ಮಕ್ಕಳಿಗಾಗಿ ಅನುವಾದಿಸಲೊಂದು ಮುಕ್ತ ಆಹ್ವಾನ
ಫೆ.22ರಂದು ಪ್ರಥಮ್ ಬುಕ್ಸ್ ವತಿಯಿಂದ ಬಸವನಗುಡಿಯ ಮುನ್ನೋಟ ಬುಕ್ಸ್ ಸ್ಟೋರ್ ನಲ್ಲಿ ಸ್ವಯಂಪ್ರೇರಿತ ಅನುವಾದ ಕಮ್ಮಟ ನಡೆಯಿತು
ಕನ್ನಡದಲ್ಲಿ ಮಕ್ಕಳಿಗಾಗಿ ಈ ಕಾಲದಲ್ಲೂ ಯಾವುದಾದರೂ ಕತೆಗಳು ಬರುತ್ತಿವೆಯಾ? ಅವುಗಳ ಸ್ವರೂಪ ಯಾವ ರೀತಿ ಇದೆ? ಅಂತಹ ಕತೆಗಳಲ್ಲಿ ಚಿತ್ರಗಳ ಪಾತ್ರ ಏನು? ಮಕ್ಕಳಿಗೆ ಕತೆ ಹೇಳುವ ಸುಖದ ಕಷ್ಟವನ್ನು ನಿಭಾಯಿಸುವುದು ಹೇಗೆ? ಇಂಗ್ಲಿಷಿನ ಕತೆಗಳು ಕನ್ನಡದ ಮಕ್ಕಳಿಗೆ ಒಗ್ಗುವುದು ಹೇಗೆ? ಇಷ್ಟೆಲ್ಲಾ ಕುತೂಹಲಗಳೊಂದಿಗೆ ಮುನ್ನೋಟದ ಅಂಗಳಕ್ಕೆ ಕಾಲಿಟ್ಟವರು ಈ ಮಂದಿ
ದಿನ ನಿತ್ಯದ ಆಫೀಸ್ ಕೆಲಸದಲ್ಲೇ ಕಳೆದು ಹೋಗಿ ಬಿಡುವ ನನ್ನನ್ನು ಅದರ ಜೊತೆಗೇ ಇದನ್ನೂ ಮಾಡಬಹುದು ಎಂದು ಇಂಥ ಕೆಲಸಗಳಿಗೆ ಎಳೆದುಕೊಂಡು ಬರುವುದು ಭಾರ್ಗವಿ. ಆಗೆಲ್ಲ ಹೌದಲ್ಲ ಆಫೀಸ್ ಕೆಲಸ ಮಾಡುತ್ತಲೇ ಇರುತ್ತೇವಲ್ಲ ಅದಲ್ಲದೇ ಇದೂ productive ಕೆಲಸವೇ ಎಂದು ಸ್ವಲ್ಪ ನಿಧಾನವಾದರೂ ನಾನೂ ಆ ಕಡೆಗೆ ಹೊರಳುತ್ತೇನೆ.
ಹೀಗೆ ಹೊರಳಿದಾಗಲೆಲ್ಲ ಏನು ಮಾಡಬಹುದು ಎಂದು ಯೋಚಿಸುತ್ತಿರುತ್ತೇವೆ. ನಾವು ಹೀಗೆ ಮಾಡಬೇಕು ಅಂತ ಮಾಡಿದ್ದೇವೆ ಎನ್ನುತ್ತಿದ್ದ ಹಾಗೆ ಎರಡನೇ ಯೋಚನೆ ಇಲ್ಲದೇ ಮಾಡಿ ಮಾಡಿ ಎನ್ನುವ ಸಹೋದ್ಯೋಗಿಗಳ ಸಹಕಾರವೇ ಬೇರೆ ಏನನ್ನಾದರೂ ಯೋಚನೆ ಮಾಡಿ ಜಾರಿಗೆ ತರಲು ಸಾಧ್ಯವಾಗುವುದು ನಮಗೆ.
ನಮ್ಮ ಅನುವಾದಕರ ವಾಟ್ಯ್ಸಾಪ್ ಗ್ರುಪ್ಪು ‘ಕನ್ನಡ ಕಣಜ’ದಲ್ಲಿ ಇಬ್ಬರು ಬಿಡುವಾಗಿದ್ದರೆ ಸಾಕು ನಮ್ಮ ಅನುವಾದದ ಕಾಲಕ್ಷೇಪ ಶುರುವಾದಂತೆಯೇ. ಸಾಮಾನ್ಯವಾಗಿ ನಾಲ್ಕಾರು ಜನ ಒಟ್ಟಿಗೆ ಸೇರಿದರೆ ಹೀಗೆ ಕಥೆ ಕಟ್ಟುವುದು ಸಹಜವಾದದ್ದೇ. ಆದರೆ ನಮ್ಮದು ಕಥೆ ಅನುವಾದದ ಕುರಿತಾದ ಮಾತುಕತೆ.
ನಮ್ಮ ಈ ಕಮಿಟಿಯಲ್ಲಿ ಬೇರೆ ಬೇರೆ ವಯೋಮಾನದ, ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುವವರಿದ್ದಾರೆ.
ಈ ಮಕ್ಕಳಿಗಾಗಿ ಅನುವಾದಿಸುವ ಕಾರ್ಯದಲ್ಲಿ ನಮ್ಮ ಕಲ್ಪನೆಯ, ಭವಿಷ್ಯದ ಅನುವಾದದ ಕನಸನ್ನೂ ನಾವು ಕಾಣುತ್ತಿರುತ್ತೇವೆ.
ಹಿಂದಿನವರು ಮಾಡಿದ ಅನುವಾದಗಳು ವರ್ತಮಾನಕ್ಕೂ ಎಷ್ಟು ಸಲ್ಲುತ್ತವೆ, ಈಗಿನ ಮಕ್ಕಳಿಗೆ ಇದು ಎಷ್ಟು ಪ್ರಸ್ತುತ, ನಾವು ಮಕ್ಕಳಾಗಿದ್ದಾಗಿನ ಕೆಲವು ಘಟನೆಗಳಿಗೆ ಹೋಲಿಸಿಕೊಂಡು ನೋಡಿ, ಅನುವಾದವನ್ನು ಪೂರ್ಣಗೊಳಿಸುತ್ತೇವೆ ಆ ಮಾತು ಬೇರೆ.
ನಮ್ಮ ಅನುವಾದಗಳನ್ನು ಬೇರೆಯವರೂ, ಬೇರೆಯವರ ಅನುವಾದಗಳನ್ನು ನಾವು ಪ್ರೀತಿಯಿಂದಲೂ, ವಿಮರ್ಶಾತ್ಮಕ ದೃಷ್ಟಿಯಿಂದಲೂ ಕಂಡಿದ್ದೇವೆ. ಇದರಲ್ಲಿ ಸ್ವ-ವಿಮರ್ಶೆ, ಸ್ವ-ವಿರೋಧಗಳೂ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ನಮ್ಮ ಅನುಭವಗಳಿಗೊದಗಿ ಬಂದ ಘಟನೆಗಳನ್ನು ವರ್ತಮಾನದ ಅನುವಾದಕ್ಕೆ ತೊಡಿಸಿ ನಲಿಯುತ್ತೇವೆ.
