Uncategorized

ಮಕ್ಕಳಿಗೆ ಅರ್ಥವಾಗುವಂತೆ ಅಲ್ಲ, ಮಕ್ಕಳಿಗೆ ಏನು ಹೇಳಿದರೂ ಅರ್ಥವಾಗುತ್ತೆ- ಎಚ್.ಎಸ್.ವೆಂಕಟೇಶಮೂರ್ತಿ

By Bhargavi G M

ತರಹೇವಾರಿ ಸ್ವರೂಪಗಳಲ್ಲಿ ಅಂಗೈಯಲ್ಲೇ ಇಂಗ್ಲಿಷು ನಿರಾಯಾಸವಾಗಿ ಉಲಿಯುತ್ತಿರುವಾಗ ಕನ್ನಡವನ್ನು ಸುಖಾಸುಮ್ಮನೆ ಸರಳಗೊಳಿಸದೆಯೂ, ಎಲ್ಲ ಮಕ್ಕಳ ಬಾಯಲ್ಲಿ ಓದಿಸುವುದು ಹೇಗೆ? ಇದು ಮಕ್ಕಳ ಪುಸ್ತಕ ಪ್ರಕಟಣೆ, ಹಲವು ಭಾಷೆಗಳಲ್ಲಿ ಗುಣಮಟ್ಟದ ಅನುವಾದಗಳನ್ನು ಕೈಗೊಳ್ಳುತ್ತ ಬಂದಿರುವ ಪ್ರಥಮ್ ಬುಕ್ಸ್ ನ ನಿರಂತರ ಕಸರತ್ತು. ಇದಕ್ಕೆ ಹಲವು ಮಾದರಿಗಳ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನಗಳ ಪೈಕಿ ದೊಡ್ಡಮಟ್ಟದ್ದು ಎನ್ನುವಂತದ್ದು ಇತ್ತೀಚೆಗೆ ಶಬ್ದನಾದೊಂದಿಗೆ ನಡೆದ ಕಾರ್ಯಾಗಾರ.

ಸಾಹಿತ್ಯ ಅಕಾಡೆಮಿಯ ಶಬ್ದನಾ ಭಾಷಾಂತರ ಕೇಂದ್ರ ಮತ್ತು ಪ್ರಥಮ್ ಬುಕ್ಸ್ ಸಹಯೋಗದೊಂದಿಗೆ “ಜನಪ್ರಿಯ ಮಕ್ಕಳ ಪುಸ್ತಕಗಳ ಮರು ಓದು ಕುರಿತು ವಿಚಾರ ಸಂಕಿರಣ ಮತ್ತು ಅನುವಾದ ಕಾರ್ಯಾಗಾರ” ಕಳೆದ ಆಗಸ್ಟ್ 5  ಮತ್ತು 6ರಂದು ಅರಮನೆ ರಸ್ತೆಯ ಜೈನ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ವಿಷಯದ ಬಗ್ಗೆ ಕಳೆದ ದಶಕದಿಂದೀಚೆಗೆ ನಡೆದ ವಿನೂತನ ಪ್ರಯತ್ನ ಇದು ಎನ್ನಲು ಅಡ್ಡಿಯಿಲ್ಲ. ಏಕೆಂದರೆ, ಮಕ್ಕಳಿಗಾಗಿ ಕನ್ನಡದಲ್ಲಿ ಅನುವಾದ ಎಂಬ ವಿಷಯದ ಬಗ್ಗೆ ಅತ್ಯದ್ಭುತ ಮಾದರಿಗಳನ್ನು ನಮ್ಮ ಸಾಹಿತಿಗಳು, ಬರಹಗಾರರು ಹಾಕಿಕೊಟ್ಟಿದ್ದಾರೆ, ಹಲವು ಪ್ರಯೋಗಗಳನ್ನು ಮಾಡಿದ್ದಾರೆ ಎಂಬ ಬಗ್ಗೆ ಯಾವುದೇ ಸಂಶಯಗಳಿಲ್ಲ. ಆದರೆ, ಇಂತಹ ಕೆಲವು ಮಾದರಿಗಳನ್ನು ಒಂದೆಡೆ ಕಲೆ ಹಾಕಿ, ಈ ನಿಟ್ಟಿನಲ್ಲಿ ಈ ಕಾಲದವರನ್ನೂ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಪ್ರೇರೇಪಿಸಲು ಯಾವೆಲ್ಲ ಅಂಶಗಳಿರಬೇಕು ಎಂಬ ಬಗ್ಗೆ ವಸ್ತುನಿಷ್ಠವಾಗಿ ಚರ್ಚಿಸುವುದು ಈ ಕಾರ್ಯಾಗಾರದ ಮುಖ್ಯ ಆಶಯವಾಗಿತ್ತು.
.
.

