Type to search

ನಮಗೂ ಬಾಲವಿದ್ದಿದ್ದರೆ?

  • March 17, 2020
  • admin
Share

by Hema D Khurshapur

ಗುಡಿಸಿ, ಸಾರಿಸಿದ ಮನೆ ಅಂಗಳ ಗಲೀಜಾದರೆ ನಾವು, ನೀವೆಲ್ಲಾ ಜಗಳ ಕಾಯುವುದು ಸಾಮಾನ್ಯ. ಪಾಪ ನಮ್ಮ ಠಮಿಗೆ ಈಗ ಅದರ ಅಂಗಳದಲ್ಲಿ ಗಲೀಜು ಮಾಡಿದ್ದು ಯಾರು ಎನ್ನುವ ಪ್ರಶ್ನೆ. ಅದಕ್ಕಾಗಿ ಠಮಿ ಒಂದೊಂದರದೇ ಹಿಕ್ಕೆಗಳನ್ನು ನೋಡುತ್ತಾ, ಇದು ಅದೇನಾ ಅಂತ ಗುರುತಿಸೋ ಸವಾಲು ಎದುರಿಸುತ್ತಿದೆ. ಇದಲ್ಲ ಅದಿರಬಹುದಾ ಎನ್ನುವ ಠಮಿಯ ಈ ಹುಡುಕಾಟದಲ್ಲಿ ಯಾವ ಪ್ರಾಣಿ, ಪಕ್ಷಿಗಳಿಗೂ ಇಲ್ಲದ ಈ ತೊಳೆದುಕೊಳ್ಳುವ ರೂಢಿ, ಮನುಷ್ಯರಿಗೆ ಮಾತ್ರ ಬಂದಿದ್ದು ಹೇಗೆ ಎನ್ನುವುದಕ್ಕೂ ಉತ್ತರವಿದೆ ನೋಡಿ

ಕೇವಲ  ಹಿಕ್ಕೆ ನೋಡಿ ಯಾವ ಪಕ್ಷಿ, ಯಾವ ಪ್ರಾಣಿ ಎಂದು ಗುರುತಿಸಿದರೆ ಸಾಕೇ? ಸ್ವಚ್ಛವಾಗಿರುವುದು ಠಮಿಯ ಕೆಲಸ ಮಾತ್ರವೇ? ಹಿಕ್ಕೆ ಹಾಕಿದ ಮೇಲೆ ಪಕ್ಷಿಗಳು, ಕಕ್ಕ ಮಾಡಿದ ಮೇಲೆ ಪ್ರಾಣಿಗಳೇಕೆ ಮನುಷ್ಯರಂತೆ ಸ್ವಚ್ಛ ಮಾಡಿಕೊಳ್ಳುವುದಿಲ್ಲ ಎನ್ನುವ ವಿಷಯವೇ ಕುತೂಹಲಭರಿತವಾಗಿದೆ.

Illustrations by Madhuri Purandare

ಸಾಮಾನ್ಯವಾಗಿ, ಪ್ರಾಣಿ ಪಕ್ಷಿಗಳಲ್ಲಿ ಶೌಚ ಮಾಡಿದ ಮೇಲೆ ತೊಳೆಯುವ ಪದ್ಧತಿ ಇಲ್ಲದಿರುವಾಗ, ಮಾನವನಲ್ಲಿ ಏಕೆ ಮತ್ತು ಹೇಗೆ ಈ ಜಾಣತನ ಕಾಣಿಸಿಕೊಂಡಿತು? ಈ ಹಿನ್ನೆಲೆಯಲ್ಲಿ ಮೂಡುವ ಮೊದಲ ಪ್ರಶ್ನೆ ಯಾಕೆ ತೊಳೆದುಕೊಳ್ಳಬೇಕು ಎನ್ನುವುದು. 

ಯಾವ ಪ್ರಾಣಿ ಪಕ್ಷಿಯೂ ಮಾಡದ ಕೆಲಸವನ್ನು ಮನುಷ್ಯರೇಕೆ ಅತಿ ಗಂಭೀರವಾಗಿ ಹಚ್ಚಿಕೊಂಡಿದ್ದಾರೆ? ಜಗತ್ತಿನಾದ್ಯಂತ ಶೌಚದ ನಂತರ ಶುಚಿಮಾಡಿಕೊಳ್ಳಲು ನೀರು, ಕಾಗದ, ಎಲೆಗಳು, ಉಣ್ಣೆ, ಮರಳು ಇತ್ಯಾದಿ ಹಲವಾರು ಬಗೆಯ ಸಂಪತ್ತುಗಳನ್ನು ಉಪಯೋಗಿಸುವ ಕ್ರಮಗಳು ರೂಢಿಯಲ್ಲಿವೆ. 

