Pratham Books

ನಮ್ಮ ಪುಟ್ಟ ಬೇಟೆಗಾರ!

by Hema Khurshapur

ನಮ್ಮ ಪುಟ್ಟ ಬೇಟೆಗಾರ ಮೊದಲ ಸಲ ಮನೆಯಿಂದ ಹೊರಗೆ ಹೋಗಿದ್ದಾನೆ ದಾರಿ ಬಿಡಿ! ದಾರಿ ಬಿಡಿ! ಅಯ್ಯೋ ನಾವೆಲ್ಲಿ ಅದರ ದಾರಿಗೆ ಅಡ್ಡಲಾಗಿ ಕೂತಿದ್ದೇವೆ ಎಂದು ಅಕ್ಕ-ಪಕ್ಕ ನೋಡುತ್ತೀದ್ದೀರ? ಅಲ್ಲ, ಅಲ್ಲ, ಹಾಗಲ್ಲ. ಬೇಟೆಗಾರ ಮೊದಲ ಸಲ ಹೊರಗೆ ಹೋಗಿದ್ದಕ್ಕೆ ಸ್ವಲ್ಪ ಗಾಬರಿಯಾಗಿದ್ದಾನೆ. ನಿಮ್ಮಲ್ಲಿಗೆ ಬಂದರೆ ಸರಿ ದಾರಿ ತೋರಿಸಿ ನಮ್ಮಲ್ಲಿಗೆ ಕಳುಹಿಸಿ ಕೊಡಿ

ಅಯ್ಯೋ ಏನೂ ತಿಳಿತಿಲ್ಲ. ಏನಿದು ಅಂತೀರ? ತಾಳಿ ಒಂದು ನಿಮಿಷ. ಒಂದು ಪುಟಾಣಿ ಬೆಕ್ಕು ಮನೆಯಿಂದ ಹೊರಗೆ ಬಂದಿದೆ. ಮೂರ್ತಿ ಚಿಕ್ಕದಾದರೂ, ಕೀರ್ತಿ ಕಡಿಮೆ ಅಂತ ಭಾವಿಸಬೇಡಿ! ಒಣಗಿದ ಎಲೆಯನ್ನು ಪುಡಿ ಪುಡಿ ಮಾಡಿ ಬಿಸಾಡಲು, ನಿಮಗೆ ಬರತ್ತಾ? ಇಲ್ಲ ಅಲ್ವ! ಒಬ್ಬರೆ ಇರಲು ಬೇಸರ ಅಂತ ನೀವು ಜೊತೆಗೆ ಹುಡುಕುತ್ತೀರ ಅಲ್ವ… ನಮ್ಮ ಧೀರ ಹಾಗೆಲ್ಲ ಮಾಡುವವನಲ್ಲ. ಯಾಕೆ ಅಂತೀರ? ಬನ್ನಿ, ಇಲ್ಲಿ ಅವನನ್ನು ಭೇಟಿ ಮಾಡಿಸುತ್ತೇನೆ. ಅವನ ಧೈರ್ಯದ ಮುಂದೆ ನಿಮ್ಮ ಧೈರ್ಯಕ್ಕೆ ಬೆಲೆಯೆ ಇಲ್ಲ ಅನಿಸಿದರೆ ಕ್ಷಮೆ ಇರಲಿ. ಯಾಕೆ ಹೇಳಿ? ಅವನು ನಿಮ್ಮ ಪುಟ್ಟ ಬೇಟೆಗಾರನೂ ಹೌದು!

Illustrated by Preetam Dhar, for The Might (Little) Hunter

ಪುಟ್ಟ ಬೇಟೆಗಾರನ ಭೇಟಿ ಆಯ್ತಲ್ಲವೆ. ಅವನ ವಂಶಸ್ಥರ ಬಗೆಗು ಸ್ವಲ್ಪ ತಿಳಿಯೋಣ ಬನ್ನಿ!! ಹಾಲು, ಮೊಸರು ಕದಿವ ವಿಷಯದಲ್ಲಿ ಬೆಕ್ಕು ಎಲ್ಲರಿಂದ ಬೈಯ್ಗುಳ ತಿನ್ನುವುದು ಗೊತ್ತಿರುವ ಸಂಗತಿ. ಕರಿ ಬೆಕ್ಕಾಗಿದ್ದರಂತೂ ಕತ್ತಲಲ್ಲಿ ಒಳಗೆ ಬಂದು ಅಡುಗೆ ಮನೆಯಲ್ಲಿ ಅವಿತು ಕುಳಿತರು ಗೊತ್ತಾಗದು. ಖಾಲಿಯಾದ ಪಾತ್ರೆಗಳನ್ನು ನೋಡಿದಾಗಲೆ ಅದರ ಕೆಲಸ ಬೆಳಕಿಗೆ ಬರುವುದು.