Inauguration session with the chief guests on the dais.

.
.
Day 1
ಮೊದಲ ದಿನ, ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಪರಂಪರೆ ಮೆಲುಕು ಹಾಕಲು, ವಿಷಯ ವಾರು ಸೆಷನ್ನುಗಳೊಂದಿಗೆ ಅತ್ಯಂತ ಸೂಕ್ತ ಎನಿಸುವ ತಜ್ಞರನ್ನು ನಿಯೋಜಿಸಿದ್ದೆವು. ಮಕ್ಕಳ ಸಾಹಿತ್ಯದ ಉಗಮ ಮತ್ತು ಬೆಳವಣಿಗೆ (ಎ.ವಿ.ನಾವಡ), ಬದುಕು ಮತ್ತು ಪರಿಸರ ಸಂಬಂಧಿತ ಕ್ಲಾಸಿಕ್ ಕತೆಗಳು (ನಾಗೇಶ ಹೆಗಡೆ), ಮಕ್ಕಳಿಗಾಗಿ ಬರವಣಿಗೆ (ಎಚ್.ಎಸ್.ವಿ), ಅನುವಾದ – ಪ್ರಸ್ತುತತೆ ಮತ್ತು ಸವಾಲುಗಳು (ಎಂ.ಎಸ್.ಶ್ರೀರಾಮ್), ಮಕ್ಕಳಿಗಾಗಿ ಈ ಕಾಲದ ಕತೆಗಳು (ಚ.ಹ.ರಘುನಾಥ) ಎಂಬ ವಿಷಯಗಳ ಬಗ್ಗೆ ತಲಾ 20ರಿಂದ 3೦ನಿಮಿಷಗಳವರೆಗೆ ಮಾತುಕತೆಗಳು ನಡೆದವು. ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಾರ್ವಕಾಲಿಕ ಕವಿತೆಗಳ ಲವಲವಿಕೆಯ ಉದಾಹರಣೆಗಳು ಮತ್ತು ಓದಿಗೆ ದೊಡ್ಡವರೂ ಮಕ್ಕಳಾದರು.
.
.

Suzanne Singh, Chairperson, Pratham Books speaks about the importance of multilingual storybooks.