ಇದು ಕೂಡ ಮೊನ್ನೆ ಫೆಬ್ರವರಿ 22ರಂದು ನಡೆದ Voluntary translation Exercise ನ ಅನುಭವ ಕಥನವೇ. ಸಾಮಾನ್ಯವಾಗಿ ಪ್ರಥಮ್ ಬುಕ್ಸ್ ನ ಎಲ್ಲಾ ಪುಸ್ತಕಗಳು ದಾನಿಗಳ ನೆರವಿನಿಂದ ಅಭಿವೃದ್ಧಿಯಾಗುವಂತಹವು. ಇಲ್ಲಿ ಆಯಾ ವರ್ಷ, ಇಂತಿಷ್ಟು ಕತೆಗಳು, ಇಂತಿಷ್ಟು ಭಾಷೆಗಳಲ್ಲಿ ಅನುವಾದ ಆಗಬೇಕು ಅನ್ನೋ ನಿರ್ಧಾರ ವರ್ಷಾರಂಭದಲ್ಲೇ ಆಗಿ ಬಿಡುತ್ತವೆ. ಹಲವು ಕಾರಣಗಳಿಂದಾಗಿ ಈ ಸಲ, ಒಂದಷ್ಟು ಕತೆಗಳ ಕನ್ನಡಾನುವಾದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ನಮಗೆ ಇಂತಹ ಒಳ್ಳೊಳ್ಳೆ ಕತೆಗಳನ್ನು ಕನ್ನಡಕ್ಕೆ ತರಲೇಬೇಕೆಂಬ ಉಮೇದು. ಇದೇ ಕುರಿತ ಮನವಿಯನ್ನು ನಮ್ಮ ಪರಿಚಿತ ವಲಯಗಳಲ್ಲಿ ಹರಿ ಬಿಟ್ಟೆವು. ಅದು ಸ್ವಯಂಪ್ರೇರಿತ ಅನುವಾದಕ್ಕೆ ಮುಕ್ತ ಆಹ್ವಾನ ನೀಡುವ ಮೂಲಕ. ಇದಕ್ಕೆ ಯಾವುದೇ ರೀತಿ ಹಣ ನೀಡಲಾಗುವುದಿಲ್ಲ. ಆದರೆ ನಿಮ್ಮ ಸಹಕಾರ ಬೇಕೇಬೇಕು ಎಂದು ಕೇಳಿದ್ದಷ್ಟೇ. ಆ ದಿನ ಬಿಡುವಾಗಿದ್ದವರು ಖುಷಿಯಿಂದ ಬಂದರು.
ತಮಾಷೆ ಅಂದ್ರೆ, ನಾವು ತುಂಬಾ ಆಪ್ತ ವಲಯದಲ್ಲಷ್ಟೇ ಈ ವಿಷಯವನ್ನು ಹರಡಿದ್ದೆವು. ಅದು ತಲುಪಿದ ವ್ಯಾಪ್ತಿ ಮಾತ್ರ ಕಡೆಕಡೆಗೆ ನಮಗೆ ಅಚ್ಚರಿ ತಂದಿದ್ದು ಸುಳ್ಳಲ್ಲ. ನಮಗೇ ಅಚ್ಚರಿಯಾಗುವಂತೆ ಕರ್ನಾಟಕದ ತೀರಾ ರಿಮೋಟ್ ಏರಿಯಾಗಳಿಂದಲೂ ಕರೆಗಳು. ಅಷ್ಟು ದೂರದಿಂದ ಬಂದರೆ ನಿಮಗೆ ನಾವು ಏನೂ ಕೊಡಲಾಗುವುದಿಲ್ಲ ಎಂದರೆ ಕರೆ ಮಾಡಿದವರು ಪರವಾಗಿಲ್ಲ ನಾವು ನಮ್ಮದೇ ದುಡ್ಡಿನಲ್ಲಿ ಬಂದು ಮಾಡಿ ಕೊಡುತ್ತೇವೆ ಎಂದರು. ಈ ಕಮ್ಮಟ ಮುಗಿದ ಮೇಲೆ ಕರೆ ಮಾಡಿದವರು, ನಾವು ಸ್ವಲ್ಪ ತಡವಾಗಿ ಇದನ್ನು ನೋಡಿದೆವು. ಮುಂದೆ ಈ ಥರ ಕಮ್ಮಟ ನಡೆದರೆ ನಮಗೆ ಮರೆಯದೇ ತಿಳಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಮಕ್ಕಳ ಕತೆಗಳು ಮತ್ತು ಅನುವಾದ ಕುರಿತ ಇಂತಹ ಸಮಾನಮನಸ್ಕರ ಆಸಕ್ತಿ ಮತ್ತು ಸಮಯ ನಮಗೆ ಅಮೂಲ್ಯ.