ಹಾಲು ಮೊಸರಿನ ಕಳವಿಗಾಗಿ ಬೆಕ್ಕುಗಳು ಉಪಯೋಗಿಸುವ ಎಷ್ಟೋ ಧೂರ್ತ ಉಪಾಯಗಳು ಅನೇಕರ ಅನುಭವಕ್ಕೆ ಬಂದಿರಬಹುದು. ಮೈಬಣ್ಣದ ಪ್ರಯೋಜನ ಪಡೆದು ಮೈಮರೆಸಿಕೊಂಡು ಬೇಟೆಯಾಡುವುದು ಪ್ರಾಣಿ ವರ್ಗಕ್ಕೆ ಹೊಸದಲ್ಲ. ಆದರೆ ಬೆಕ್ಕು ಮಾತ್ರ ಪರಿಸ್ಥಿತಿಗೆ ಅನುಗುಣವಾಗಿ ಉಪಾಯಗಳನ್ನು ಹುಡುಕುತ್ತದೆಯೇನೊ ಎನ್ನುವಂತೆ ವರ್ತಿಸುತ್ತದೆ.

ತಾಯಿ ಬೆಕ್ಕನ್ನು ನೋಡಿ ಬೆಕ್ಕಿನ ಮರಿಗಳು ಕೂಡ ಕೂಡ ಹೀಗೆ ಹಾಲು ಮೊಸರಿನ ಕಳ್ಳತನ ಮತ್ತು ಇಲಿ ಬೇಟೆಯಾಡುವುದನ್ನು ಕಲಿಯುತ್ತದೆಯೇನೊ ಎನ್ನುವ ಪ್ರಶ್ನೆ ಏಳುತ್ತದೆಯಲ್ಲವೆ? ಇಲ್ಲ ಹಾಗೆಲ್ಲ ಇಲ್ಲ ಬೆಕ್ಕಿನ ಮರಿಗಳು ಪ್ರತಿಯೊಂದನ್ನೂ ಸ್ವಾನುಭವದಿಂದಲೇ ಕಲಿಯಬೇಕಾಗುತ್ತದೆ ಎನ್ನುವುದನ್ನು ಡಾ|| ಗುಸ್ಟೇವ್ ಏಕ್ ಸ್ಟೈನ್ ಮತ್ತು ವ್ಯಾನ್ಸ್ ಪೆಕಾರ್ಡ ಸೇರಿದಂತೆ ಅನೇಕ ತಜ್ಞರು ಬೇರೆ ಬೇರೆ ಪ್ರಯೋಗಳನ್ನು ಮಾಡಿ ಕಂಡುಹಿಡಿದ್ದಾರೆ. 

ತಾಯಿ ಬೆಕ್ಕನ್ನು ಅನುಕರಿಸುವ ಮೂಲಕ ಮರಿಗಳು ಕಲಿಯುವುದಿಲ್ಲ. ತಾಯಿ ಬೇಟೆಯಾಡುವಾಗ ಅದರಲ್ಲಿ ಭಾಗವಹಿಸುವ ಮೂಲಕವೇ ಅವು ಕಲಿಯುತ್ತವೆ.‌ ತಾಯಿಯು ಮರಿಗಳನ್ನು ಯೋಗ್ಯ ಪರಿಸರದಲ್ಲಿ ತಂದಿಟ್ಟು ಸ್ವತಂತ್ರವಾಗಿ ಅನುಭವ ಗಳಿಸಲು ಅವಕಾಶ ಮಾಡಿಕೊಡುತ್ತದೆ.

ಹಾಗಾದರೆ ಬೆಕ್ಕುಗಳು ಇಲಿಗಳ ಶತ್ರುಗಳು ಹೇಗಾಗುತ್ತವೆ? ಇದಕ್ಕೆ ಉತ್ತರವಿಷ್ಟೆ: ಚಲಿಸುತ್ತಿರುವ ಚಿಕ್ಕ ಪದಾರ್ಥಗಳನ್ನು ಬೆನ್ನಟ್ಟಿ ಅವುಗಳ ಮೇಲೆ ಬೀಳುವುದು ಬೆಕ್ಕಿನ ಮರಿಗಳಿಗೆ ಹುಟ್ಟುಗುಣವಾಗಿದೆ. ಇಂಥ ಚಿಕ್ಕ ಚಲಂತ ಪ್ರಾಣಿಗಳ ಮೇಲೆ ರಭಸದಿಂದ ಬಿದ್ದಾಗ ಬೆಕ್ಕಿನ ಮರಿಗಳ ಹಲ್ಲು ಮತ್ತು ಉಗುರುಗಳಿಗೆ ಒಮ್ಮೊಮ್ಮೆ ರಕ್ತವು ತಗಲುತ್ತದೆ. ಅದರ ರುಚಿ ಹತ್ತಿ ಅವು ಆಮೇಲೆ ಕೊಲ್ಲಲು ಕಲಿಯುತ್ತವೆ.