.
.
Day 2
ಇನ್ನು ಎರಡನೇ ದಿನ, ರಾಜ್ಯದ ಬೇರೆ ಬೇರೆ ಭಾಗಗಳಿಂದ ಪ್ರಥಮ್ ಬುಕ್ಸ್ ಪರವಾಗಿ ಕರೆಸಿದ್ದ ಶಿಕ್ಷಕರು, ಅನುವಾದಕರಿಗಾಗಿ “Alice in Wonderland” ಮತ್ತು ಕನ್ನಡದ ಅವತರಣಿಕೆ ‘ಪಾತಾಳದಲ್ಲಿ ಪಾಪಚ್ಚಿ’, “Laura ingalls wilder” ಸರಣಿಯ ಮೂರನೆ ಪುಸ್ತಕ “Farmer Boy”ನ ಕನ್ನಡ ಅವತರಣಿಕೆ ‘ರೈತರ ಹುಡುಗ’, ಕುವೆಂಪು ಅವರ “ಬೊಮ್ಮನಹಳ್ಳಿಯ ಕಿಂದರಿಜೋಗಿ” ಮತ್ತು “Pied piper of Hamelin”ನ ಆಯ್ದ ಸಾಲುಗಳನ್ನು ಉದಾಹರಿಸಿ ಸಂಪನ್ಮೂಲ ವ್ಯಕ್ತಿಗಳಾದ ಕೊಳ್ಳೇಗಾಲ ಶರ್ಮ, ನಾಗೇಶ ಹೆಗಡೆ, ಟಿ.ಜಿ.ಶ್ರೀನಿಧಿ, ಶಶಿ ಸಂಪಳ್ಳಿ, ಕುಮಾರ್ ಎಸ್. ಇತರರು ರೂಪಾಂತರ, ಭಿನ್ನ ಸಂಸ್ಕೃತಿಯ ಅನಾವರಣ, ಪಾತ್ರಗಳ ಹೆಸರುಗಳು, ಭಾವಾಭಿವ್ಯಕ್ತಿ, ಕನ್ನಡೀಕರಣಗೊಳಿಸುವಾಗ ತೆಗೆದುಕೊಳ್ಳಬಹುದಾದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು. ಆನಂತರ ನಡೆದ ಚರ್ಚೆ ಉಪಯುಕ್ತವಾಗಿತ್ತು.ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಶಿವಾನಂದ ಹೊಂಬಳ ಅವರು ಚಿತ್ರಗಳ ಮೂಲಕ ಕತೆ ಹೆಣೆಯುವಿಕೆ ಮತ್ತು ಪ್ರಸ್ತುತ ಪಡಿಸುವ ಆಯಾಮಗಳನ್ನು ಕಲ್ಪನಾತೀತವಾಗಿ ಕಟ್ಟಿಕೊಟ್ಟರು.
.
.