ಆನ್ ಲೈನ್ ಮ್ಯಾಗ್ಜಿನ್ ಒಂದರ ಎಡಿಟರ್ ಕೈಗೆ ನಾವು ನಮ್ಮ ಆಪ್ತ ವಲಯದಲ್ಲಿ ಹರಿಯಲು ಬಿಟ್ಟ ಸಂದೇಶ ತಲುಪಿ ಅವರು ಅದನ್ನು ತುಂಬು ಪ್ರೀತಿಯಿಂದ ಪ್ರಕಟಿಸಿ, ವಿಷಯವನ್ನು ಪಸರಿಸಿದರು. ಇದೆಲ್ಲ ಸರಿ, ಮಾಡಲು ಜಾಗ ಬೇಕಲ್ಲ ಎಂದು ಕನ್ನಡಕ್ಕಾಗಿ ಕೆಲಸ ಮಾಡುವ ‘ಮುನ್ನೋಟ’ದವರನ್ನು ಕೇಳಿದ್ದಕ್ಕೆ ನಿಮ್ಮದೇ ಜಾಗ ಎನ್ನುವಂತೆ ಸ್ಥಳ ಬಿಟ್ಟು ಕೊಟ್ಟರು.
ಸರಿ ಕಾರ್ಯಕ್ರಮ ಶುರುವಾಯಿತು. ಪ್ರಥಮ್ ಬುಕ್ಸ್ ವೈಶಿಷ್ಟ್ಯ ಗೊತ್ತಿರುವ ಇಬ್ಬರನ್ನು ಬಿಟ್ಟರೆ ಮಿಕ್ಕವರು ಹೊಸಬರು. ಆದರೆ ಪ್ರಥಮ್ ಬುಕ್ಸ್ ನ ಚಿಕ್ಕ ಪರಿಚಯ ಮತ್ತು ಒಂದೆರಡು ಪುಸ್ತಕಗಳನ್ನು ಓದಿ ನಮ್ಮ ಬಳಗಕ್ಕೆ ಸೇರಿಯೇ ಬಿಟ್ಟರು. ಪ್ರಥಮ್ ಬುಕ್ಸ್ ಗೂ ಅನುವಾದಕ್ಕೂ ಅವರೆಲ್ಲರಿಗೂ ಅಂತಹ ನೇರವಾದ ಸಂಬಂಧವಿರಲಿಲ್ಲ ಆದರೆ ಈ ಮಕ್ಕಳಿಗಾಗಿ ಅನುವಾದ ಮಾಡುವುದು ಎನ್ನುವುದಿದೆಯಲ್ಲ ಅದು ದೊಡ್ಡದು ನೋಡಿ!
ಅನುವಾದ ಶುರುವಾಯಿತು. ನೋಡ ನೋಡುತ್ತಿದ್ದ ಹಾಗೆ ಎರಡರಿಂದ ಮೂರು ತಾಸಿನೊಳಗೆ ತುಸು ಕಷ್ಟ ಎನಿಸುವಂತಹ ಆರು scriptಗಳು ಸುಲಭವಾಗಿ ಅನುವಾದಗೊಂಡು ಅಂತಿಮ ಕರಡು ನಮ್ಮ ಕೈ ಸೇರಿಯೇ ಬಿಟ್ಟವು.
