ಬೀಜಗಳನ್ನು ಹೊಂದಿರುವ ಸಸ್ಯದ ಅಂಗಭಾಗವೇ ಹಣ್ಣು. ಇದನ್ನು ಆಧಾರವಾಗಿಟ್ಟುಕೊಂಡು ಹಣ್ಣುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ತಿರುಳಿನ ಹಣ್ಣುಗಳು (ಕಿತ್ತಳೆ, ಕಲ್ಲಂಗಡಿ, ಬೆರ್ರಿಗಳು ಮತ್ತು ಸೇಬು). ಎರಡನೆಯದು, ಕುಳಿಯಂಥ ಆಕಾರ ಅಥವಾ ಪುಡಿಗಲ್ಲಿನಂಥ ರಚನೆ ಹೊಂದಿರುವ ಹಣ್ಣುಗಳು (ಚೆರ್ರಿ, ಪೀಚ್ ಹಣ್ಣು ಇತ್ಯಾದಿ). ಇನ್ನು ಒಣಹಣ್ಣುಗಳು ಮೂರನೆಯ ಪ್ರಕಾರದವು. ಇದರಲ್ಲಿ ಕಾಳುಗಳು, ಅಂದರೆ ಕಡಲೆಕಾಯಿ, ಹುರುಳಿಕಾಯಿ ಮತ್ತು ಬಟಾಣಿ ಒಳಗೊಳ್ಳುತ್ತವೆ. ಹುರುಳಿಕಾಯಿ ಮತ್ತು ಬಟಾಣಿಯೂ ಹಣ್ಣುಗಳು ಎಂಬುದು ಅಚ್ಚರಿಯಾದರೂ ಸತ್ಯ. ಅವುಗಳಲ್ಲಿ ಬೀಜಗಳು ಇರುವುದರಿಂದ ಕಡಲೆ, ಬಟಾಣಿ, ಹುರುಳಿಕಾಯಿಗಳನ್ನು ಹಣ್ಣಿನ ಗುಂಪಿಗೆ ಸೇರಿಸಿ ಬಿಟ್ಟಿದ್ದಾರೆ ಸಸ್ಯಶಾಸ್ತ್ರಜ್ಞರು. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಸಸ್ಯಶಾಸ್ತ್ರಜ್ಞರ ಪ್ರಕಾರ ಸೌತೆಕಾಯಿಯೂ ಹಣ್ಣೇ! ಇವೆಲ್ಲ ತಾಂತ್ರಿಕ ಮತ್ತು ವರ್ಗೀಕರಣದ ಸಮಸ್ಯೆಗಳು.

ಎಲೆ ಕೋಸು, ಹೂ ಕೋಸು, ಗೆಡ್ಡೆಕೋಸು ಮತ್ತು ಮೂಲಂಗಿ ಒಂದೇ ವರ್ಗಕ್ಕೆ ಸೇರುವ ತರಕಾರಿಗಳು. ಅದೇ ರೀತಿ, ಲೆಟ್ಯೂಸ್ ಎಂದು ಕರೆಯಲಾಗುವ ತರಕಾರಿ ಸೊಪ್ಪು, ಚಿಕೋರಿ, ಪಲ್ಲೆ ಹೂ ಅಥವಾ ಅರ್ಟಿಕೋಸ್ ಮತ್ತೊಂದು ಗುಂಪಿನ ತರಕಾರಿಗಳು. ಸೋರೆ, ಸೌತೆ, ಕಲ್ಲಂಗಡಿ ಮತ್ತು ಕುಂಬಳ ಇನ್ನೊಂದು ಗುಂಪಿಗೆ ಸೇರುವ ತರಕಾರಿಗಳು. ಮತ್ತೊಂದು ಗುಂಪಿನಲ್ಲಿ ಬಟಾಣಿ, ಎಲ್ಲ ರೀತಿಯ ಬೀನ್ಸ್, ಕಡಲೆಕಾಯಿ ಮತ್ತು ಸೋಯಾಬೀನ್ ಬರುತ್ತವೆ. ಅಸ್ಪ್ಯಾರಗಸ್ (ಶತಾವರಿ) ಹೂಬಿಡುವ ಸಸ್ಯಜಾತಿಯ ತರಕಾರಿ ಈರುಳ್ಳಿ-ಬೆಳ್ಳುಳ್ಳಿ ಕುಟುಂಬಕ್ಕೆ ಸೇರಿದೆ. ಇನ್ನೊಂದು ಆಸಕ್ತಿದಾಯಕ ಸಂಗತಿ ಎಂದರೆ ಆಲೂಗಡ್ಡೆ, ಮೆಣಸು, ತಂಬಾಕು, ಸೊಲೇನಮ್ (ಒಂದು ವಿಷಕರ ಸಸ್ಯ ಜಾತಿ) ಕುಲಕ್ಕೆ ಸೇರಿವೆ. ಆದರೆ ಒಂದಂತೂ ನಿಜ, ಹಣ್ಣು ಮತ್ತು ತರಕಾರಿಗಳು ನಮ್ಮ ಆರೋಗ್ಯಕ್ಕೆ ಬೇಕಾದ ಜೀವಸತ್ವ ಮತ್ತು ಖನಿಜಗಳನ್ನು ಪೂರೈಸುತ್ತವೆ.

ಟೊಮೆಟೊ: ಹಣ್ಣೋ, ತರಕಾರಿಯೋ?