Translation workshop in progress

”  ಇಂದಿನ ದಿನಗಳಲ್ಲಿ ಹೆಚ್ಚೆಚ್ಚು ಮಾಹಿತಿ ಕೈಗೆಟಕುವಂತಿದೆ.  ಆ ಸಿದ್ಧ ಮಾಹಿತಿಯನ್ನೇ ಜ್ಞಾನ ಎಂದುಕೊಳ್ಳಲಾಗುತ್ತಿದೆ. ಜ್ಞಾನದ ಹಿನ್ನೆಲೆಯಿಂದ ಬಂದ ಅರಿವು ಮುಖ್ಯ. ಕ್ಲಾಸಿಕ್ ಕತೆಗಳ ಓದಿಗೆ ಅಭಿರುಚಿ, ಆ ವಾತಾವರಣ ನಿರ್ಮಿಸುವುದು ಕಾರ್ಯಾಗಾರದ ಪ್ರಮುಖ ಆಶಯ. ಈ ಪ್ರಯೋಗಾತ್ಮಕ ಕಾರ್ಯಾಗಾರದ ನಂತರ, ಮಕ್ಕಳಿಗಾಗಿ ಅನುವಾದಿಸುವುದು ಹೇಗೆ ಎಂಬ ಬಗ್ಗೆ ಕೈಪಿಡಿ ತರಲಿದ್ದೇವೆ. ಇದೇ ಮಾದರಿಯ ಕಾರ್ಯಾಗಾರವನ್ನು ತೆಲುಗು, ತಮಿಳು, ಹಿಂದಿ, ಬೆಂಗಾಲಿ ಭಾಷೆಗಳಲ್ಲೂ ಆಯೋಜಿಸುವ ಮಹದಾಸೆ ಇದೆ.”
– ಎಸ್.ಆರ್.ವಿಜಯಶಂಕರ್, ಗೌರವ ನಿರ್ದೇಶಕರು, ಶಬ್ದನಾ ಭಾಷಾಂತರ ಕೇಂದ್ರ, ಸಾಹಿತ್ಯ ಅಕಾದೆಮಿ
“ಕನ್ನಡ ಸಾಹಿತ್ಯದ ಆರಂಭಿಕ ಹಂತದಲ್ಲಿ ಶ್ರೇಷ್ಠ ಸಾಹಿತಿಗಳು ಮಕ್ಕಳ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಪಂಜೆ ಮಂಗೇಶರಾಯರು, ಸಿದ್ದಯ್ಯ ಪುರಾಣಿಕ, ಎಚ್.ಎಸ್.ವೆಂಕಟೇಶ ಮೂರ್ತಿ, ಎ.ಕೆ.ರಾಮೇಶ್ವರ ರಾವ್, ಚಂದ್ರಶೇಖರ ಕರದಳ್ಳಿ ಅವರ ಕೊಡುಗೆ ಅದ್ಭುತ. ಆದರೆ, ಇತ್ತೀಚೆಗೆ ಮಕ್ಕಳಿಗಾಗಿ ಬರೆಯುವ ಸಾಹಿತಿಗಳ ಸಂಖ್ಯೆ ಕಡಿಮೆ ಆಗಿದೆ. ಪ್ರಥಮ್‌ ಬುಕ್ಸ್ ನವರು ದೇಶಾದ್ಯಂತ ಮಕ್ಕಳ ಸಾಹಿತ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಸ್ಥೆ ಸುಝೇನ್‌ ಸಿಂಘ್‌ ಅವರು ಪ್ರಥಮದ ಬುಕ್ಸ್ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲ ಮೂಡಿಸಿದ್ದಾರೆ.”
– ಸಿದ್ಧಲಿಂಗಯ್ಯ, ಕವಿ, ಸಂಚಾಲಕರು, ಕನ್ನಡ ಸಲಹಾ ಸಮಿತಿ
“ಮಕ್ಕಳಿಗಾಗಿ ಸುಂದರ ಬಣ್ಣದ ಪುಸ್ತಕಗಳು ಬರಬೇಕು. ಕನ್ನಡದ ಪುಸ್ತಕಗಳನ್ನು  ವಿತರಿಸುವ, ಹಂಚುವ, ಮುದ್ರಿಸುವ ಅವಶ್ಯಕತೆ, ಅನಿವಾರ್ಯತೆ ಇದೆ. ಮಕ್ಕಳ ಕತೆಗಳು ಅವರದೇ ಭಾಷೆಯಲ್ಲಿರಬೇಕು. ಪ್ರಮಾಣ ಕನ್ನಡದಲ್ಲಿರಬೇಕಿಲ್ಲ. 1846ರಲ್ಲಿ ಬಿ.ಎಲ್.ರೈಸ್, ಜಾನ್ ಗ್ಯಾರೆಟ್ ಕನ್ನಡದ ಪಠ್ಯಗಳನ್ನು ಮೊದಲು ರಚಿಸಿದರು. ಮನೋವಿಜ್ಞಾನದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವವರು ಆನಂದ ಪಾಟೀಲ್. ರೆವರೆಂಡ್ ಕಿಟ್ಟಲ್ ವಿಜ್ಞಾನ ಪಾಠವನ್ನು ಪದ್ಯಗಳ ಮೂಲಕ ತಿಳಿಸಿದರು.”
– ಎ.ವಿ.ನಾವಡ, ಭಾಷಾ ಶಾಸ್ತ್ರಜ್ಞ, ವಿದ್ವಾಂಸರು