ಇಲಿಯನ್ನು ಕೊಲ್ಲುವ ಸಹಜ ಪ್ರವೃತ್ತಿ ಬೆಕ್ಕುಗಳಿಗಿಲ್ಲ. ಅದು ಕಲಿತು ಬಂದ ಗುಣ ಎಂಬುದರಿಂದ ಬೆಕ್ಕು ಪ್ರಾಣಿಲೋಕದಲ್ಲಿ ಬುದ್ಧಿಶಾಲಿಗಳ ವರ್ಗದಲ್ಲಿ ಸೇರುತ್ತದೆಂದೇ ಅರ್ಥವಾಗುತ್ತದೆ. ಹುಟ್ಟುಗುಣಕ್ಕಿಂತ ಕಲಿತ ಗುಣಕ್ಕೆ ಹೆಚ್ಚು ಮಹತ್ವವಿರುವುದು ಬುದ್ಧಿವಂತ ಪ್ರಾಣಿಗಳ ಲಕ್ಷಣವಾಗಿದೆ. 

Illustrated by Preetam Dhar, for The Mighty (Little) Hunter

ಒಂದು ಸಮಗ್ರ ಪರಿಶೀಲನೆಯಲ್ಲಿ ೧೮ ಬೆಕ್ಕಿನ ಮರಿಗಳನ್ನು ಇಲಿಗಳಿಲ್ಲದ ವಾತಾವರಣದಲ್ಲಿಯೂ ೨೧ ಮರಿಗಳನ್ನು ಮೂಷಕ ಘಾತಕ ವಾತಾವರಣದಲ್ಲಿಯೂ ಬೆಳಸಲಾಯಿತು. ಇಲಿಗಳನ್ನು ಕಾಣದ ೧೮ ಮರಿಗಳನ್ನು ಇಲಿಗಳ ಸಂಗಡ ಆ ಮೇಲೆ ಇರಿಸಿದಾಗ ೧೫ ಮರಿಗಳು ಇಲಿಗಳ ಜೊತೆ ಸ್ನೇಹದಿಂದ ವಾಸಿಸಿದವು; ಮೂರು ಮಾತ್ರ ಇಲಿಗಳನ್ನು ಹಿಡಿಯಲಾರಂಭಿಸಿದವು. 

ಇಲಿಗಳನ್ನು ಕೊಲ್ಲುವ ವಾತಾವರಣದಲ್ಲಿ ಬೆಳೆದ ಬೆಕ್ಕುಗಳೆಲ್ಲವೂ ಇಲಿ ಹಿಡಿಯಲು ಕಲಿತಿದ್ದವು. ಕೇವಲ ಸಸ್ಯಾಹಾರದ ಅಭ್ಯಾಸವುಳ್ಳ ಬೆಕ್ಕುಗಳು ಇಲಿಗಳನ್ನು ಕೊಲ್ಲಲು ಕಲಿತರೂ ಅವು ಇಲಿಗಳನ್ನು ತಿನ್ನಲಿಲ್ಲ ಎಂಬುದು ಇನ್ನೊಂದು ಸೋಜಿಗದ ಸಂಗತಿ.

ಬೆಕ್ಕಿಗೆ ಸ್ವಲ್ಪಮಟ್ಟಿಗೆ ಗಣಿತ ಜ್ಞಾನವೂ ಇದೆ. ಐದು ಮರಿಗಳುಳ್ಳ ಒಂದು ಬೆಕ್ಕಿನ ಪರೋಕ್ಷದಲ್ಲಿ ಒಂದಯ ಮರಿಯನ್ನು ಕದ್ದೊಯ್ದರೆ ತಾಯಿ ಮರಳಿಬಂದಾಗ ಒಂದು ಮರಿ ಕಳೆದುಹೋಗಿದೆಯೆಂದು ಅದು ಕೂಡಲೇ ಕಂಡುಹಿಡಿಯುತ್ತದೆ!

Leave a Reply

Your email address will not be published. Required fields are marked *