ಆಯಾ ಪರಿಸರಕ್ಕೆ ತಕ್ಕಂತೆ ಈ ಪರಿಕರಗಳ ಉಪಯೋಗ ವಿಕಾಸಗೊಂಡಿದೆ ಎನ್ನಬಹುದು. ಉದಾಹರಣೆಗೆ, ನೀರನ್ನು ಉಪಯೋಗಿಸಲು ಕಷ್ಟವಾಗುವ ಶೀತಲ ಪ್ರದೇಶಗಳಲ್ಲಿ ಕಾಗದವನ್ನೂ, ನೀರಿನ ಅಭಾವ ಇರುವ ಮರಳುಗಾಡುಗಳಲ್ಲಿ ಮರಳನ್ನೇ ಉಪಯೋಗಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳಲಾಗಿದೆ. 

ಪ್ರತಿ ಸಮುದಾಯಕ್ಕೂ ತಾವು ಅಳವಡಿಸಿಕೊಂಡ ರೂಢಿಯಿಂದಲೇ ನೆಮ್ಮದಿ! ನೀರಿನ ವಿನಾ ಬೇರಾವುದರಿಂದಲೂ ಮನಸ್ಸಿಗೆ ತೃಪ್ತಿಯಾಗುವಷ್ಟು ಸ್ವಚ್ಛವಾಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಭಾರತೀಯರ ನಂಬಿಕೆ. 

ಇದು ಕೇವಲ ದುರ್ವಾಸನೆಯನ್ನು ತೊಡೆದು ಹಾಕಲು ಎನ್ನಲಾಗದು. ಮನುಷ್ಯ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಲು ಮುಖ್ಯ ಕಾರಣ ಬಾಲ ಇಲ್ಲದಿರುವುದು!

ದೊಡ್ಡವರಿಗೆ ಅಲ್ಲದಿದ್ದರೂ ಮಕ್ಕಳಿಗಾದರೂ ಒಂದೊಂದು ಬಾಲ ಇರಬೇಕಿತ್ತು ಅಲ್ವ! ಈ ಚಂಬು ಬಾಲ ನೋಡಿ ಎಷ್ಟು ಮುದ್ದಾಗಿದೆ. ಮಕ್ಕಳಿಗೆಲ್ಲ ಹೀಗೊಂದು ಬಾಲ ಇದ್ದಿದ್ದರೆ, ತುರುಕ್ ಇಲಿಯಂತೆ ಮಕ್ಕಳೂ ಕುಣ್ಕೊಂಡು ಕುಣ್ಕೊಂಡು ಓಡಾಡುವಾಗಲೆಲ್ಲ ಅದಕ್ಕೆ ತಾಳ ಹಾಕುವಂತೆ ಬಾಲವೂ ಟೊಂಯ್ ಟೊಂಟ್ ಅಂತ ಪೆಂಡ್ಯೂಲಮ್ ಥರ ಆಡ್ತಾ ಇದ್ದರೆ ಆಹಾ ಕಣ್ಣಿಗೆ ಹಬ್ಬ…

ಬಾಲದ ಕಥೆ ಇರಲಿ. ಸ್ವಚ್ಛತೆ ಕಡೆಗೆ ಬರೋಣ .

Illustrations by Madhuri Purandare

ನಮ್ಮನ್ನೂ ಒಳಗೊಂಡು, ಸಾವಿರಾರು ಸಸ್ತನಿಗಳು ತಮ್ಮ ಆಹಾರವನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುವುದಿಲ್ಲ; ಹಾಗಾಗಿ ನಾವು ಹೊರಹಾಕುವ ಚರಟದಲ್ಲಿರುವ ಶೇಶಾಹಾರವನ್ನೇ ತಿಂದು ಬದುಕುವ ಸಾವಿರಾರು ಕೀಟಗಳು ವಿಕಾಸಗೊಂಡಿವೆ. 