“ಮಕ್ಕಳ ಸಾಹಿತ್ಯ ನನಗೆ ತುಂಬಾ ಪ್ರಿಯವಾದ ವಿಭಾಗ. ಮಕ್ಕಳ ಮೇಲಿನ ಆಸಕ್ತಿ, ಪ್ರೀತಿಯೇ ಇದಕ್ಕೆ ಕಾರಣ. ಮಕ್ಕಳು, ಪ್ರೌಢರು, ಮಕ್ಕಳ ಸಾಹಿತ್ಯ ನಿರ್ಮಾಣ ಕಷ್ಟ, ಆದರೂ ಅನಿವಾರ್ಯ. ರಂಜನೆ, ವಿಕಸನ ಮಕ್ಕಳ ಸಾಹಿತ್ಯದ ಮುಖ್ಯ ಉದ್ದೇಶ.ಮಕ್ಕಳ ಮುದ್ದು ಕೈಗಳಲ್ಲಿ ಜಗತ್ತನ್ನೇ ಇಡಬಹುದು. ಮಕ್ಕಳಿಗೆ ಅರ್ಥವಾಗುವಂತೆ
ಅಲ್ಲ, ಮಕ್ಕಳಿಗೆ ಏನು ಹೇಳಿದರೂ ಅರ್ಥವಾಗುತ್ತೆ ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕು.”
– ಎಚ್.ಎಸ್.ವೆಂಕಟೇಶಮೂರ್ತಿ, ಕವಿ, ಸಾಹಿತಿ.
“ಮಕ್ಕಳು ಪುಸ್ತಕವನ್ನು ಓದುತ್ತಾರೆ, ವಿಮರ್ಶೆಯನ್ನಲ್ಲ. ಕೊರತೆ ನೀಗಿಸಲು ಓದಲ್ಲ. ಮನಃಶ್ಶಾಸ್ತ್ರದಲ್ಲಿ ಅವರಿಗೆ ಆಸಕ್ತಿ ಇಲ್ಲ. ಪ್ರಿಯ ಲೇಖಕ ಜಗತ್ತನ್ನು ಉದ್ಧರಿಸಬೇಕೆಂದು ಬಯಸಲ್ಲ. ಬೆಳೆದ ನಮಗೆ ಮಾತ್ರ ಈ ಬಾಲಿಷ ಆಲೋಚನೆಗಳು. ಆಕ್ಸ್ ಫರ್ಡ್ ನಂತಹವರು ಕನ್ನಡದ ಪದಗಳನ್ನು ಸೇರಿಸಿ ಪ್ರತಿ ವರ್ಷ ಅಪ್ ಡೇಟ್ ಮಾಡುವರು. ನಮಗೇಕೆ ಆಗುವುದಿಲ್ಲ. ಅನುವಾದದ ಮಹಾ ಸವಾಲು, ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ತರುವುದು. ಅನುವಾದದ ಮೇಲೆ ಗಮನಕ್ಕಿಂತ ರೂಪಾಂತರವೇ ಉತ್ತಮ ಎನಿಸಿದ್ದಿದೆ. ಕಿಂದರಿ ಜೋಗಿ, ಬಿಎಂಶ್ರೀ ಅತ್ಯುತ್ತಮ ಉದಾಹರಣೆ.
– ಎಂ.ಎಸ್.ಶ್ರೀರಾಮ್, ಕತೆಗಾರ, ಪ್ರಬಂಧಕಾರ, ಹಣಕಾಸು ತಜ್ಞ
“ಮನರಂಜನೆ, ಮನೋವಿಕಾಸದ ಆಚೆಗೆ ನೀತಿಯ ಟ್ಯಾಗ್ ಇಟ್ಟುಕೊಂಡಿರುವ, ನೈತಿಕತೆಯ ಬೊಜ್ಜು ಸಾಕು. ಆದರೆ, ಇದು ರೂಪುಗೊಳ್ಳುವುದು ಎಲ್ಲಿ ಎಂದರೆ ಶಿಕ್ಷಣದಲ್ಲಿ. ನೈತಿಕತೆಯ ಭಾರ ಸಾಹಿತ್ಯದ ಮೇಲೇ ಬಿದ್ದಿದೆ. ಮನೋವಿಕಾಸ ಮೊದಲಾಗಬೇಕು. ಅದು ಪರಿಣಾಮದ ರೂಪದಲ್ಲಿ ಬರಲಿ.”
– ಚ.ಹ.ರಘುನಾಥ, ಕವಿ, ಕತೆಗಾರ, ಪತ್ರಕರ್ತ
.

Our recent collaboration with Sahitya Akademi’s Shabdana – center for translation to host “Re-reading of Children’s Classics and Translation Workshop”, hosted by Jain VV, was a fruitful endeavor that gathered some of the finest literary dignitaries. Not only did it encourage many teachers, translators and writers but also inspired many to venture into translation – especially translating for children. 

The author of the blog, Bhargavi G M works as a  languages editor (Kannada) for Pratham Books.

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here