30th September is celebrated as International Translation Day. It was launched as an idea to show solidarity of the worldwide translation community in an effort to promote the translation profession in different countries. This is an opportunity to display pride in a profession that is becoming increasingly essential in the era of progressing globalisation. Pratham Books’ language editors and translators are celebrating this day through a series of blog posts.
**********
ಅನುವಾದ ಭಾವಾನುವಾದರೆ ಸಾರ್ಥಕ
ಬರಹ: ಹೇಮಾ ಡಿ.ಖುರ್ಸಾಪುರ
ನರಭಕ್ಷಕ ಚಿರತೆ, ಹುಲಿ ಬೇಟೆ, ಶಿಕಾರಿ ಕುರಿತಾಗಿ ಕೆನೆತ್ ಆಂಡರ್‌ಸನ್ ಅವರು ಇಂಗ್ಲಿಷ್‌ನಲ್ಲಿ ಬರೆದ ಕತೆಗಳನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ‘ಕಾಡಿನ ಕತೆಗಳು’ ಎಂದು ಭಾವಾನುವಾದ ಮಾಡಿದ್ದಾರೆ. ಅದು ಅನುವಾದವಾಗದೆ ಭಾವಾನುವಾದ ಆದದ್ದು ಹೇಗೆ ಎಂದು ಪುಸ್ತಕದ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ.‘‘ ನಾನು ಹುಟ್ಟುವ ವೇಳೆಗಾಗಲೇ ಈ ಶಿಕಾರಿ ಯುಗದ ಕೊಟ್ಟ ಕೊನೆಯ ತುದಿ ಬಂದಿತ್ತು. ಆದರೂ ಈ ಕತೆಗಳನ್ನು ಅನುಭವಿಸಿ ಆಸ್ವಾದಿಸುವ ಮಟ್ಟಿಗಾದರೂ ನನಗೆ ಕಾಡಿನ ಅನುಭವಗಳ ಪರಿಚಯವಾಯ್ತು. ಕೆನೆತ್ ಆಂಡರ್‌ಸನ್ನರ ಕತೆಗಳ ಹಿನ್ನೆಲೆ ಪರಿಸರ, ಪಾತ್ರಗಳು ಎಲ್ಲ ನನಗೆ ನನ್ನ ಅನುಭವವೇ ಎನ್ನುವಷ್ಟು ಚಿರಪರಿಚಯ. ಚೋರ್ಡಿ. ಬೆಳ್ಳಂದೂರ, ಪಿಕಾರಿಪುರ, ಶೆಟ್ಟಿಹಳ್ಳಿ ನಾವು ಓಡಾಡಿದ, ಆ ಕಾಡುಗಳಲ್ಲಿ ಲಾಟರಿ ಹೊಡೆದ ಜಾಗಗಳು. ನಾವು ಕಾಡು ತಿರುಗಲಾರಂಭಿಸಿದಾಗ ನರಭಕ್ಷಕಗಳ ಯುಗ ಮುಗಿದಿತ್ತೆನ್ನುವುದೊಂದನ್ನು ಬಿಟ್ಟರೆ ಮಿಕ್ಕಿದ್ದೆಲ್ಲ ನಾನೇ ಆಂಡರ್‌ಸನ್ನರ ಜೊತೆ ಇದ್ದೆನೇನೋ ಎನ್ನುವಷ್ಟು ನನಗೆ ಗೊತ್ತು.