ಆ ಕೀಟಗಳಿಗೆ ಈ ಆಹಾರವೇ ಮೃಷ್ಟಾನ್ನ; ಅದನ್ನು ಅವು ಹುಡುಕುವುದೇ ನಾವು ಅಸಹ್ಯ ಪಡುವ ಚರಟದ ವಾಸನೆಯ ಜಾಡು ಹಿಡಿದು. ಅದು ಸಿಕ್ಕಾಗ, ಅದರಲ್ಲಿ ಮೊಟ್ಟೆಯಿಡುತ್ತವೆ; ಅವುಗಳಿಂದ ಹೊರಬಂದ ಹುಳುಗಳು ಅದನ್ನು ತಿಂದು ಬೆಳೆಯುತ್ತವೆ. 

ಸ್ವಾಭಾವಿಕವಾಗಿ ತಮ್ಮ ಆಹಾರವನ್ನು ಹುಡುಕಿ ಹೊರಟ ಅಂತಹ ಕೀಟಗಳು ಅದು ಎಲ್ಲೆ ಇದ್ದರೂ-ಭೂಮಿಯ ಮೇಲಾಗಲಿ, ಪ್ರಾಣಿಯ ದೇಹದಲ್ಲಾಗಲಿ, ಅದರೊಳಗೆ ಮೊಟ್ಟೆ ಇಡುವಂತೆ ವಿಕಾಸಗೊಂಡಿರುತ್ತವೆ. ಹಾಗೆ ಪ್ರಾಣಿಯ ದೇಹದೊಳಗೆ ಇಟ್ಟ ಮೊಟ್ಟೆಗಳಿಂದ ಹುಳುಗಳು ಹೊರ ಬಂದರೆ ಜೀರ್ಣಾಳದಲ್ಲಿ ಆಗಬಹುದಾದ ದುರಂತವನ್ನು ಊಹಿಸಿಕೊಳ್ಳಿ.

ಅಂತಹ ದುರಂತಗಳನ್ನು ತಡೆಯುವಲ್ಲಿ ಬಹುಪಾಲು ಸಸ್ತನಿಗಳಲ್ಲಿ ಬಾಲ ಸಹಾಯಕ್ಕೆ ಬರುತ್ತದೆ. ಉದಾಹರಣೆಗೆ, ಹಸು, ನಾಯಿ, ಕುದುರೆ, ಆನೆ ಮುಂತಾದ ಪ್ರಾಣಿಗಳಲ್ಲಿ ಶೌಚ ಮುಗಿಸಿದ ತಕ್ಷಣವೆ ತಮ್ಮ ಬಾಲದಿಂದ ದ್ವಾರವನ್ನು ಮುಚ್ಚಿ ರಕ್ಷಣೆ ಪಡೆಯುತ್ತವೆ. ಕೆಲವು ಬೆಕ್ಕುಗಳು ತಾವು ಹಾಕಿದ ಮಲದ ಮೇಲೆ ಹಿಂಗಾಲುಗಳಿಂದ ಮಣ್ಣು ಹಾರಿಸಿ ಮುಚ್ಚುವ ಕೆಲಸ ಮಾಡುತ್ತವೆ ಎಂದು ನಂಬಲಾಗಿದೆ. ಆದರೆ ಅವೂ ಸಹ ತಮ್ಮ ಅಂಡನ್ನು (ಬಿಟ್ಟು ಬೊಟ್ಟು ಹೇಗೆ ಸುಧಾರಿಸಿದ? ಕತೆಯಲ್ಲಿ ಬರುವ ಆಂಡೂ! ಅಲ್ಲ ಮತ್ತೆ) ತೊಳೆದುಕೊಳ್ಳುವುದಿಲ್ಲ. 

Illustrations by Madhuri Purandare

ಹಾಗಾಗಿಯೇ ಶೌಚ ಮುಗಿಸಿ ಕೂಡಲೇ ಬಾಲವನ್ನು ಅತ್ತಿತ್ತ ಓಲಾಡಿಸಿ, ದೇಹದ ಮೇಲೆ ಕೂತು ಹೊಂಚು ಹಾಕಿ ಕಾಯುವ ಕೀಟಗಳನ್ನು ಓಡಿಸುತ್ತವೆ. ಹೀಗೆ ಬಹುಪಾಲು ಪ್ರಾಣಿಗಳಲ್ಲಿ ಬಾಲ ವಿಕಾಸಗೊಂಡಿದೆ. ಅದರಿಂದಾಗಿಯೇ ಆ ಕೀಟಗಳಿಂದ ಒದಗಬಹುದಾದ ಕಾಟದಿಂದ ಅವು ತಪ್ಪಿಸಿಕೊಳ್ಳುತ್ತವೆ. ಆದರೆ ಬಾಲವಿಲ್ಲದ ನಾವು, ಶೌಚದ ನಂತರ ತಕ್ಷಣ ತೊಳೆಯದಿದ್ದಲ್ಲಿ ವಾಸನೆ ಹರಡಿ ಅಂತಹ ಕೀಟಗಳನ್ನು ಆಕರ್ಷಿಸಿ, ಅವುಗಳ ದಾಳಿಗೆ ಬಲಿಯಾಗುವ ಸಾಧ್ಯತೆಗಳಿವೆ.

ಅದನ್ನು ತಪ್ಪಿಸಲೆಂದೇ ನಮ್ಮಲ್ಲಿ ತೊಳೆದು ಸ್ವಚ್ಛವಾಗಿರಿಸಿಕೊಳ್ಳುವ ಅಭ್ಯಾಸ ವಿಕಾಸಗೊಂಡಿರುವುದು. ಹಾಗೆ ಸ್ವಚ್ಛತೆ ಕಾಪಾಡಲಾಗದ ಕೆಲವು ಸಂದರ್ಭಗಳಲ್ಲಿ, ಕಾಕೋಬಿಯಸ್ ಎಂಬ ಕೀಟಗಳು ಒಳಗೆ ಪ್ರವೇಶಿಸಿ, ರಕ್ತಸ್ರಾವವಾಗಿ ಜೀವಕ್ಕೆ ಕಂಟಕ ತಂದಿರುವ ಉದಾಹರಣೆಗಳನ್ನು ವಿಜ್ಞಾನಿಗಳು, ವೈದ್ಯರು ದಾಖಲಿಸಿದ್ದಾರೆ ಕೂಡ. 

ನಮ್ಮ ಹಾಗೆ ಬಾಲವಿಲ್ಲದ ಚಿಂಪಾಂಜಿಗಳಲ್ಲೂ ಹಲವು ರೀತಿಯ ಸ್ವಚ್ಛತಾ ಕ್ರಮಗಳು ರೂಢಿಯಲ್ಲಿವೆ. 

ಶೌಚದ ತಕ್ಷಣ ತೊಳೆದುಕೊಳ್ಳುವ ಅಭ್ಯಾಸ ನಮ್ಮಲ್ಲಿ ರೂಢಿಗೊಂಡಿರುವುದು ವಿಕಾಸವು ನಮಗೆ ಬಾಲವನ್ನು ಕರುಣಿಸದ ಕಾರಣ ಎನ್ನಬಹುದು. ಇದರಿಂದಾಗಿಯೆ ನಾವು ಶೌಚಾಲಯದಲ್ಲಿ ಜಲಸಂಪತ್ತನ್ನೂ, ಸಮಯವನ್ನೂ ವ್ಯಯಿಸುವುದು. 

ಒಂದು ವೇಳೆ ಆಂಜನೇಯನ ಹಾಗೆ ಅಥವಾ ಹಾಲಿವುಡ್ ಸಿನೆಮಾ ಅವತಾರ್ನಲ್ಲಿನ ಮಾನವ ಜೀವಿಗಳ ಹಾಗೆ ನಮಗೂ ಬಾಲವಿದ್ದಿದ್ದರೆ, ನಮ್ಮ ಮುಂಜಾನೆಯ ಅಭ್ಯಾಸವೇ ಬೇರೆಯಾಗುತ್ತಿತ್ತು.

ಈಗಲಾದರೂ ಗೊತ್ತಾಯಿತಲ್ಲ ಸ್ವಚ್ಛತೆಗೆ ಯಾಕಿಷ್ಟು ಮಹತ್ವ ಅಂತ! ಪಾಪ ಚಂಬುಗೆ ಓದಲು ಬರುವುದಿಲ್ಲ. ಹಾಗೇನಾದರೂ ಅದು ಓದಲು ಕಲಿತಿದ್ದರೆ ಇದನ್ನು ಓದಿ ಇನ್ನೊಮ್ಮೆ ಯಾರ ಮನೆ ಬಾಗಿಲಲ್ಲೂ ಕಕ್ಕ ಮಾಡುತ್ತಿರಲಿಲ್ಲ!! 

(ಕೆ. ಎನ್. ಗಣೇಶಯ್ಯ ಅವರ ಲೇಖನವೊಂದನ್ನು ಆಧರಿಸಿ ಬರೆದ ಬರೆಹ)

 

Hema D Khurshapur is an Editor (Kannada) at Pratham Books 

 

Click here to read the book on StoryWeaver. 

 

Leave a Comment

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here