ಅಲ್ಲಿ ಬಂದಿದ್ದವರೆಲ್ಲ ಅವರ ಜೀವಮಾನದಲ್ಲಿ ಬರೆದ ಪರೀಕ್ಷೆಗಳನ್ನಾದರೂ ಅಷ್ಟು ಸಿರೀಯಸ್ ಆಗಿ ಕೂತು ಬರೆದಿದ್ದರೊ ಇಲ್ಲವೋ ಗೊತ್ತಿಲ್ಲ. ಆದರೆ ಅನುವಾದ ಮುಗಿಸುವ ತನಕ ಮಾತ್ರ ಅವರೆಲ್ಲ ವಿಧೇಯ ವಿದ್ಯಾರ್ಥಿಗಳಂತೆಯೇ ಕೂತಿದ್ದರು.
ಇವರನ್ನಲ್ಲದೇ ಪ್ರಥಮ್ ಬುಕ್ಸ್ ಬಗ್ಗೆ ಪ್ರೀತಿಯ ಭಾವನೆಗಳನ್ನು ಇರಿಸಿಕೊಂಡ ಅನೇಕರನ್ನು ನಾವು ಕಂಡಿದ್ದೇವೆ. ಅನುವಾದ ಮಾಡಿದ್ದಕ್ಕೆ ನಮಗೆ ದುಡ್ಡು ಬೇಡವೇ ಬೇಡ. ನೀವೇ ಯಾವುದಾದರೂ ಶಾಲೆ ಪುಸ್ತಕ ಕೊಟ್ಟು ಬಿಡಿ ಎನ್ನುವವರು, ಸ್ಚೋರಿವೀವರ್ ನಲ್ಲಿ ಕತೆ ಪ್ರಕಟವಾಗುತ್ತಿದ್ದ ಹಾಗೆ ಓದಿ ಎಷ್ಟು ಚೆಂದದ ಚಿತ್ರಗಳು ಎಂದು ಸಂಭ್ರಮ ಪಡುವವರು, ತಮ್ಮ ತಮ್ಮ ಶಾಲೆಯ ಮಕ್ಕಳಿಗೆ ಕತೆಗಳನ್ನು ತೋರಿಸುತ್ತಾ ಓದಿ ಹೇಳುವವರು, ಈ ಕತೆಯನ್ನು ಹೀಗಲ್ಲದೇ ಇನ್ನೊಂದು ಕೋನದಲ್ಲಿ ಅನುವಾದಿಸಬಹುದಿತ್ತು ಎಂದು ಅನುವಾದದ ಕುರಿತಾದ ವಿಭಿನ್ನನೋಟ ಮತ್ತು ಅಭಿಪ್ರಾಯ ಇಟ್ಟುಕೊಂಡವರು, ಮೆಚ್ಚುವ ಮೂಲಕ, ಹಾಗಲ್ಲ ಹೀಗೆ ಎಂದು ತಿದ್ದುವ ಮೂಲಕ ಕನ್ನಡ ಅನುವಾದಗಳ ಉತ್ತಮ ಗುಣಮಟ್ಟದ ನೈತಿಕ ಜವಾಬ್ದಾರಿ ಹೊತ್ತವರು, ನಮ್ಮ ಸಂದೇಹಗಳನ್ನು ಸೂಕ್ತ ಉದಾಹರಣೆ ಮೂಲಕ ಪರಿಹರಿಸಿ ನಮ್ಮನ್ನು ಬೆಳೆಸುವ ಮೂಲಕ ತಾವೂ ಬೆಳೆಯುವ ಅನುವಾದಕರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇವೆ.
ಅನುವಾದದ ಕಲಾಪ ಮುಗಿಸಿ ನಾವು ಮನೆ ಸೇರುವ ಮುನ್ನವೇ ನಮ್ಮ ಕಮ್ಮಟದ ಬಗ್ಗೆ ಟ್ವೀಟರ್ ನಲ್ಲಿ ಟ್ವೀಟ್ ಆದದ್ದರ ಬಗೆಗಿನ ಲಿಂಕ್ ನಮ್ಮ ವಾಟ್ಸ್ಯಾಪ್ ಗೆ ಬಂದಿತ್ತು!