ತರ್ಜುಮೆ ಮಾಡ ಹೋದಾಗ ಇದರಿಂದ ನನಗಾದ ತೊಂದರೆ ಎಂದರೆ ಆಂಡರ್‌ಸನ್ನರ ಹೆಸರಿನಲ್ಲಿ ನನ್ನ ಅನುಭವಗಳು, ವಿವರಗಳು ಸೇರತೊಡಗಿದವು. ಹೀಗಾದ್ದರಿಂದಲೇ ಈ ತರ್ಜುಮೆಗಳನ್ನು ಭಾವಾನುವಾದ ಎಂದ ಕರೆಯಬೇಕಾದ ಅನಿವಾರ್ಯತೆ ಉಂಟಾಯ್ತು. ಈ ಕಥೆಗಳಲ್ಲಿ ಆಂಡರ್‌ಸನ್ನರ ಮೂಲಕಥೆಗಳ ಅಂತಃಸ್ಸತ್ವಕ್ಕೆ ತಿಲಮಾತ್ರವೂ ಚ್ಯುತಿ ಬರದಹಾಗೆ ಇಲ್ಲಿ ಪ್ರತಿನಿಧಿಸಿದ್ದೇನೆನ್ನುವುದೊಂದೇ ನನಗೆ ಸಮಾಧಾನದ ವಿಷಯ. ಮಕ್ಕೀಕಾಮಕ್ಕಿ ತರ್ಜುಮೆಗಿಂತ ಈ ರೀತಿ ಆಂಡರ್‌ಸನ್ನ ರನ್ನು ಪ್ರತಿನಿಧಿಸುವುದೇ ಆಂಡರ್‌ಸನ್ನರಿಗೆ ಹೆಚ್ಚು ನ್ಯಾಯ ದೊರಕಿಸಿದಂತೆ ಎಂದು ನಾನು ತಿಳಿದಿದ್ದೇನೆ,’’ ಎಂದು.
ಮೇಲಿನ ಸಾಲುಗಳನ್ನು ಓದುವಾಗ ಅನುವಾದ ಮೂಲ ಕೃತಿ ರಚನೆಗಿಂತ ಸೃಜನಶೀಲವಾದದ್ದು ಎಂದು ಅರ್ಥವಾಗುತ್ತದೆ. ಇದು ನನಗೆ ಅರ್ಥವಾಗಿದ್ದು, ದಿನಪತ್ರಿಕೆಯೊಂದರ ಸಾಪ್ತಾಹಿಕಕ್ಕೆ ಮಕ್ಕಳಿಗಾಗಿ ಪುಟವೊಂದನ್ನು ನಿರ್ವಹಿಸುತ್ತಿದಾಗ. ಮೊಸಳೆ ಕುರಿತಾದ ಅನುವಾದ ಭಾವಾನುವಾದದ್ದು ಅದರಲ್ಲಿ ಬಾಲ್ಯದ ನನ್ನ ಅನುಭವವೂ ಸೇರಿದ್ದರಿಂದ. ‘Why crocodiles are best parents in the world’ ಭಾಗವನ್ನು ಅನುವಾದಿಸುವಾಗ ಚಿಕ್ಕಂದಿನಲ್ಲಿ ನದಿ ತೀರದಲ್ಲಿ ಅಸಹ್ಯವಾಗಿ ಬಾಯಿ ತೆರೆದು ಬಿದ್ದಿರುತ್ತಿದ್ದ ಮೊಸಳೆಗಳನ್ನು ದಿನವೂ ನೋಡುತ್ತಿದ್ದ ನನಗೆ ಅವುಗಳ ಬಗ್ಗೆ ಅಷ್ಟೇನೂ ಅಪ್ತತೆ ಇರಲಿಲ್ಲ. ಆದರೆ ಅವು ತಮ್ಮ ಮರಿಗಳಿಗೆ ಸ್ನಾನ ಮಾಡಿಸುವುದನ್ನು ನೋಡಿದಾಗ ಆವತ್ತಿಗೆ ನನ್ನಲ್ಲಿ ಮೂಡಿದ ಭಾವನೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವಿರಲಿಲ್ಲ. ಆ ಘಟನೆಯ ನಂತರ ಇಪ್ಪತ್ತು ವರ್ಷಗಳ ನಂತರ ನಾನು, ‘‘ಮೊಸಳೆಗಳು ಜಗತ್ತಿನ ಶ್ರೇಷ್ಠ ಅಪ್ಪ-ಅಮ್ಮ’’ ಬರಹದಲ್ಲಿ ಅವನ್ನು ಬರೆದಿದ್ದು ಹೀಗೆ. “ಮಕ್ಕಳು ದೊಡ್ಡ ತಪ್ಪು ಮಾಡಿ ಹ್ಯಾಪು ಮೋರೆ ಹಾಕಿಕೊಂಡು, ಕಣ್ಣೀರು ಸುರಿಸುತ್ತಾ ಅಪ್ಪ-ಅಮ್ಮ ನಮ್ಮನ್ನು ಹೊಡೆಯದಿದ್ದರೆ ಸಾಕು ಎಂದು ಗದರುವು ಮುನ್ನವೇ ಗೋಳೋ ಎನ್ನುತ್ತಿದ್ದರೆ, ಪ್ರತಿ ತಂದೆ-ತಾಯಿ ಜೀವಮಾನದಲ್ಲಿ ಒಮ್ಮೆಯಾದರೂ ಇಂತಹ ಮಕ್ಕಳಿಗೆ ಬೈದಿರುತ್ತಾರೆ ಸಾಕು ನಿಲ್ಲಿಸು ನಿನ್ನ ಈ ಮೊಸಳೆ ಕಣ್ಣೀರನ್ನು ಎಂದು. ಅಂದರೆ ಮೊಸಳೆ ಕಣ್ಣೀರು ಸುರಿಸುವುದು ನೋವಿನಿಂದ, ಬೇಜಾರಿನಿಂದ ಅಲ್ಲ. ಮೊಸಳೆಯ ಭಾವನೆಗಳಿಗೂ ಕಣ್ಣೀರಿಗೂ ಸಂಬಂಧವಿಲ್ಲ. ಆದರೂ ‘ಮೊಸಳೆ ಕಣ್ಣೀರು’ ನುಡಿಗಟ್ಟಾಗಿ ಬಳಕೆಯಲ್ಲಿದೆ. ಮೊಸಳೆಗಳು ಬಹುಕಾಲ ನೀರಿನಿಂದ ಮೇಲೆ ಇದ್ದಾಗ ಕಣ್ಣೀರು ಹಾಕುತ್ತವೆ. ಕಣ್ಣ ಪಾಪೆಗಳು ಒಣಗದಂತೆ ಮಾಡಲು ಗ್ರಂಥಿಗಳು ನೀರನ್ನು ಸುರಿಸುತ್ತವೆ ಮತ್ತು ನೀರಿನಿಂದ ಹೊರಗಿದ್ದಾಗ ಆಹಾರ ತಿನ್ನುವಾಗಲೂ ಮೊಸಳೆ ಕಣ್ಣುಗಳಿಂದ ನೀರು ಸುರಿಯುತ್ತದೆ. ಇದಕ್ಕೆ ಕಣ್ಣಿನ ರಕ್ಷಣೆ, ಆಹಾರ ಸೇವಿಸುವಾಗ ಉಂಟಾಗುವ ಒತ್ತಡ ಮೊದಲಾದವು ಕಾರಣಗಳಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಎಲ್ಲ ಮೊಸಳೆಗಳು ಒಂದು ರೀತಿ ಅಡಾವುಡಿ ಮಾಡಿ ಸುಳ್ಳೇ ಸುಳ್ಳು ಕಣ್ಣೀರು ಸುರಿಸುವ ಮಕ್ಕಳಂತಾದರೆ, ತಮ್ಮ-ತಮ್ಮ ಮಕ್ಕಳು ವಿಷಯದಲ್ಲಿ ಅಪ್ಪ-ಅಮ್ಮ ಮೊಸಳೆಗಳು ಮಾತ್ರ ತುಂಬಾ ಅಂದ್ರೆ ತುಂಬಾ ಒಳ್ಳೆಯವು. ಮೊಸಳೆಗಳು ನೋಡಲು ಭಯಾನಕವಾಗಿದ್ದರೂ ತಮ್ಮ ಮಕ್ಕಳ ಜತೆ ತುಂಬಾ ಶಾಂತ ರೀತಿಯಿಂದ ವರ್ತಿಸುತ್ತವೆ. ಮಕ್ಕಳು ಸ್ನಾನ ಮಾಡಿಸುವಾಗ ವಿಪರೀತ ಹಠ ಮಾಡುತ್ತವೆ ಎಂದು ಬೈಯ್ದುಕೊಳ್ಳುವ ಅಮ್ಮಂದಿರು ತಾಯಿ ಮೊಸಳೆಯಿಂದ ನೋಡಿ ಕಲಿಯಬೇಕಾದದ್ದು ತುಂಬಾ ಇದೆ ಎನಿಸುತ್ತದೆ. ಮರಿ ಮೊಸಳೆಗಳು ಮರಳಿನಲ್ಲಿ, ಜೌಗಿನಲ್ಲಿ ಆಟವಾಡಿ ಮೈಯ್ಯೆಲ್ಲಾ ಕೆಸರು ಆಡಿಕೊಂಡರೆ ತಾಯಿ ಮೊಸಳೆ ಚೂರೂ ಬೈಯ್ಯದೇ ಅವುಗಳನ್ನೆಲ್ಲ ಬಾಯಿಯಲ್ಲಿ ತೆಗೆದುಕೊಂಡು (ಒಂದು ಸಲಕ್ಕೆ ಕನಿಷ್ಟ ೧೮ ರಿಂದ ೨೦ ಮರಿಗಳನ್ನು ಒಟ್ಟಿಗೆ) ನದಿಗೆ ಸ್ನಾನ ಮಾಡಿಸಲು ತೆಗೆದುಕೊಂಡು ಹೋಗುತ್ತದೆ. ಹರಿವ ನೀರಿನ ಸಮೀಪ ನಿಂತು ಬಾಯಿ ತೆರೆದು ನಿಧಾನವಾಗಿ ಮರಿಗಳ ತಲೆ ಮೊದಲು ನೀರಿನಲ್ಲಿ ಬೀಳುವಂತೆ ಬಿಡುತ್ತದೆ. ಮರಿಗಳ ಉರುಟು ಮೈಮೇಲಿನ ಮರಳು ಹೋಗುವವರೆಗೆ ಸ್ನಾನ ಮಾಡಿಸುತ್ತದೆ. ಗಂಡು ಮೊಸಳೆಯೂ ಮಕ್ಕಳ ವಿಷಯದಲ್ಲಿ ತುಂಬಾ ನಿಧಾನವಾಗಿ, ಸೂಕ್ಷ್ಮವಾಗಿ ವರ್ತಿಸುತ್ತದೆ. ಮೊಟ್ಟೆಗಳು ಒಡೆದು ಮರಿ ಹೊರ ಬರುವಾಗ ಮೊಟ್ಟೆ ಒಡೆಯಲು ಸಹಾಯ ಮಾಡಿ ಮರಿಗಳಿಗೆ ಗಾಯವಾಗದಂತೆ ನೋಡಿಕೊಳ್ಳುತ್ತದೆ. ಮರಿಗಳಿಗೆ ನೋವಾಗದಂತೆ ತಂದೆ ಮೊಸಳೆ ವಹಿಸುವ ಕಾಳಜಿಯನ್ನು ನೋಡಿದರೆ ಎಂಥವರೂ ತಲೆದೂಗುತ್ತಾರೆ,” ಎಂದು. ಹೀಗೆ ಅನುವಾದ ಭಾನುವಾದ ಕ್ಷಣ ನಿಜಕ್ಕೂ ಸಾರ್ಥಕ ಎನಿಸುತ್ತದೆ.