ಟೊಮೆಟೊ ‘ಹಣ್ಣು’ ಎಂದು ಕರೆದು ‘ತರಕಾರಿ’ ರೂಪದಲ್ಲಿ ಬಳಸುವುದರಿಂದ ಟೊಮೆಟೊ ತರಕಾರಿಯೋ, ಹಣ್ಣೋ ಎಂಬ ಜಿಜ್ಞಾಸೆ ಉಳಿದು ಬಿಟ್ಟಿದೆ. ಸಸ್ಯಶಾಸ್ತ್ರಜ್ಞರ ಪ್ರಕಾರ ಟೊಮೆಟೊ ಒಂದು ರೀತಿಯ ಹಣ್ಣು. ಇದರಲ್ಲಿ ಅನುಮಾನವೇ ಇಲ್ಲ. ಇದನ್ನು ಸೂಪ್, ಸಾಸ್ ಮತ್ತು ಕೆಚಪ್‌ಗಳಲ್ಲಿ ಬಳಸಲಾಗುತ್ತದೆ. ದೈನಂದಿನ ಆಹಾರದಲ್ಲಿ ಮುಖ್ಯ ಭಾಗವಾಗಿ ಉಪಯೋಗಿಸಲಾಗುತ್ತದೆ. ಹೀಗಾಗಿ ಟೊಮೆಟೊದಿಂದ ಹೇಗಾದರೂ ಮಾಡಿ ‘ಒಳ್ಳೆಯ ಲಾಭ’ ಮಾಡಿಕೊಡಲು ಯತ್ನಿಸುತ್ತಿದ್ದ ಅಮೆರಿಕದ ಸುಪ್ರೀಂ ಕೋರ್ಟ್, ಟೊಮೆಟೊವನ್ನು ತರಕಾರಿ ಎಂದು 1893ರಲ್ಲಿ ಘೋಷಿಸಿತು!

ಟೊಮೆಟೊ ದಕ್ಷಿಣ ಅಮೆರಿಕ ಮೂಲದ ಬೆಳೆ. ಪೆರು, ಈಕ್ವೆಡಾರ್ ಮತ್ತು ಬೊಲಿವಿಯಾಗಳಲ್ಲಿ ಇದು ಕಾಡಿನ ಕಳೆಯಾಗಿ ಬೆಳೆಯುತ್ತಿತ್ತು. ಕೊಲಂಬಸ್ ಹೊಸ ಪ್ರಪಂಚಕ್ಕೆ ದಾರಿ ಮಾಡುವ ಎಷ್ಟೋ ಕಾಲದ ಹಿಂದೆಯೇ ಮೆಕ್ಸಿಕೊದಲ್ಲಿ ಟೊಮೆಟೊ ತೋಟಗಳು ಅಭಿವೃದ್ಧಿಯಾಗಿದ್ದವು. ಬಹುಶಃ ಐರೋಪ್ಯ ದೇಶಗಳಿಗೆ ಮೆಕ್ಸಿಕೊದಿಂದಲೇ ಈ ಬೆಳೆ ಪರಿಚಯವಾಗಿದ್ದು. 15ನೇ ಶತಮಾನದಲ್ಲಿ ಇಟಲಿಯಲ್ಲಿ ಇದನ್ನು ‘ಆ್ಯಪಲ್ ಗೋಲ್ಡ್’ ಎಂದು ಕರೆಯುತ್ತಿದ್ದರು. ಅಂದರೆ ಯೂರೋಪಿನಲ್ಲಿ ಆಗ ಪ್ರಚಲಿತದಲ್ಲಿದ್ದದ್ದು ಹಳದಿ ಬಣ್ಣದ ಟೊಮೆಟೊ. 16ನೇ ಶತಮಾನದ ಕೊನೆಯಲ್ಲಿ ಟೊಮೆಟೋವನ್ನು ಇಂಗ್ಲೆಂಡ್, ಸ್ಪೇನ್, ಇಟಲಿ, ಫ್ರಾನ್ಸ್, ಮಧ್ಯ ಯೂರೋಪಿನ ಹಲವು ಕಡೆ ಬೆಳೆಯಲು ಆರಂಭಿಸಲಾಯಿತು. ಇದರ ವಗರು ರುಚಿಯಿಂದಾಗಿ ಇದನ್ನು ಹಣ್ಣು ಎಂದೇ ಭಾವಿಸಲಾಗುತ್ತದೆ. ಹಲವು ಔಷಧಿ ಮತ್ತು ಸುಗಂಧದ್ರವ್ಯಗಳಲ್ಲಿ ಟೊಮೆಟೊವನ್ನು ಹೇರಳವಾಗಿ ಬಳಸಲಾಗುತ್ತದೆ.

ಸಾಮಾನ್ಯವಾಗಿ, ಆಹಾರ ಪದ್ಧತಿ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುವುದರಿಂದ ಕೆಲವರು ಹಣ್ಣನ್ನು ತರಕಾರಿಯಂತೆ ತಿನ್ನುತ್ತಾರೆ. ಮತ್ತೂ ಕೆಲವರು ತರಕಾರಿಯನ್ನು ಹಣ್ಣಿನಂತೆ ತಿನ್ನುತ್ತಾರೆ. ಇದು ಅವರವರ ಇಚ್ಛೆಗೆ ಸಂಬಂಧಿಸಿದ್ದಷ್ಟೇ. ಉದಾಹರಣೆಗೆ ಟೊಮೆಟೊ ನಮಗೆ ತರಕಾರಿ, ಪಾಶ್ಚಾತ್ಯರಿಗೆ ಹಣ್ಣು!

Hema D Khurshapur, Editor (Kannada) at Pratham Books sheds light on why there is a need to differentiate between fruits and vegetables! 

Click here to read the book on StoryWeaver. 

 

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here